ಉತ್ತಮ ವ್ಯವಸ್ಥೆಯೊಂದನ್ನು ಹಾಳುಗೆಡವಬೇಡಿ: ನ್ಯಾಯಾಧೀಶರ ನೇಮಕಾತಿ ಕುರಿತು ಸುಪ್ರೀಂ ಕೋರ್ಟ್

Update: 2022-12-02 16:10 GMT

ಹೊಸದಿಲ್ಲಿ,ಡಿ.2: ನ್ಯಾಯಾಧೀಶರ ನೇಮಕಾತಿ ವ್ಯವಸ್ಥೆಯನ್ನು ಹಳಿ ತಪ್ಪಿಸಬಾರದು ಮತ್ತು ಆ ಕೆಲಸವನ್ನು ನಿರ್ವಹಿಸುತ್ತಿರುವ ನ್ಯಾಯಾಧೀಶರ ಕೊಲಿಜಿಯಂ ಅತ್ಯಂತ ಪಾರದರ್ಶಕವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಹೇಳಿದೆ. ಕೊಲಿಜಿಯಂ ಕುರಿತು ರಾಷ್ಟ್ರವ್ಯಾಪಿ ತೀವ್ರ ಚರ್ಚೆಗಳ ನಡುವೆಯೇ ಸರ್ವೋಚ್ಚ ನ್ಯಾಯಾಲಯದ ಈ ತೀಕ್ಷ್ಣ ಹೇಳಿಕೆ ಹೊರಬಿದ್ದಿದೆ.

ಆರ್ಟಿಐ(RTI) ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು ಕೈಗೆತ್ತಿಕೊಂಡಿತ್ತು. ಸರ್ವೋಚ್ಚ ನ್ಯಾಯಾಲಯದ 2018ರ ವಿವಾದಾತ್ಮಕ ಸಭೆಯ ವಿವರಗಳನ್ನು ಕೋರಿ ಆರ್ಟಿಐ ಕಾಯ್ದೆಯಡಿ ತಾನು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯದ ನಿರ್ಧಾರವನ್ನು ಅವರು ಪ್ರಶ್ನಿಸಿದ್ದಾರೆ.

ವಿಚಾರಣೆ ಸಂದರ್ಭ ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು,ಆರ್ಟಿಐ(RTI) ಅಡಿ ಕೊಲಿಜಿಯಂ  ನಿರ್ಣಯಗಳಿಗೆ ಉತ್ತರಗಳು ಲಭಿಸುತ್ತವೆಯೇ? ಇದು ಪ್ರಶ್ನೆ. ಇದನ್ನು ತಿಳಿಯುವ ಹಕ್ಕು ಈ ದೇಶದ ಜನರಿಗೆ ಇಲ್ಲವೇ ಎಂದು ಪ್ರಶ್ನಿಸಿದರು.

ಆರ್ಟಿಐ(RTI) ಮೂಲಭೂತ ಹಕ್ಕು ಎಂದು ಸ್ವತಃ ನ್ಯಾಯಾಲಯವೇ ಹೇಳಿತ್ತು. ಈಗ ಸರ್ವೋಚ್ಚ ನ್ಯಾಯಾಲಯವು ಹಿಂದೆ ಸರಿಯುತ್ತಿದೆ. ಮುಖ್ಯ ನ್ಯಾಯಮೂರ್ತಿ ಮತ್ತು ಸರಕಾರದ ನಡುವಿನ ಎಲ್ಲ ಪತ್ರವ್ಯವಹಾರಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿಸಬೇಕು ಎಂದು ಅದು ಹೇಳಿತ್ತು ಎಂದರು.

ಇದಕ್ಕೆ ಉತ್ತರಿಸಿದ ನ್ಯಾ.ಶಾ,‘ಕೊಲಿಜಿಯಂ ಸಭೆಯಲ್ಲಿ ಯಾವುದೇ ನಿರ್ಣಯವನ್ನು ಅಂಗೀಕರಿಸಲಾಗಿರಲಿಲ್ಲ. ಮಾಜಿ ಸದಸ್ಯರು ಮಾಡಿದ ಯಾವುದಕ್ಕೂ ಪ್ರತಿಕ್ರಿಯಿಸಲು ನಾವು ಬಯಸುವುದಿಲ್ಲ. ನಿರ್ಣಯಗಳ ಬಗ್ಗೆ ಟೀಕಿಸುವುದು ಕೊಲಿಜಿಯಮ್ನ ಮಾಜಿ ಸದಸ್ಯರ ಫ್ಯಾಷನ್ ಆಗಿಬಿಟ್ಟಿದೆ ’ಎಂದರು.

ನಾವು ಅತ್ಯಂತ ಪಾರದರ್ಶಕ ಸಂಸ್ಥೆಯಾಗಿದ್ದೇವೆ. ನಾವು ಹಿಂದೆ ಸರಿಯುತ್ತಿಲ್ಲ. ಅನೇಕ ಮೌಖಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ’ ಎಂದು ಅವರು ಹೇಳಿದರು.

2018,ಡಿ.12ರ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಸಭೆಯ ಕಾರ್ಯಸೂಚಿ,ನಡಾವಳಿಗಳು ಮತ್ತು ನಿರ್ಣಯವನ್ನು ಕೋರಿದ್ದ ಮೇಲ್ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಕಳೆದ ಜುಲೈನಲ್ಲಿ ವಜಾಗೊಳಿಸಿತ್ತು. ಅದಕ್ಕೂ ಮುನ್ನ ಮನವಿಯು ಕೇಂದ್ರ ಮಾಹಿತಿ ಆಯೋಗ (cic) ಸೇರಿದಂತೆ ಹಲವು ಹಂತಗಳಲ್ಲಿ ತಿರಸ್ಕರಿಸಲ್ಪಟ್ಟಿತ್ತು.

ಅಂಜಲಿ ಭಾರದ್ವಾಜ್ ಅವರು ತನ್ನ ಅರ್ಜಿಗಳಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರ ಆತ್ಮಕಥೆ ‘ಜಸ್ಟೀಸ್ ಫಾರ್ ಜಡ್ಜ್’ನ ಆಯ್ದ ಭಾಗವೊಂದನ್ನು ಪ್ರಸ್ತಾಪಿಸಿದ್ದರು. ಕೊಲಿಜಿಯಂ ತನ್ನ ಡಿಸೆಂಬರ್ 2018ರ ಸಭೆಯಲ್ಲಿ ಆಗ ರಾಜಸ್ಥಾನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ.ಪ್ರದೀಪ್ ನಂದ್ರಜೋಗ್ ಮತ್ತು ದಿಲ್ಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ.ರಾಜೇಂದ್ರ ಮೆನನ್ ಅವರ ಹೆಸರುಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೆ ಶಿಫಾರಸು ಮಾಡಲು ಒಪ್ಪಿಕೊಂಡಿತ್ತು ಎಂದು ನ್ಯಾ.ಗೊಗೊಯಿ ಉಲ್ಲೇಖಿಸಿದ್ದಾರೆ.

ಆತ್ಮಕಥೆಯ ಪ್ರಕಾರ ಇಬ್ಬರು ಮುಖ್ಯನ್ಯಾಯಾಧೀಶರ ಪದೋನ್ನತಿಯ ಸುದ್ದಿಯು ಸೋರಿಕೆಯಾಗಿದ್ದರಿಂದ ನಿರ್ಣಯವನ್ನು ತಡೆಹಿಡಿಯಲಾಗಿತ್ತು ಹಾಗೂ ನೂತನ ಕೊಲಿಜಿಯಂ 2019,ಜ.10ರ ತನ್ನ ನಿರ್ಣಯದಲ್ಲಿ ಪದೋನ್ನತಿಗಾಗಿ ನ್ಯಾ.ನಂದ್ರಜೋಗ್ ಮತ್ತು ನ್ಯಾ.ಮೆನನ್ ಅವರ ಹೆಸರುಗಳನ್ನು ಅನುಮೋದಿಸಿರಲಿಲ್ಲ.

Similar News