×
Ad

ಹೆಜಮಾಡಿಯ ಟೋಲ್‌ಗೇಟ್‌ನಲ್ಲಿ ಹೆಚ್ಚುವರಿ ಶುಲ್ಕ ಸಂಗ್ರಹಕ್ಕೆ ದಿನ ನಿಗದಿಯಾಗಿಲ್ಲ: ಡಿಸಿ ಕೂರ್ಮಾರಾವ್

Update: 2022-12-01 21:31 IST

ಉಡುಪಿ, ಡಿ.1: ಈಗ ಮುಚ್ಚಿರುವ ಸುರತ್ಕಲ್ ಟೋಲ್‌ಗೇಟ್‌ನ ಶುಲ್ಕವನ್ನು ಹೆಜಮಾಡಿಯ ಟೋಲ್‌ಗೇಟ್ ಶುಲ್ಕದೊಂದಿಗೆ ವಿಲೀನಗೊಳಿಸಿ ಕೇಂದ್ರ ಸರಕಾರ ಕಳೆದ ನ.14ರಂದು ಗಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಆದರೆ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದುವರೆಗೆ ಸಾರ್ವಜನಿಕರಿಗೆ ಈ ಬಗ್ಗೆ ಯಾವುದೇ ಮಾಹಿತಿ ಹಾಗೂ ವಿವರಗಳನ್ನು ತಿಳಿಸಿಲ್ಲವಾದ್ದರಿಂದ ಹೊಸ ಟೋಲ್‌ ಶುಲ್ಕವನ್ನು ಪಡೆಯುವ ದಿನ ನಿಗದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ತಿಳಿಸಿದ್ದಾರೆ.

ಪ್ರಾಧಿಕಾರ ಈ ಬಗ್ಗೆ ನಿರ್ಧಾರಕ್ಕೆ ಬಂದು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಿದೆ. ಆ ಬಳಿಕವಷ್ಟೇ ಶುಲ್ಕ ಸಂಗ್ರಹಿಸುವ ದಿನ ನಿಗದಿಯಾಗಲಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಪ್ರಾಧಿಕಾರವು ಡಿ.1ರಿಂದ ಟೋಲ್ ಸಂಗ್ರಹಕ್ಕೆ ಸಮಸ್ಯೆಯಾಗದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ತಿಳಿಸಿತ್ತು. ಅದರಂತೆ ಸ್ಥಳೀಯವಾಗಿ ನಾವು  ಯಾವುದೇ ಅಹಿತಕರ ಘಟನೆಗಳಾಗದಂತೆ ರಕ್ಷಣೆ, ಸಹಕಾರ ನೀಡುವುದಾಗಿ ತಿಳಿಸಿದ್ದೇವೆ ಎಂದರು. ಟೋಲ್‌ಶುಲ್ಕದ ಕುರಿತಂತೆ ಇದುವರೆಗೆ ಯಾವುದೇ ಸಂಘಟನೆಯಾಗಲಿ, ಸಂಘಸಂಸ್ಥೆಗಳಾಗಲಿ, ಸಾರ್ವಜನಿಕರಿಂದಾಗಲಿ ಜಿಲ್ಲಾಡಳಿತಕ್ಕೆ ದೂರು, ಮನವಿ ಬಂದಿಲ್ಲ. ಯಾರಾದರೂ ಮನವಿ ನೀಡಿದರೆ ನಾವು ಅದನ್ನು ಸಂಬಂಧಿತರಿಗೆ ತಲುಪಿಸುತ್ತೇವೆ ಎಂದರು.

ಶೀಘ್ರವೇ ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ಕರೆದು ವಿಷಯದ ಬಗ್ಗೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ನುಡಿದರು.

30 ರೈತರ ನೋಂದಣಿ: ಜಿಲ್ಲೆಯಲ್ಲಿ ಸರಕಾರ ಘೋಷಿಸಿರುವ ಬೆಂಬಲ ಬೆಲೆಗೆ ಭತ್ತ ಖರೀದಿಸಲು ಜಿಲ್ಲೆಯಲ್ಲಿ ತೆರೆದಿರುವ 10 ನೋಂದಣಿ ಕೇಂದ್ರದಲ್ಲಿ ನಿನ್ನೆ ಸಂಜೆಯವರೆಗೆ 30 ಮಂದಿ ರೈತರು ಮಾತ್ರ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಹೆಸರು ನೊಂದಾಯಿಸಿಕೊಳ್ಳುವವರಿಗೆ ಇನ್ನೂ ಅವಕಾಶವಿದೆ ಎಂದರು.

Similar News