ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ

Update: 2022-12-01 08:54 GMT

ಕುಂದಾಪುರ, ಡಿ.1: ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ವಲಯ, ಕರ್ನಾಟಕ ಪಬ್ಲಿಕ್ ಶಾಲೆ ಕೋಟೇಶ್ವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯನ್ನು ಗುರುವಾರ ಕೋಟೇಶ್ವರ ಕೆಪಿಎಸ್ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು.

ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿದ ಕೋಟೇಶ್ವರ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಚಂದ್ರಿಕಾ ಧನ್ಯ ಮಾತನಾಡಿ, ವಿದ್ಯೆ ಎಂಬುದು ಕೇವಲ ಅಕ್ಷರ ಹಾಗೂ ವಿಷಯಗಳ ಸಂಗ್ರಹವಲ್ಲ. ಓರ್ವನ ವ್ಯಕ್ತಿತ್ವ ಅರಳಸಿ ಆತನಲ್ಲಿರುವ ಸುಪ್ತ ಪ್ರತಿಭೆಯನ್ನು ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಿ, ಸರ್ವಾಂಗೀಣ ಬೆಳವಣಿಗೆಗೆ ಕಾರಣ ವಾಗುವುದಾಗಿದೆ. ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿಯು ಕೇವಲ ಸ್ಪರ್ಧೆಯಾಗಿರದೆ ಕಲಿಕೆಯಾಗಬೇಕು ಎಂದು ಹೇಳಿದರು.

ಮಕ್ಕಳ ಸಮಾಜಮುಖಿ ಬೆಳವಣಿಗೆಯಲ್ಲಿ ಪೋಷಕರು, ಶಿಕ್ಷಕರ ಕರ್ತವ್ಯ ಹೆಚ್ಚಿದೆ. ವಿದ್ಯಾರ್ಥಿಗಳಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ಬೆಳೆಸುವ ಕಾರ್ಯ ವಾಗಬೇಕು. ಸ್ಪರ್ಧೆಯಲ್ಲಿ ಗೆಲುವಿನ ತೀರ್ಪಿಗೆ ಮಹತ್ವ ನೀಡದೆ ನಿರಂತರವಾದ ಕಲಿಕೆಗೆ ಒತ್ತು ನೀಡುವ ಜೊತೆಗೆ ತಾವು ಕಲಿತ ವಿಚಾರವನ್ನು ಇನ್ನೊಬ್ಬರಿಗೆ ಕಲಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರಹೊಮ್ಮಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೆ ಸ್ಪರ್ಧಾ ಮನೋಭಾವದೊಂದಿಗೆ ಸ್ವೀಕರಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭ ಕಾರ್ಯಕ್ರಮದ ಮಹಾಪೋಷಕರಾದ ಉದ್ಯಮಿ ಸುರೇಂದ್ರ ಶೆಟ್ಟಿ, ಚಂದ್ರಿಕಾ ಧನ್ಯ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ಕುಂದಾಪುರ ತಾಲೂಕು ಅಧ್ಯಕ್ಷ ಗಣೇಶ್ ಶೆಟ್ಟಿ, ಉದ್ಯಮಿ ಸುರೇಂದ್ರ ಶೆಟ್ಟಿ, ಪ್ರತಿಭಾ ಕಾರಂಜಿ ಜಿಲ್ಲಾ ನೋಡಲ್ ಅಧಿಕಾರಿ ಚಂದ್ರ ನಾಯ್ಕ್, ಉಪ ನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಜಾಹ್ನವಿ, ಡಯಟ್ ಉಡುಪಿಯ ಉಪನ್ಯಾಸಕ ಪ್ರಭಾಕರ ಮಿತ್ಯಂತಾಯ, ಕೋಟೇಶ್ವರ ಕೆಪಿಎಸ್ ಶಾಲೆ ಪ್ರಭಾರ ಪ್ರಾಂಶುಪಾಲೆ ಸುಶೀಲಾ, ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ, ಕೆಪಿಎಸ್ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಯೋಗಿ ನಾಯ್ಕ್, ಎಸ್ಡಿಎಂಸಿ ಉಪಾಧ್ಯಕ್ಷ ವಿಶ್ವನಾಥ್ ಉಪಸ್ಥಿತರಿದ್ದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲಾ ಉಪನಿರ್ದೇಶಕ ಎನ್.ಕೆ.ಶಿವರಾಜ್ ಸ್ವಾಗತಿಸಿದರು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್ ಕಾಂತರಾಜು ವಂದಿಸಿದರು. ಕೋಟೇಶ್ವರ ಕೆಪಿಎಸ್ ಶಾಲೆ ಶಿಕ್ಷಕಿಯರಾದ ದಿವ್ಯಪ್ರಭಾ ಹಾಗೂ ಅನುರಾಧ ಕಾರ್ಯಕ್ರಮ ನಿರೂಪಿಸಿದರು.

ಆಕರ್ಷಕ ಮೆರವಣಿಗೆ: ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಮೊದಲು ನಡೆದ ಮಕ್ಕಳ ಮೆರವಣಿಗೆಯು ಆಕರ್ಷಕವಾಗಿತ್ತು.ಕಳಶ ಹಿಡಿದ ವಿದ್ಯಾರ್ಥಿನಿಯರು, ಯಕ್ಷಗಾನ ವೇಷಧಾರಿ ವಿದ್ಯಾರ್ಥಿಗಳು, ತಟ್ಟಿರಾಯ, ಚೆಂಡೆ ವಾದನ ಸಹಿತ ವಿವಿಧ ಕಲಾತಂಡಗಳಿದ್ದ ಮೆರವಣಿಗೆ ಕೋಟೇಶ್ವರದ ಪೇಟೆಯ ಪ್ರಮುಖ ರಸ್ತೆಯಲ್ಲಿ ಸಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಶಾಲೆಯಲ್ಲಿ ಸಮಾಪ್ತಿಗೊಂಡಿತು. 

Similar News