ಉಡುಪಿ: ವೃದ್ಧೆಯ ಅತ್ಯಾಚಾರ ಪ್ರಕರಣ; ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

Update: 2022-12-01 14:40 GMT

ಉಡುಪಿ, ಡಿ.1: ಐದು ವರ್ಷಗಳ ಹಿಂದೆ ವೃದ್ಧೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ 10 ವರ್ಷಗಳ ಕಠಿಣ ಜೈಲುಶಿಕ್ಷೆ ವಿಧಿಸಿ ಎರಡನೇ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಆದೇಶ ನೀಡಿದೆ.

ಶಿವಮೊಗ್ಗ ಜೆ.ಪಿ.ನಗರದ ಇರ್ಫಾನ್ (30) ಶಿಕ್ಷೆಗೆ ಗುರಿಯಾಗಿರುವ ಆರೋಪಿ.

40 ವರ್ಷಗಳಿಂದ ಉಡುಪಿ ಜಿಲ್ಲೆಯ ವಾಸವಾಗಿದ್ದ ತಮಿಳುನಾಡು ಮೂಲದ 80 ಹರೆಯದ ವೃದ್ಧೆ ಮಲ್ಪೆ ಬಂದರಿನಲ್ಲಿ ಮೀನು ಹೊರುವ ಕೆಲಸ ಮಾಡಿಕೊಂಡಿದ್ದರು. ಕಳೆದ 10 ವರ್ಷಗಳಿಂದ ಇವರು ಉಡುಪಿಯಲ್ಲಿ ಗುಜರಿ ಹೆಕ್ಕಿ ನಗರದ ಪಿಪಿಸಿ ರಸ್ತೆಯಲ್ಲಿರುವ ಗುಜರಿ ಅಂಗಡಿಗೆ ಮಾರಾಟ ಮಾಡಿ, ಸಮೀಪ ಮಲಗುತ್ತಿದ್ದರು. 

ಈ ವೃದ್ಧೆಯನ್ನು ಗುಜರಿ ಅಂಗಡಿಯ ಮಾಲಕಿಯ ಮಗನ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇರ್ಫಾನ್ ಪ್ರತಿದಿನ ಗಮನಿಸುತ್ತಿದ್ದನು. 2017ರ ಜೂ.5ರಂದು ಸಂಜೆ ವೃದ್ಧೆ ಗುಜರಿಯನ್ನು ಮಾರಾಟ ಮಾಡಿ ಕೃಷ್ಣಮಠಕ್ಕೆ ಹೋಗುತ್ತಿದ್ದಾಗ ತೆಂಕಪೇಟೆಯ ಓಣಿಯಲ್ಲಿ ಇರ್ಫಾನ್, ಬಲತ್ಕಾರವಾಗಿ ಕೈ ಹಿಡಿದು ಅತ್ಯಾಚಾರ ಎಸಗಿದ್ದನು. ಅಲ್ಲದೆ ವೃದ್ಧೆಯ ಕಿವಿಯ ಚಿನ್ನದ ಬೆಂಡೋಲೆ, ತಾಳಿ ಹಾಗೂ ನಗದು ಹಣವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದನು.

ಇದರಿಂದ ಅಸ್ವಸ್ಥಗೊಂಡ ವೃದ್ದೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಮಾಹಿತಿಯಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ವೃದ್ಧೆಯ ಹೇಳಿಕೆ ಪಡೆದು ಜೂ.7ರಂದು ಕಲಂ 376, 392, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು. ತನಿಖೆ ವೇಳೆ ವೃದ್ಧೆ, ಗುಜರಿ ಅಂಗಡಿ ಮಾಲಕಿಯ ಮೊಬೈಲ್‌ನಲ್ಲಿದ್ದ ಇರ್ಫಾನ್ ಫೋಟೋ ವನ್ನು ಗುರುತಿಸುವಲ್ಲಿ ಯಶಸ್ವಿಯಾದರು. ಆದರೆ ಆರೋಪಿ ಪತ್ತೆಯಾಗಿರುವುದಿಲ್ಲ.

ಬಳಿಕ ಇರ್ಫಾನ್ ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದನು. 2019ರ ಮೇ 16ರಂದು ಉಡುಪಿ ಪೊಲೀಸರು ಆರೋಪಿಯನ್ನು ಬಾಡಿ ವಾರೆಂಟ್ ಮೂಲಕ ಕಸ್ಟಡಿ ಪಡೆದು ವಿಚಾರಣೆ ನಡೆಸಿದರು. ಅಂದಿನ ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಮೊದಲ ಜಾರ್ಜ್‌ಶೀಟ್‌ನ್ನು 2018ರ ಅ.19ರಂದು ಮತ್ತು ಹೆಚ್ಚುವರಿ ಜಾರ್ಜ್‌ಶೀಟ್‌ನ್ನು ಆರೋಪಿಯ ಬಂಧನ ಬಳಿಕ 2020ರ ಮೇ 5ರಂದು ನ್ಯಾಯಾಲಯಕ್ಕೆ ಸಲ್ಲಿಸಿದರು.

2022ರ ಎ.7ರಂದು ನ್ಯಾಯಾಲಯ ಈ ಪ್ರಕರಣ ವಿಚಾರಣೆ ಆರಂಭಿಸಿದ್ದು, 18 ಸಾಕ್ಷಿಗಳ ಪೈಕಿ 15 ಸಾಕ್ಷಿಗಳ ಹೇಳಿಕೆ ಪಡೆದು ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶ ದಿನೇಶ್ ಹೆಗ್ಡೆ ಅಭಿಪ್ರಾಯ ಪಟ್ಟರು. ಅದರಂತೆ ಆರೋಪಿಗೆ ಅತ್ಯಾಚಾರ ಪ್ರಕರಣದಡಿ 10 ವರ್ಷ ಕಠಿಣ ಜೈಲುಶಿಕ್ಷೆ ಮತ್ತು 50ಸಾವಿರ ರೂ. ದಂಡ(ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ ಒಂದು ವರ್ಷ ಕಠಿಣ ಶಿಕ್ಷೆ) ಮತ್ತು ಕೊಲೆ ಬೆದರಿಕೆ ಪ್ರಕರಣದಲ್ಲಿ ಆರು ತಿಂಗಳು ಸಾದಾ ಜೈಲುಶಿಕ್ಷೆ ಮತ್ತು 5ಸಾವಿರ ರೂ. ದಂಡ(ದಂಡ ಪಾವತಿಸಲು ತಪ್ಪಿದಲ್ಲಿ 1 ತಿಂಗಳು ಸಾದಾ ಜೈಲುಶಿಕ್ಷೆ) ವಿಧಿಸಿ ಆದೇಶ ನೀಡಿದರು.

ದಂಡದ ಮೊತ್ತವನ್ನು ಪರಿಹಾರವಾಗಿ ಸಂತ್ರಸ್ತ ವೃದ್ಧೆಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಷನ್ ಜಯರಾಮ ಶೆಟ್ಟಿ ವಾದಿಸಿದ್ದರು.

Similar News