ಪಬ್ ತೆರೆಯಲು ಹೊಸ ಪರವಾನಿಗೆ: ಅಬಕಾರಿ ನೀತಿಗೆ ತಿದ್ದುಪಡಿಗೆ ಸಿದ್ಧತೆ?

Update: 2022-12-02 03:02 GMT

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ವೈನ್‌ಶಾಪ್ (ಸಿಎಲ್‌2), ಬಾರ್ ಆ್ಯಂಡ್ ರೆಸ್ಟೋರೆಂಟ್(ಸಿಎಲ್‌9) ಹಾಗೂ ಇಂಡಿಪೆಂಡೆಂಟ್ ರಿಟೇಲ್ ವೆಂಡರ್ ಬಿಯರ್(ಆರ್‌ವಿಬಿ) ಪಬ್ ತೆರೆಯುವುದಕ್ಕೆ ಪರವಾನಿಗೆ ನೀಡಲು ಸದ್ದಿಲ್ಲದೆ ತಯಾರಿ ನಡೆಸುತ್ತಿರುವ ರಾಜ್ಯ ಸರಕಾರವು ಹೊಸ ಪರವಾನಿಗೆ ನೀಡುವ ಉದ್ದೇಶದಿಂದ ‘ಅಬಕಾರಿ ನೀತಿ’ಗೆ ತಿದ್ದುಪಡಿ ತರಲು ಮುಂದಾಗಿದೆ.

ದಿಲ್ಲಿ ಸರಕಾರದಲ್ಲಿ ಅಬಕಾರಿ ನೀತಿ ಹಗರಣ ಮತ್ತು ಇದಕ್ಕೆ ಪೂರಕವಾಗಿಯೇ ಹಣ ಅಕ್ರಮ ವರ್ಗಾವಣೆಯಾಗಿದೆ ಎಂಬ ಆರೋಪಕ್ಕೆ ಜಾರಿ ನಿರ್ದೇಶನಾಲಯವು(ಈ.ಡಿ) ಮೊದಲ ದೋಷಾರೋಪ ಪಟ್ಟಿ ಸಲ್ಲಿಸಿರುವ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಅಬಕಾರಿ ನೀತಿಗೆ ತರಲಿರುವ ತಿದ್ದುಪಡಿಯತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.

ಹೊಸದಾಗಿ ವೈನ್‌ಶಾಪ್‌ಗಳಿಗೆ ಪರವಾನಿಗೆ ನೀಡುವ ಉದ್ದೇಶದಿಂದಲೇ ಅಬಕಾರಿ ನೀತಿಗೆ ತಿದ್ದುಪಡಿ ತರಲು ನಿವೃತ್ತ ಐಎಎಸ್ ಅಧಿಕಾರಿ ಯಶವಂತಕುಮಾರ್ ಎಂಬವರ ನೇತೃತ್ತದಲ್ಲಿ ಸಮಿತಿ ರಚನೆಯಾಗಿದೆ. ಈಗಾಗಲೇ ಸಮಿತಿಯು ಕರಡು ನಿಯಮಾವಳಿಗಳನ್ನು ಸರಕಾರಕ್ಕೆ ಸಲ್ಲಿಕೆ ಮಾಡಿದೆ. ಇದಿನ್ನೂ ಅಂತಿಮಗೊಂಡಿಲ್ಲ. ಈ ನಡುವೆಯೇ ಸಮಿತಿಯಲ್ಲಿ ಇರುವ ಕೆಲ ಅಧಿಕಾರಿಗಳು ತಮಗೆ ಬೇಕಾದ ತಿದ್ದುಪಡಿ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.

ಹೊಸ ಮದ್ಯದಂಗಡಿಗಳನ್ನು ಆರಂಭಿಸಲು ಲೈಸೆನ್ಸ್ ನೀಡುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ. ಆದ್ದರಿಂದ ಲೈಸೆನ್ಸ್ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಚಿವ ಕೆ. ಗೋಪಾಲಯ್ಯ ಅವರು ಸ್ಪಷ್ಟೀಕರಣ ನೀಡಿರುವ ಮಧ್ಯೆಯೇ ಅಬಕಾರಿ ನೀತಿಗೆ ತಿದ್ದುಪಡಿ ಮಾಡಲು ಹೊರಟಿರುವುದು ಸಂಶಯಕ್ಕೆ ದಾರಿಮಾಡಿಕೊಟ್ಟಿದೆ.

ರಾಜ್ಯದಲ್ಲಿ ಒಟ್ಟು 3,618 ಬಾರ್ ಆ್ಯಂಡ್ ರೆಸ್ಟೋರೆಂಟ್ ಮದ್ಯದಂಗಡಿಗಳಿವೆ. ಇದರಲ್ಲಿಯೂ ಕೋಟಾ ಉಲ್ಲಂಘನೆಯಾಗಿದೆ ಎಂಬ ದೂರುಗಳನ್ನೇ ನೆಪಮಾಡಿಕೊಂಡು ಹೊಸದಾಗಿ ಸಿಎಲ್‌9 ತೆರೆಯಲು ಪರವಾನಿಗೆ ನೀಡಲು ಸರಕಾರ ಗಂಭೀರವಾಗಿ ಚಿಂತಿಸಿದೆ ಎಂದು ಗೊತ್ತಾಗಿದೆ. ಕೋಟಾದಡಿ ಬಾಕಿ ಉಳಿದಿರುವ ಲೈಸೆನ್ಸ್ ನೀಡಲು ಏನು ಮಾಡಬೇಕು? ಯಾವೆಲ್ಲ ಕ್ರಮ ಕೈಗೊಳ್ಳಬೇಕು, ಏನೇನು ತಿದ್ದುಪಡಿ ಮಾಡಬೇಕು ಎಂದು ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ರಾಜ್ಯದಲ್ಲಿ ಸದ್ಯ 12,113 ಮದ್ಯದಂಗಡಿಗಳಿವೆ. ವೈನ್‌ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಹೊರತುಪಡಿಸಿ ಸಿಎಲ್‌7, ಕ್ಲಬ್ (ಸಿಎಲ್‌4), ಸ್ಟಾರ್ ಹೋಟೆಲ್(ಸಿಎಲ್‌6ಎ), ಮಿಲಿಟರಿ ಕ್ಯಾಂಟೀನ್ (ಸಿಎಲ್‌8) ಹಾಗೂ ಎಂಎಸ್‌ಐಎಲ್ (11ಸಿ) ಸೇರಿ ಇತರ ಮಾದರಿ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡಲಾಗುತ್ತಿದೆ.

ಎಂಎಸ್‌ಐಎಲ್ ಮದ್ಯದಂಗಡಿ ತೆರೆಯುವುದಕ್ಕೆ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿ.ಗೆ (ಎಂಎಸ್‌ಐಎಲ್) ಸರಕಾರವೇ ಅನುಮತಿ ಕೊಟ್ಟಿದೆ. ಹಾಗಾಗಿ, ಎಂಎಸ್‌ಐಎಲ್ ವತಿಯಿಂದ ರಾಜ್ಯಾದ್ಯಂತ ಈಗಾಗಲೇ 1,001 ಮದ್ಯದಂಗಡಿ ತೆರೆಯಲಾಗಿದೆ. ಆದರೆ, ಹೊಸ ಸಿಎಲ್‌2 ಹಾಗೂ ಸಿಎಲ್‌9 ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡುವುದನ್ನು 1992-93ರಲ್ಲಿ ಹಾಗೂ ಇಂಡಿಪೆಂಡೆಂಟ್ ಪಬ್‌ಗೆ ಪರವಾನಿಗೆ ನೀಡುವುದನ್ನು 15 ವರ್ಷ ಹಿಂದೆ ನಿಲ್ಲಿಸಲಾಗಿತ್ತು.

ಅಂದಿನಿಂದ ಇಂದಿನವರೆಗೆ ಇವುಗಳಿಗೆ ಯಾವುದೇ ಪರವಾನಗಿ ನೀಡಲಾಗುತ್ತಿಲ್ಲ. ಆದರೆ, ಈಗ ಇವುಗಳಿಗೆ ಪರವಾನಗಿ ನೀಡುವಂತೆ ಸರಕಾರ ಮಟ್ಟದಲ್ಲಿ ಕೆಲವರು ದೊಡ್ಡ ಮಟ್ಟದಲ್ಲಿ ಲಾಬಿ ನಡೆಸುತ್ತಿರುವುದು ಬಹಿರಂಗವಾಗಿದೆ.

ಹೊಸ ಸಿಎಲ್ 2 ಲೈಸೆನ್ಸ್ ನೀಡಿಕೆ: ರಾಜ್ಯದಲ್ಲಿ 3,974 ವೈನ್‌ಶಾಪ್‌ಗಳಿವೆ. ಅಬಕಾರಿ ಇಲಾಖೆ ನಿಯಮ 12ರಂತೆ ರಾಜ್ಯದ ಪ್ರತೀ ತಾಲೂಕು ಹಾಗೂ ನಗರದ ಪ್ರದೇಶಕ್ಕೆ 7,500 ಜನಕ್ಕೆ ಒಂದು ಸಿಎಲ್‌2 ಹಾಗೂ 3,500 ಜನಕ್ಕೆ ಹೆಚ್ಚುವರಿ ಸನ್ನದು ನಿಗದಿಪಡಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ 15 ಸಾವಿರ ಮಂದಿಗೆ ಒಂದು ಸಿಎಲ್‌2 ಹಾಗೂ 7,500 ಜನಕ್ಕೆ ಹೆಚ್ಚುವರಿ ಒಂದು ಸನ್ನದು ನಿಗದಿಯಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ 1987ರಲ್ಲಿ ನಿಯಮ 12ರಂತೆ ಅಂದಿನ ಸರಕಾರವು, ಎಲ್ಲ ತಾಲೂಕಿನಲ್ಲಿ ಕೋಟಾ ನಿಗದಿಪಡಿಸಿತ್ತು.

ನಿಯಮ 12ರಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಿಎಲ್‌2 ಹೆಚ್ಚುವರಿ ಸನ್ನದು ನಿಗದಿಯಂತೆ ಒಟ್ಟು 385 ಸಿಎಲ್ ಶಾಪ್ ಮಂಜೂರು ಮಾಡಲಾಗಿತ್ತು. ಆದರೆ, 1994ರಲ್ಲಿ ಹೆಚ್ಚುವರಿ ನೀಡಲಾಗಿದ್ದ ವೈನ್ ಶಾಪ್‌ಗಳನ್ನು ರದ್ದುಪಡಿಸುವಂತೆ ರಾಜ್ಯ ಸರಕಾರ ಮತ್ತು ಹೈಕೋರ್ಟ್ ಆದೇಶಿಸಿತ್ತು. ಆದರೆ, ಸರಕಾರ ಹಾಗೂ ಹೈಕೋರ್ಟ್ ಹೊರಡಿಸಿದ್ದ ಆದೇಶಗಳಿಗೆ ಅಬಕಾರಿ ಇಲಾಖೆಯು ಕಿಮ್ಮತ್ತು ಕೊಟ್ಟಿಲ್ಲ.

ಬೆಂಗಳೂರು 289, ರಾಮನಗರ 10, ಕೊಡಗು 49, ಹಾಸನ 28, ಧಾರವಾಡ 7 ಹಾಗೂ ಚಿಕ್ಕಮಗಳೂರು 2 ಸೇರಿ ಒಟ್ಟು 385 ಸಿಎಲ್‌2 ವೈನ್ ಶಾಪ್ ಕೋಟಾ ಉಲ್ಲಂಘಿಸಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ಸಕ್ರಮಗೊಳಿಸಲು ಅಥವಾ ಹೆಚ್ಚುವರಿಯಾಗಿ ನಗರ ಪ್ರದೇಶದಲ್ಲಿ ನೀಡಲಾಗಿದ್ದ ಸಿಎಲ್‌2 ಶಾಪ್‌ಗಳನ್ನು ರದ್ದುಪಡಿಸಿ ಕೋಟಾದಂತೆ ಬಾಕಿ ಉಳಿದ 258 ಸಿಎಲ್‌2 ಶಾಪ್‌ಗಳ ಭರ್ತಿ ಮಾಡುವುದಕ್ಕೆ ಲೈಸೆನ್ಸ್ ನೀಡುವಂತೆ ಕೆಲವರು ಭಾರೀ ಲಾಬಿ ನಡೆಸುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಇಲಾಖೆಯಲ್ಲಿ ಶುರುವಾಗಿದೆ.

ಇಂಡಿಪೆಂಡೆಂಟ್ ಪಬ್ ಲೈಸನ್ಸ್: ರಾಜ್ಯದಲ್ಲಿ 65 ಇಂಡಿಪೆಂಡೆಂಟ್, 625 ಅಟ್ಯಾಚ್ಡು ಸೇರಿ ಒಟ್ಟು 690 ಪಬ್‌ಗಳಿವೆ. ಮದ್ಯದಂಗಡಿ ಹೊಂದಿರುವ ಮಾಲಕರಿಗೆ ಮಾತ್ರ ಅಟ್ಯಾಚ್ಡು ಪಬ್ ತೆರೆಯುವುದಕ್ಕೆ ಸದ್ಯ ಲೈಸೆನ್ಸ್ ನೀಡಲಾಗುತ್ತದೆ. ಆದರೆ ಇಂಡಿಪೆಂಡೆಂಟ್ ಪಬ್ ತೆರೆಯಲು 15 ವರ್ಷಗಳ ಹಿಂದೆ ಲೈಸೆನ್ಸ್ ಕೊಡುವುದನ್ನು ಸರಕಾರ ನಿಲ್ಲಿಸಿತ್ತು.

ಈಗ ಇಂಡಿಪೆಂಡೆಂಟ್ ಪಬ್‌ಗೆ ಪರವಾನಿಗೆ ನೀಡುವುದಕ್ಕೆ ‘ಅಬಕಾರಿ ನೀತಿ’ಯನ್ನೇ ತಿದ್ದುಪಡಿ ಮಾಡುವುದಕ್ಕೆ ಇಲಾಖೆ ಮುಂದಾಗಿದೆ. ಎಷ್ಟು ಪಬ್ ನೀಡಬೇಕೆಂಬುದು ನಿಗದಿಗೊಳಿಸದೆ ಸಾವಿರಾರು ಪಬ್‌ಗಳಿಗೆ ಪರವಾನಿಗೆ ನೀಡಲು ಇಲಾಖೆ ಆಲೋಚಿಸುತ್ತಿದೆ. ಇದಕ್ಕೆ ಇಲಾಖೆಯ ಕೆಲ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ.

1987ರ ಜೂ.30ರಂದು ರಾಜ್ಯದ ಎಲ್ಲ ತಾಲೂಕುಗಳಲ್ಲಿ ನಗರ ಪ್ರದೇಶ(ಎ) ಹಾಗೂ ಗ್ರಾಮೀಣ ಪ್ರದೇಶಕ್ಕೆ (ಬಿ) ಬೇಡಿಕೆ ಅನುಗುಣವಾಗಿ ನಿಗದಿತ ಕೋಟಾಕ್ಕಿಂತ ಹೆಚ್ಚುವರಿ ಸಿಎಲ್ 2 ಮದ್ಯದಂಗಡಿ ಮಂಜೂರು ಮಾಡಲಾಗಿತ್ತು. 1994 ಮಾ.4ರಂದು ಅಬಕಾರಿ ನಿಯಮ 12 ಸಬ್‌ರೂಲ್ (3ಎ) ನಿಗದಿತ ಕೋಟಾಕ್ಕಿಂತ ಹೆಚ್ಚುವರಿ ಮಂಜೂರಾಗಿರುವ ಸಿಎಲ್ ಮದ್ಯದಂಗಡಿ ರದ್ದುಪಡಿಸಲು ಆದೇಶ ಹೊರಡಿಸಿತ್ತು.

1999 ಜೂ.15ರಂದು ನಾಗರಾಜು ವರ್ಸಸ್ ಕರ್ನಾಟಕ ಸರಕಾರ ನಡುವಿನ ಪ್ರಕರಣ ಸಂಬಂಧ ನಿಯಮ 12ರಲ್ಲಿ ಹೆಚ್ಚುವರಿ ಸನ್ನದುಗಳನ್ನು ರದ್ದುಪಡಿಸಲು ಆದೇಶ ಹೊರಡಿಸಿರುವ ಹೈಕೋರ್ಟ್. 2016 ಜೂ.29ರಂದು ಪ್ರೇಮ್‌ಕುಮಾರ್ ವರ್ಸಸ್ ಕರ್ನಾಟಕ ಸರಕಾರ ನಡುವಿನ ಪ್ರಕರಣ ಸಂಬಂಧ ನಿಯಮ 12ರಲ್ಲಿ ಹೆಚ್ಚವರಿ ಸನ್ನದು ರದ್ದತಿಗೆ ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು.

ಅಬಕಾರಿ ಇಲಾಖೆ ಈವರೆಗೆ 19,244 ಕೋಟಿ ರೂ. ಆದಾಯ ಗಳಿಸಿದ್ದು, ಮಾರ್ಚ್ ವೇಳೆಗೆ ಆ ಮೊತ್ತ 30 ಸಾವಿರ ಕೋಟಿ ರೂ.ಯನ್ನು ತಲುಪಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 16,641 ಕೋಟಿ ರೂ. ಆದಾಯ ಬಂದಿತ್ತು. ಕಳೆದ ವರ್ಷಕ್ಕಿಂತ ಸುಮಾರು 2,603 ಕೋಟಿ ರೂ. ಹೆಚ್ಚು ಆದಾಯ ಬಂದಿದೆ. ಈ ಸಾಲಿಗೆ 29,000 ಕೋಟಿ ರೂ. ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಆ ಗುರಿಯನ್ನು ಮೀರಿ ಸುಮಾರು 1,000 ಕೋಟಿ ರೂ. ಹೆಚ್ಚುವರಿ ಗಳಿಕೆಯಾಗುವ ನಿರೀಕ್ಷೆ ಇದೆ. ಡಿಸೆಂಬರ್ ಮತ್ತು ಮಾರ್ಚ್‌ನಲ್ಲಿ ಹೆಚ್ಚು ಆದಾಯ ಬರಲಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಸುಮಾರು 10,000 ಕೋಟಿ ರೂ. ಸಂಗ್ರಹವಾಗಲಿದೆ ಎಂದು ಸಚಿವ ಗೋಪಾಲಯ್ಯ ಅವರು ಮಾಹಿತಿ ನೀಡಿದ್ದನ್ನು ಸ್ಮರಿಸಬಹುದು.

Similar News