ಸೀಮೆಎಣ್ಣೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯ: ಡಿ.3ರಂದು ನಾಡದೋಣಿ ಮೀನುಗಾರರಿಂದ ಹಕ್ಕೋತ್ತಾಯ ಆಂದೋಲನ

Update: 2022-12-01 14:08 GMT

ಉಡುಪಿ, ಡಿ.1: ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಸಮರ್ಪಕ ವಾಗಿ ವಿತರಿಸುವಂತೆ ಒತ್ತಾಯಿಸಿ ಕುಂದಾಪುರ ಹಾಗೂ ಬೈಂದೂರು ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಹಕ್ಕೋತ್ತಾಯ ಆಂದೋಲನವನ್ನು ಡಿ.3ರಂದು ಬೆಳಗ್ಗೆ 10ಗಂಟೆಗೆ ಹಮ್ಮಿಕೊಳ್ಳ ಲಾಗಿದೆ ಎಂದು ಬೈಂದೂರು ವಲಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಯುಕ್ತ ಉಡುಪಿ ಎಂಜಿಎಂ ಕಾಲೇಜಿನ ಬಳಿಯಿಂದ 5000ಕ್ಕೂ ಅಧಿಕ ನಾಡದೋಣಿ ಮೀನುಗಾರರು, ಕಾಲ್ನಡಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಯ ವರೆಗೆ ತೆರಳಿ ಸೀಮೆಎಣ್ಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ರಾಜ್ಯ ಸರಕಾರದ ಆದೇಶದಂತೆ ನಾಡದೋಣಿ ಮೀನುಗಾರರಿಗೆ ಆಗಸ್ಟ್ ತಿಂಗಳಿನಿಂದ ಸೀಮೆಎಣ್ಣೆ ಬಿಡುಗಡೆ ಯಾಗಬೇಕಿತ್ತು. ಆದರೆ ನ.2ರಂದು 3000 ಕೆ.ಎಲ್. ಸೀಮೆಎಣ್ಣೆ ಮಾತ್ರ ಕೇಂದ್ರದಿಂದ ಬಿಡುಗಡೆಯಾಗಿದೆ. ಈ ಸೀಮೆ ಎಣ್ಣೆ ಕೂಡ ಈವರೆಗೆ ನಾಡದೋಣಿ ಮೀನುಗಾರರಿಗೆ ಸಮಪರ್ಕವಾಗಿ ಸಿಗದೆ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕೂಡ ಕಷ್ಟಸಾಧ್ಯವಾಗುತ್ತಿದೆ ಎಂದು ಅವರು ದೂರಿದರು.

ಒಕ್ಕೂಟದ ಗೌರವಾಧ್ಯಕ್ಷ ನವೀನ್‌ಚಂದ್ರ ಉಪ್ಪುಂದ ಮಾತನಾಡಿ, ಸೀಮೆಎಣ್ಣೆ ಯನ್ನು ಕೇಂದ್ರ ನೀಡದಿದ್ದರೆ ರಾಜ್ಯ ಸರಕಾರ ಮುಕ್ತ ಮಾರುಕಟ್ಟೆಯಲ್ಲಿ ಬಿಳಿ ಸೀಮೆಎಣ್ಣೆ ಖರೀದಿಸಿ ಸಬ್ಸಿಡಿ ದರದಲ್ಲಿ ನಾಡದೋಣಿ ಮೀನುಗಾರರಿಗೆ ಹಂಚಿಕೆ ಮಾಡಬೇಕು. ಇದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯ. ಅದೇ ರೀತಿ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಬಾಕಿ ಸೀಮೆ ಎಣ್ಣೆ ಕೂಡ ನೀಡಬೇಕು. ಈ ಬಾರಿಯ ಬಜೆಟ್‌ನಲ್ಲಿ ನಾಡದೋಣಿ ಮೀನು ಗಾರರ ವಿವಿಧ ಸೌಲಭ್ಯಗಳಿಗೆ 250 ಕೋಟಿ ಮೀಸಲಿರಿಸಬೇಕು. ಅಲ್ಲದೆ ನಾಡದೋಣಿ ಮೀನುಗಾರರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ರಾಮಚಂದ್ರ ಖಾರ್ವಿ, ಉಪಾಧ್ಯಕ್ಷ ರಾಮ ಖಾರ್ವಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಖಾರ್ವಿ, ಭಾಸ್ಕರ ಖಾರ್ವಿ, ಮುರಳೀಧರ ಖಾರ್ವಿ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯಲ್ಲಿ ಸುಮಾರು 4000 ಸೇರಿದಂತೆ ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಒಟ್ಟು 8030 ನಾಡದೋಣಿಗಳಿದ್ದು, ತಿಂಗಳಿಗೆ 2409 ಕೆಎಲ್ ಸೀಮೆಎಣ್ಣೆ ಅವಶ್ಯಕತೆ ಇದೆ. ಪ್ರತಿಯೊಂದು ದೋಣಿಗೂ ತಿಂಗಳಿಗೆ 300 ಲೀಟರ್ ಸೀಮೆಎಣ್ಣೆ ಅಗತ್ಯವಿದೆ. ಆದುದರಿಂದ ಸರಕಾರ ವರ್ಷದ 10 ತಿಂಗಳು ಈ ಪ್ರಮಾಣದಲ್ಲಿ ಸೀಮೆಎಣ್ಣೆಯನ್ನು ಹಂಚಿಕೆ ಮಾಡಬೇಕು.

-ಆನಂದ ಖಾರ್ವಿ, ಅಧ್ಯಕ್ಷರು,
ಬೈಂದೂರು ವಲಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ

Similar News