ನ್ಯಾಯಾಧೀಶರ ಪೂರ್ವಾಪರಗಳು ಮತ್ತು ಮಾಧ್ಯಮಗಳು

Update: 2022-12-02 06:32 GMT

ನ್ಯಾಯಮೂರ್ತಿಗಳ ಪೂರ್ವಾಪರಗಳನ್ನು ತಿಳಿಯುವ ಅಗತ್ಯ ಮತ್ತು ಹಕ್ಕು ದೇಶದ ಪ್ರಜೆಗಳಿಗೆ ಇದೆ. ಅದು ಪ್ರಜೆಗಳ ಜೀವಿಸುವ ಹಕ್ಕಿನ ಭಾಗ ಎಂಬುದು ನನ್ನ ತಿಳುವಳಿಕೆ. ಆದರೆ ನಮ್ಮ ರಾಷ್ಟ್ರೀಯ ದಿನಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಪಟ್ಟಭದ್ರರ ಪಬ್ಲಿಕ್ ರಿಲೇಷನ್ಸ್ ಕೆಲಸದಲ್ಲಿ ತೊಡಗಿಸಿಕೊಂಡಿವೆ.

ನಮ್ಮ ದೇಶದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರುಗಳು ನೇಮಕಗೊಳ್ಳುವ ಸಂದರ್ಭದಲ್ಲಿ ಅವರ ವ್ಯಕ್ತಿತ್ವ, ಶಿಕ್ಷಣ, ವೃತ್ತಿ, ಹಿನ್ನೆಲೆ, ಸಿದ್ಧಾಂತ-ಮೌಲ್ಯಗಳು, ಸಾಧನೆಗಳು, ಆಚಾರ-ವಿಚಾರ, ಒಲವು-ನಿಲುವುಗಳ ಕುರಿತು ಚರ್ಚೆ ಸಂವಾದಗಳು ನಡೆಯುವುದಿಲ್ಲ. ಅಮೆರಿಕ, ಯುರೋಪ್‌ಗಳಲ್ಲಿ ಸಂಭಾವ್ಯ ನ್ಯಾಯಾಧೀಶರುಗಳ ಇಡೀ ಜನ್ಮ ಜಾತಕವನ್ನು ಮಾಧ್ಯಮಗಳು ಒದರಿ ಬಿಡುತ್ತವೆೆ. ಅಲ್ಲಿ ಜನರೂ ಅಂತಹ ಮಾಹಿತಿ-ವಿಶ್ಲೇಷಣೆಗಳಿಗಾಗಿ ಹಂಬಲಿಸುತ್ತಾರೆ. ನ್ಯಾಯಾಂಗದ ಉನ್ನತ ಸ್ಥಾನಕ್ಕೇರುವ ವ್ಯಕ್ತಿಗಳು ಆ ದೇಶದ ಜನರ, ವಿವಿಧ ಸಮುದಾಯಗಳು, ಯುವ ಜನಾಂಗ, ಮಕ್ಕಳ ಆರೈಕೆ, ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ, ವಿಮೆ, ಸಮಾನತೆ, ಸಹಬಾಳ್ವೆ, ವಿದೇಶಿ ಸಂಬಂಧ, ರಕ್ಷಣೆ, ಯುದ್ಧ, ಪರಿಸರ, ಹವಾಮಾನ ಇತ್ಯಾದಿಗಳ ಬಗ್ಗೆ ಏನು ಧೋರಣೆ ಹೊಂದಿರುತ್ತಾರೆ ಎಂಬುದರ ಗಂಭೀರ ಆಸಕ್ತಿ ಹೊಂದಿರುತ್ತಾರೆ. ಮಾಧ್ಯಮಗಳು ಅದಕ್ಕೆ ಸ್ಪಂದಿಸುತ್ತವೆ. ನಮ್ಮ ದೇಶದಲ್ಲಿ ಚುನಾವಣೆ ಸಂದರ್ಭಗಳಲ್ಲಿ ಮಾತ್ರ ರಾಜಕಾರಣಿಗಳ ಕುರಿತು ಕಾಟಾಚಾರಕ್ಕೆ, ಬೇಡದ ಆಸಕ್ತಿ ತಳೆಯುವ ಜನ ನಂತರ ಮರೆತುಬಿಡುತ್ತಾರೆ. ಇನ್ನು ನ್ಯಾಯಾಧೀಶರುಗಳ ಕುರಿತು ಸಾಮಾನ್ಯ ಜನರ ಮಾತು ಹಾಗಿರಲಿ, ಕಾನೂನು ಕಾಲೇಜುಗಳು, ಬೋಧಕರು, ವಿದ್ಯಾರ್ಥಿಗಳು ಯಾ ಬಹುತೇಕ ವಕೀಲರ ನಡುವೆಯೇ ಆಸಕ್ತಿ ಇರುವುದಿಲ್ಲ. ಮಾಹಿತಿಯೂ ಇರುವುದಿಲ್ಲ. ಜನರಿಗೇ ಬೇಡವೆಂದ ಮೇಲೆ ಮಾಧ್ಯಮಗಳಿಗೂ ಬೇಕಿಲ್ಲ. ಯಥಾ ಓದುಗ, ತಥಾ ಪತ್ರಕರ್ತ. ಅದರಲ್ಲೂ ನಮ್ಮ ದೇಶದ ಮಾಧ್ಯಮಗಳಿಗೆ ಜನರನ್ನು ಇಂತಹ ನಿಟ್ಟಿನಲ್ಲಿ ಜಾಗೃತಗೊಳಿಸಲು ನೇರ ವಿರೋಧವಿದೆ. ಆದರೆ ಮೊನ್ನೆ ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಾ. ಡಿ.ವೈ. ಚಂದ್ರಚೂಡ್ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಿರುವುದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಘೋಷಣೆ ಮಾಡಿದಾಗ (17-10-2022) ನಮ್ಮ ಮಾಧ್ಯಮಗಳು ಸಾಕಷ್ಟು ಸುದ್ದಿ ಮಾಡಬೇಕಾಯಿತು. ಅದು ಅನಿವಾರ್ಯವಾಗಿಬಿಟ್ಟಿತು. ಏಕೆಂದರೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ಸಿಜೆಐ ಆಗುವ ಮೊದಲು ಇಷ್ಟೊಂದು ಸಂಖ್ಯೆಯ, ಇಷ್ಟೊಂದು ಮಹತ್ವದ ತೀರ್ಪುಗಳನ್ನು ನೀಡಿದ್ದು ದಾಖಲೆಯೇ ಸರಿ. (ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿಯಾಗಿ ನೇಮಕಗೊಂಡ ಆರು ವರ್ಷಗಳ ಅವಧಿಯಲ್ಲಿ 513 ಪ್ರಕರಣಗಳಲ್ಲಿ ಒಬ್ಬರೇ ತೀರ್ಪು ನೀಡಿದ್ದಾರೆ. 1,057 ಪ್ರಕರಣಗಳ ತೀರ್ಪುಗಳಿಗೆ ಭಾಗಿಯಾಗಿದ್ದಾರೆ. ಇವೆಲ್ಲವೂ ಚಂದ್ರಚೂಡರು ವ್ಯಕ್ತಿಗತವಾಗಿ ಕಾರಣೀಭೂತರಾದ ಮಾತ್ರದಿಂದಲೇ ರೂಪ ಪಡೆದ ತೀರ್ಪುಗಳು)

ಮಾಧ್ಯಮಗಳು ಚಂದ್ರಚೂಡರ ಬಗ್ಗೆ ಸಾಕಷ್ಟು ವರದಿ ಮಾಡಿದವೇನೋ ಸರಿ, ಆದರೂ ಕೆಲವು ಸ್ವಾರಸ್ಯಕರ ಸಂಗತಿಗಳಿವೆ. ಅದರಲ್ಲೊಂದು; ಆಲ್ಟ್ ನ್ಯೂಸ್-ಝುಬೇರ್ ಪ್ರಕರಣವನ್ನು ಬಹುತೇಕ ಮಾಧ್ಯಮಗಳು ಉಲ್ಲೇಖ ಮಾಡದೇ ಇರುವುದು. ತಮಾಷೆ ನೋಡಿ, ಚಂದ್ರಚೂಡರಂತಹ ಮೇಲ್ವರ್ಗದಿಂದ (ಬ್ರಾಹ್ಮಣ) ಬಂದ ನ್ಯಾಯಾಧೀಶರೊಬ್ಬರು ಕ್ರಾಂತಿಕಾರಿ ಎನ್ನಬಹುದಾದ ವ್ಯಕ್ತಿತ್ವ ಶೀಲವನ್ನು ಗಳಿಸಿಕೊಂಡಿದ್ದಾರೆ. ನಮ್ಮ ಮಾಧ್ಯಮದ ಮಂದಿ ಸುಧಾರಿಸುವುದೇ ಇಲ್ಲ. ಸ್ವಲ್ಪವೇ ಸಮಯದ ಹಿಂದೆ ಹೊರಬಿದಿದ್ದ ಝುಬೇರ್ ತೀರ್ಪು ಈ ಎಲ್ಲಾ ತೀರ್ಪುಗಳಿಗಿಂತ ಹೆಚ್ಚು ಉಲ್ಲೇಖವಾಗಬೇಕಿತ್ತು. ಅದು ಪತ್ರಿಕೆ-ಮಾಧ್ಯಮಗಳ ವೃತ್ತಿ-ಅಸ್ತಿತ್ವಗಳ ಪ್ರಶ್ನೆಯಲ್ಲವೇ? ಮುಂದಿನ ಎರಡು ವರ್ಷಗಳು ಭಾರತದ ನ್ಯಾಯಾಂಗ ವ್ಯವಸ್ಥೆಯ ಚುಕ್ಕಾಣಿ ಹಿಡಿಯಲಿರುವ ವ್ಯಕ್ತಿಯ ಲಿಟ್‌ಮಸ್ ಟೆಸ್ಟ್ ನಂತಿದೆ ಆ ಪ್ರಕರಣ. ಆದರೆ ಇದನ್ನು ನಮ್ಮ ಪತ್ರಿಕೆಗಳು ಕಡೆಗಣಿಸಿದವು. ಹಾಗೆ ಮಾಡಿದವರು ದಿಗ್ಗಜರು: ಹಿಂದೂ, ಟೈಮ್ಸ್ ಆಫ್ ಇಂಡಿಯಾ, ಎಕ್ಸ್‌ಪ್ರೆಸ್, ಟೆಲಿಗ್ರಾಫ್, ಹಿಂದೂಸ್ತಾನ್ ಟೈಮ್ ಇತ್ಯಾದಿ. ಬಾಬಾ ಸಾಹೇಬ್ ಒಂದು ಕಡೆ ಹೇಳುತ್ತಾರೆ: ‘‘ಈ ದೇಶದ ಪತ್ರಿಕೆಗಳಿಗೆ ಕೆಲವರ ವಿರುದ್ಧ ಯುಗ ಯುಗಾಂತರಗಳ ಪೂರ್ವಾಗ್ರಹ ಇದೆ.’’ ನನ್ನ ಆತ್ಮೀಯ ಪತ್ರಕರ್ತರೊಬ್ಬರು ಹೀಗೆ ಒಂದು ದಿನ ಕೇಳಿದರು, ಹದಿನೈದು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಗೆ ಮರಳಬಹುದೇ ನಮ್ಮ ದೇಶ? ಇಂತಹ ಆತಂಕಕ್ಕೆ ಕಾರಣ ನಿಚ್ಚಳ. ಈ ದೇಶದ ಸಂವಿಧಾನಿಕ ವ್ಯವಸ್ಥೆ ಹಿಂದೆಂದೂ ಕಾಣದ ಹಿನ್ನಡೆ ಅನುಭವಿಸುತ್ತಿದೆ. ಗೆಳೆಯನಿಗೆ ನಾನು ಕೊಟ್ಟ ಪ್ರತಿಕ್ರಿಯೆ ತುಂಬಾ ಹಗುರ ಎನಿಸಿರಬಹುದು; ‘‘ಸುಮ್ನೆ ಇರಿ ಗುರೂ.. ವರಿ ಮಾಡ್‌ಬೇಡಿ. ಡಿ.ವೈ. ಚಂದ್ರಚೂಡ್ ಸುಪ್ರೀಂ ಕೋರ್ಟ್ ಸಿಜೆಐ ಆಗೋ ಚಾನ್ಸ್ ಇದೆ. ಆದ್ರೆ ಎಲ್ಲಾನೂ ಸರಿ ಮಾಡ್ತಾರೆ.’’ ಅದವರಿಗೆ ಮನದಟ್ಟು ಆದಂತೆ, ಅರ್ಥವಾದಂತೆ ಕಾಣಿಸಲಿಲ್ಲ. ರಾಜಕೀಯ ಪ್ರಜ್ಞೆಯ ಕೊರತೆಯಂತೆ, ವಿದ್ಯಾವಂತರಾದ ನಮಗೆ ನ್ಯಾಯಾಂಗಿಕ ಪ್ರಜ್ಞೆಯ ಕೊರತೆಯೂ ಇದೆ. ನಾನು ಆ ಮಾತನಾಡಿದ ನಾಲ್ಕೈದು ದಿನಗಳಲ್ಲಿ ನನಗೇ ಅಚ್ಚರಿಯಾಗಿ ಆಲ್ಟ್ ನ್ಯೂಸ್ ಝುಬೇರ್ ಪ್ರಕರಣವನ್ನು ಕೈಗತ್ತಿಕೊಂಡು ತ್ವರಿತ ತೀರ್ಪು ನೀಡಿದರು ನ್ಯಾಯಾಮೂರ್ತಿ ಡಾ. ಡಿ.ವೈ. ಚಂದ್ರಚೂಡ್. ಅದರ ಸ್ಪೀಡು ಜಗದ ವಾಕ್ ಸ್ವಾತಂತ್ರ್ಯ ಪರವಾದ ಜನರೆಲ್ಲಾ ಭಾರತದತ್ತ ಒಮ್ಮೆ ಚಕಿತ ನೋಟ ಬೀರುವಂತೆ ಮಾಡಿತು. ಆ ದಿವಸ ನಗರದಲ್ಲಿ ಲಭ್ಯವಿರುವ ಕನ್ನಡ, ಇಂಗ್ಲಿಷ್ ಪತ್ರಿಕೆಗಳನ್ನೆಲ್ಲಾ ಒಂದನ್ನೂ ಬಿಡದೆ ಓದಿದೆ. ನ್ಯಾಯಮೂರ್ತಿಗಳ ಒಂದೊಂದು ಮಾತು, ವಾದ ಸರಣಿಯನ್ನು ಹತ್ತತ್ತು ಬಾರಿ ಓದಿದೆ. ಗೆಳೆಯರಿಗೆಲ್ಲಾ ಓದಲು ಹೇಳಿದೆ. ಪ್ರಕರಣದಲ್ಲಿ ಚಂದ್ರಚೂಡ್ ಆಡಿದ ಮಾತುಗಳು ಕಡಿಮೆಯೇ (ವಿ.ಆರ್. ಕೃಷ್ಣ ಆಯ್ಯರ್ ಅಂತಹವರ ಅನಗತ್ಯ ವೆರ್ಬೋಸಿಟಿ ಇರಲಿಲ್ಲ). ಆದರೆ, ಒಂದೊಂದು ಶಬ್ದವೂ ಮುಟ್ಟಿ ನೋಡಿ ಕೊಳ್ಳಬೇಕಾದಷ್ಟು ಪರಿಣಾಮಕಾರಿಯಾಗಿದ್ದವು. ಕೋಪಾವೇಶವನ್ನೇನೂ ಪ್ರದರ್ಶಿಸದೆ, ತಣ್ಣಗೆ ಆಡಿದ, ಕಡಿಮೆ ಮಾತುಗಳು, ನ್ಯಾಯಮೂರ್ತಿಗಳ ಮನದಾಳದಲ್ಲಿರುವ ಕಾನೂನು ವ್ಯವಸ್ಥೆಯ ಬಗೆಗಿನ ತಾತ್ಸಾರ, ಅದು ಮುಟ್ಟಿರುವ ಅಪಾಯಕಾರಿ ಮಟ್ಟದ ಬಗ್ಗೆ ಹೇಸಿಗೆ, ಅಸಮಾಧಾನಗಳು ಎಂತದು ಎನ್ನುವುದಕ್ಕೆ ಕನ್ನಡಿಯಾಗಿವೆ. ನನಗೆ ಅದೊಂದು ಆ್ಯಕ್ಷನ್-ಥ್ರಿಲ್ಲರ್ ಕಥೆಯ ಓದು. ಥ್ರಿಲ್ಲರ್ ಸಿನೆಮಾಗೊಂದು ಪಕ್ಕ ಪರಿಪೂರ್ಣ ಕಥಾವಸ್ತು ಈ ಝುಬೇರ್ ಪ್ರಕರಣ. ಸಿನೆಮಾ ಲೋಕದಲ್ಲಿ ಕೋರ್ಟ್ ರೂಂ ಡ್ರಾಮ ಎಂಬ ಜಾನರ್ ಬಹಳ ಜನಪ್ರಿಯ. ಈ ತೀರ್ಪು ಕೊಟ್ಟ ನ್ಯಾಯಮೂರ್ತಿ ನಡತೆ, ನನಗೆ ಪ್ರೇಮ್‌ಚಂದ್‌ರ ವಾಯ್ಸಾ ಆಫ್ ಗಾಡ್, ಮತ್ತು ಬ್ರೆಕ್ಟ್ ಅವರ ಕಕೇಸಿಯನ್ ಚಾಕ್ ಸರ್ಕಲ್ ಕಥೆ-ನಾಟಕಗಳನ್ನು ಓದಿದಾಗ ಆದ ಆಹ್ಲಾದದ ಅನುಭೂತಿ ನೀಡಿತು. ಈ ತೀರ್ಪನ್ನು ಶಾಲಾ-ಕಾಲೇಜುಗಳಲ್ಲಿ ಪಠ್ಯವಾಗಿಸಬೇಕು ಎಂದು ನನ್ನ ಪ್ರತಿಪಾದನೆ. ಜಸ್ಟಿಸ್ ಡಾ. ಡಿ.ವೈ. ಚಂದ್ರಚೂಡ್ ಇನ್ನು ಅವರ ಎರಡು ವರ್ಷದ ಅವಧಿಯಲ್ಲಿ ನಿಯಮಿತವಾಗಿ ಪ್ರತೀ ದಿನ ಸುದ್ದಿಯಲ್ಲಿರುತ್ತಾರೆ. ನಾನಿಲ್ಲಿ ಹೇಳಲು ಹೊರಟಿದ್ದು ನಮ್ಮ ಉನ್ನತ ನ್ಯಾಯಾಧೀಶರುಗಳ ಪೂರ್ವಾಪರಗಳು ಮಾಧ್ಯಮಗಳಲ್ಲಿ ಸುದ್ದಿಯಾಗದಿರುವ ಬಗ್ಗೆ. ಒಂದೆರಡು ಇತ್ತೀಚಿನ ನಿದರ್ಶನಗಳನ್ನು ಮಾತ್ರ ಇಲ್ಲಿ ಸಂಕ್ಷಿಪ್ತವಾಗಿ ಉಲ್ಲೇಖ ಮಾಡಬಯಸುತ್ತೇನೆ.

ದೀಪಕ್ ಮಿಶ್ರಾ ಎಂಬವರು ನಮ್ಮ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದವರು. ಅವರು ಭಾರತದ 21ನೇ ಸಿಜೆಐ ಆಗಿದ್ದ ರಂಗನಾಥ ಮಿಶ್ರಾ ಅವರ ಸೋದರಪುತ್ರ. ಅಲ್ಪಸಂಖ್ಯಾತರ ಅಧ್ಯಯನ ಆಯೋಗದ ಅಧ್ಯಕ್ಷರಾಗಿ ಪ್ರಸಿದ್ಧ ವರದಿ ನೀಡಿದವರು, ಜಸ್ಟಿಸ್ ರಂಗನಾಥ ಮಿಶ್ರಾ. ಒಡಿಶಾದಲ್ಲಿ ಭಾರತೀಯ ಕಾಂಗ್ರೆಸ್‌ನ ನಾಯಕತ್ವ ವಹಿಸಿದ ಸ್ವಾತಂತ್ರ್ಯ ಹೋರಾಟಗಾರ ಗೋದಾಬರಿಶ್ ಮಿಶ್ರಾ ಅವರ ಮೊಮ್ಮಗ. ಅವರು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಾತಿ ಹೊಂದಿದ ಸರಿಸುಮಾರಿಗೆ ತಾವೊಬ್ಬ ಭೂರಹಿತ ಕೃಷಿಕ ಎಂಬ ಸುಳ್ಳು ಆಫಿಡವಿಟ್ ಸಲ್ಲಿಸಿ ಸರಕಾರದಿಂದ ಆ ಭೂಮಿ ಗಿಟ್ಟಿಸಿಕೊಂಡಿದ್ದರು ಎಂಬುವ ದೂರು ಸಲ್ಲಿಕೆಯಾಗಿತ್ತು. ಅಲ್ಲಿಂದ ಶುರುವಾದ ಪ್ರಕರಣ ಅವರು ಸಿಜೆಐ ಆಗಿ ನಿವೃತ್ತಿಯಾದ ಮೇಲೂ ನನೆಗುದಿಗೇ ಬಿದ್ದಿತು. ಇತ್ತೀಚೆಗೆ ಸಾಕಷ್ಟು ಪ್ರಗತಿಪರ ಎಂದು ಖ್ಯಾತಿ ಪಡೆದವರು, ವಿ.ಎನ್. ರಮಣ ಎಂಬ ಸಿಜೆಐ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ, ಇಡೀ ನ್ಯಾಯಾಂಗಕ್ಕೆ ಚುರುಕು ಮುಟ್ಟಿಸುತ್ತಿದ್ದಾರೆ ಎಂದು ಹೆಸರು ಮಾಡಿದರು. ಹಿರಿಯ ಪತ್ರಕರ್ತ ಹರೀಶ್ ಖರೆ ಇವರ ಕಾರ್ಯ ವೈಖರಿ ಕಂಡು ‘‘ರಮಣ ಎಫೆಕ್ಟ್ ಎಂಬುದೊಂದು ನ್ಯಾಯಾಂಗದಲ್ಲಿ ಉಂಟಾಗಿದೆ’’ ಎನ್ನುವ ಪ್ರಶಂಸೆ ಮಾಡಿದರು. ಇದನ್ನು ನಾನೂ ಅಲ್ಲಗಳೆಯುವುದಿಲ್ಲ. ಪ್ರಗತಿಪರರನ್ನು ಪ್ರಗತಿಪರ ಎಂದು ಒಪ್ಪಿಕೊಳ್ಳಲೇಬೇಕು. ಇಲ್ಲವಾದರೆ, ಆತ್ಮ ವಂಚನೆಯಾಗುತ್ತದೆ. ಆದರೂ ಆ ರಮಣ ಎಫೆಕ್ಟ್ ಎಂಬುದು ಬಹಳ ಅರೆಮನಸ್ಸಿನಿಂದ ಕೂಡಿತ್ತು. ಅವರ ಬಲು ಮುಖ್ಯ ತೀರ್ಪುಗಳು ಹುಳುಕುಗಳಿಂದ ಕೂಡಿತ್ತು. ಮಾನ್ಯ ಎನ್.ವಿ. ರಮಣ ಆಂಧ್ರ ಪ್ರದೇಶದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ದ ಸಂದರ್ಭ ಆ ರಾಜ್ಯ ಸರಕಾರವು ಕೈಗೆತ್ತಿಕೊಳ್ಳುತ್ತಿದ್ದ ಜನಪರ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲಿಡುತ್ತಿದ್ದ ಪ್ರತಿಗಾಮಿಯಾಗಿದ್ದರು. ಅನವಶ್ಯಕವಾಗಿ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸುವುದಕ್ಕೂ ವಿರೋಧಿಸಿದ್ದರು. ರೋಸಿಹೋದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ದೂರು ನೀಡಿದ್ದರು. ಇಂತಹ ಮಾನ್ಯ ರಮಣ ಸುಪ್ರೀಂ ಕೋರ್ಟ್ ಸಿಜೆಐ ಆಗಿ ಒಳ್ಳೆಯ ಹೆಸರು ಮಾಡಲು ಮುಂದಾದರು. ಅದಕ್ಕೆ ಅಲ್ಲಿದ್ದ ಡಿ.ವೈ ಚಂದ್ರಚೂಡ್ ಅವರ ಪ್ರೆಸೆನ್ಸ್ ಕಾರಣ ಇರಬಹುದು ಎಂಬುದು ನನ್ನ ಊಹೆ. ಜಸ್ಟಿಸ್ ಎ.ಎಸ್. ಆನಂದ್ 1998ರಲ್ಲಿ ಸಿಜೆಐ ಆದವರು. ನ್ಯಾಯಮೂರ್ತಿಗಳ ನೇಮಕಾತಿ ಪಟ್ಟಿಯೊಂದನ್ನು ಅಂದಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರಿಗೆ ಅನುಮೋದನೆಗಾಗಿ ಕಳುಹಿಸಿದರು. ಈ ಪಟ್ಟಿಯಲ್ಲಿ ಪರಿಶಿಷ್ಟ ಸಮುದಾಯದ ಜಡ್ಜ್‌ಗಳಿಗೆ ಯಾವುದೇ ಪ್ರಾತಿನಿಧ್ಯ ಇಲ್ಲದಿರುವ ಬಗ್ಗೆ ಆಕ್ಷೇಪಣೆ ಬರೆದ ರಾಷ್ಟ್ರಪತಿಯವರು ಕಡತವನ್ನು ವಾಪಸು ಕಳುಹಿಸಿದರು. (ಈ ದಿಟ್ಟ ಕ್ರಮದಿಂದಾಗಿ ಮುಂದೆ ಕೆ.ಜಿ. ಬಾಲಕೃಷ್ಣನ್ ಎಂಬ ದಲಿತರು ಭಾತರದ ಪ್ರಥಮ ದಲಿತ ಸಿ.ಜೆ.ಐ.) ಅದಕ್ಕೆ ಎಲ್ಲಿಲ್ಲದ ವ್ಯಗ್ರ ಆರ್ಭಟ ತೋರಿಸಿದವರು ಎ.ಎಸ್. ಆನಂದ್. ಆದರೆ ಅವರು ಮತ್ತು ಅವರ ಪತ್ನಿ ಅಕ್ರಮ ಆಸ್ತಿ ಗಳಿಕೆಯಲ್ಲಿ ದೊಡ್ಡ ಹೆಸರು ಮಾಡಿದ್ದರು. ಅದನ್ನು ನಮ್ಮ ಮಾಧ್ಯಮಗಳು ಸುದ್ದಿ ಮಾಡಲೇ ಇಲ್ಲ. ಪ್ರಸಕ್ತ ಸುಪ್ರೀಂಕೋರ್ಟ್‌ನ ಒಬ್ಬ ನ್ಯಾಯಮೂರ್ತಿ ಆಗಿರುವ ಮಾನ್ಯ ಅಬ್ದುಲ್ ನಝೀರ್‌ರವರು ನಮ್ಮ ರಾಜ್ಯದವರೇ. ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ಪಡೆದ ಖದೀಮರನ್ನು ರಕ್ಷಣೆ ಮಾಡುವ ತೀರ್ಪು ಕೊಟ್ಟಿದ್ದರು. ಹಾಗೆಯೇ ಜೆ.ಎಸ್. ಖೇಹರ್ ಸಿಂಗ್ ಅವರೂ ಕೂಡ. ಹೀಗೆ ಕೆದಕುತ್ತಾ ಹೋಗಬಹುದು. ಸಾವಿರಾರು ಪುಟಗಳನ್ನು ಬರೆಯಬಹುದು. ನ್ಯಾಯಮೂರ್ತಿಗಳ ಪೂರ್ವಾಪರಗಳನ್ನು ತಿಳಿಯುವ ಅಗತ್ಯ ಮತ್ತು ಹಕ್ಕು ದೇಶದ ಪ್ರಜೆಗಳಿಗೆ ಇದೆ. ಅದು ಪ್ರಜೆಗಳ ಜೀವಿಸುವ ಹಕ್ಕಿನ ಭಾಗ ಎಂಬುದು ನನ್ನ ತಿಳುವಳಿಕೆ. ಆದರೆ ನಮ್ಮ ರಾಷ್ಟ್ರೀಯ ದಿನಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಪಟ್ಟಭದ್ರರ ಪಬ್ಲಿಕ್ ರಿಲೇಷನ್ಸ್ ಕೆಲಸದಲ್ಲಿ ತೊಡಗಿಸಿಕೊಂಡಿವೆ. ಸದ್ಯಕ್ಕೆ ಇಷ್ಟು ಇರಲಿ.

Similar News