ಗುಜರಾತ್‌ ಚುನಾವಣೆ: ಮೀಸೆ ಬೆಳೆಸಲು ವಿಶೇಷ ಭತ್ಯೆಗೆ ಬೇಡಿಕೆ ಇಟ್ಟ ಪಕ್ಷೇತರ ಅಭ್ಯರ್ಥಿ

"ವಿಧಾನಸಭಾ ಕಣದಲ್ಲಿ ಐದಡಿ ಮೀಸೆಯ ಮಾಜಿ ಸೈನಿಕ.!"

Update: 2022-12-01 18:13 GMT

ಹಿಮ್ಮತ್‌ನಗರ: 2.5 ಅಡಿ ಉದ್ದದ ಮೀಸೆಯನ್ನು ಬಿಟ್ಟಿರುವ ವ್ಯಕ್ತಿಯೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಗುಜರಾತ್ ವಿಧಾನಸಭಾ ಚುನಾವಣೆಯ ಕಣದಲ್ಲಿದ್ದು ಸಾಕಷ್ಟು ಗಮನ ಸೆಳೆದಿದ್ದಾರೆ. ಮಗನ್‌ಭಾಯ್‌ ಸೋಲಂಕಿ ಅವರಿಗೆ ತಮ್ಮ ಮೀಸೆಯೇ ಪ್ರಚಾರದ ಮುಖ್ಯ ವಿಷಯವಾಗಿದೆ. ಅತ್ಯಂತ ಜಾಗರೂಕತೆಯಿಂದ ನಿಭಾಯಿಸಿರು ಅವರ ಮೀಸೆಯು ಒಂದು ತುದಿಯಿಂದ ಇನ್ನೊಂದು ತುದಿಗೆ ಐದು ಅಡಿಯಷ್ಟು ಉದ್ದ ಇದೆ.

ಇವರು ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲಿ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ.

2012 ರಲ್ಲಿ ಗೌರವ ಲೆಫ್ಟಿನೆಂಟ್ ಆಗಿ ಸೇನೆಯಿಂದ ನಿವೃತ್ತರಾದ ಸೋಲಂಕಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ. 2017 ರ ಗುಜರಾತ್ ವಿಧಾನಸಭಾ ಚುನಾವಣೆಯಿಂದಲೂ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

"ಆಗ ನಾನು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಭ್ಯರ್ಥಿಯಾಗಿದ್ದೆ. ನಾನು ಸೋತಿದ್ದೆ ಆದರೆ ಬಿಟ್ಟುಕೊಡಲಿಲ್ಲ. 2019 ರ ಲೋಕಸಭೆ ಚುನಾವಣೆಯಲ್ಲಿ ನಾನು ಸ್ವತಂತ್ರವಾಗಿ ಸ್ಪರ್ಧಿಸಿದ್ದೇನೆ. ಈ ಬಾರಿಯೂ ನಾನು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇನೆ" ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

ಸೋಲಂಕಿ ಅವರು ಪಶ್ಚಿಮ, ಪೂರ್ವದಿಂದ ಉತ್ತರದವರೆಗೆ ಭಾರತದ ವಿವಿಧ ಗಡಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಪ್ರಚಾರಕ್ಕೆ  ಹೋದಲ್ಲೆಲ್ಲಾ ಅವರ ಮೀಸೆ ಗಮನ ಸೆಳೆಯುತ್ತದೆ ಎಂದು ಹೇಳಿದ್ದಾರೆ.

"ನಾನು ಸೇನೆಯಲ್ಲಿದ್ದಾಗ, ನನ್ನ ಮೀಸೆಯನ್ನು ಯಾವಾಗಲೂ ಹಿರಿಯ ಅಧಿಕಾರಿಗಳು ಮೆಚ್ಚುತ್ತಿದ್ದರು, ನಾನು ಚುನಾವಣೆಗೆ ಸ್ಪರ್ಧಿಸಿದಾಗ, ಜನರು ನನ್ನ ಮೀಸೆಯನ್ನು ನೋಡಿ ಆನಂದಿಸುತ್ತಾರೆ, ಮಕ್ಕಳು ಹೊರಗೆ ಬಂದು ಅದನ್ನು ಮುಟ್ಟಲು ಪ್ರಯತ್ನಿಸುತ್ತಾರೆ, ಆದರೆ ಯುವಕರು ಅಂತಹ ಮೀಸೆಯನ್ನು ಬೆಳೆಸುವುದು ಹೇಗೆ ಸಲಹೆಗಳನ್ನು ಕೇಳುತ್ತಾರೆ ”ಎಂದು ಅವರು ಹೇಳಿದ್ದಾರೆ.

ಚುನಾವಣೆಯಲ್ಲಿ ತಾನು ಆಯ್ಕೆಯಾದರೆ, ಯುವಕರಿಗೆ ಮೀಸೆ ಬೆಳೆಯಲು ಪ್ರೋತ್ಸಾಹಿಸುವ ಕಾನೂನು ತರಲು ಗುಜರಾತ್ ಸರ್ಕಾರಕ್ಕೆ ಮನವಿ ಮಾಡುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ, ಮಾಜಿ ಸೈನಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಸರ್ಕಾರದ ಮುಂದೆ ಪ್ರಸ್ತಾಪಿಸುವುದಾಗಿ ಅವರು ತಿಳಿಸಿದ್ದಾರೆ.

ಗುಜರಾತಿನ ಯುವಕರು ಮೀಸೆ ಬೆಳೆಸುವಂತೆ ಪ್ರೇರೇಪಿಸಲು ರಾಜ್ಯ ಸರ್ಕಾರ ಕಾನೂನು ತರುವಂತೆ ಒತ್ತಾಯಿಸುವುದಾಗಿ ಹೇಳಿದ ಸೋಲಂಕಿ, ಯಾರೇ ಮೀಸೆ ಬೆಳೆಸಿದರೂ ಅದರ ನಿರ್ವಹಣೆಗೆ ಸರ್ಕಾರ ಒಂದಿಷ್ಟು ಹಣ ನೀಡಬೇಕು ಎಂದೂ ಹೇಳಿದ್ದಾರೆ

“ನೀತಿ ಬದಲಾವಣೆಗಳಿಂದಾಗಿ ಈ ದಿನಗಳಲ್ಲಿ ಜವಾನರು ಬೇಗನೆ ನಿವೃತ್ತರಾಗಿರುವುದರಿಂದ ನಾನು ಮಾಜಿ ಸೈನಿಕರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇನೆ. ಸೈನಿಕರಲ್ಲಿ ಹೆಚ್ಚಿನವರು 45-46 ನೇ ವಯಸ್ಸಿನಲ್ಲಿ ನಿವೃತ್ತರಾದ ನಂತರ ನಿರುದ್ಯೋಗಿಗಳಾಗಿದ್ದಾರೆ. ಈ ಹಿಂದೆ ನಿವೃತ್ತ ಯೋಧರು ಸರ್ಕಾರಿ ಕಚೇರಿಗಳಲ್ಲಿ ಮರು ಉದ್ಯೋಗ ಪಡೆಯುತ್ತಿದ್ದರು, ಆದರೆ ಈಗ ಅದೂ ನಿಂತು ಹೋಗಿದೆ,’’ ಎಂದು ಅವರು ಹೇಳಿದ್ದಾರೆ.

Similar News