ತಮಿಳುನಾಡಿನ ಸರಕಾರಿ ವೈದ್ಯರಿಗೆ ಶೇ.50ರಷ್ಟು ಸೂಪರ್ ಸ್ಪೆಷಾಲಿಟಿ ಸೀಟ್ ಗಳು ಮೀಸಲು: ಸುಪ್ರೀಂ ಕೋರ್ಟ್

Update: 2022-12-02 16:11 GMT

ಹೊಸದಿಲ್ಲಿ,ಡಿ.2: ಸರ್ವೋಚ್ಚ ನ್ಯಾಯಾಲಯವು ಹಾಲಿ ಶೈಕ್ಷಣಿಕ ವರ್ಷಕ್ಕಾಗಿ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿಯ ಶೇ.50ರಷ್ಟು ಸೂಪರ್ ಸ್ಪೆಷಾಲಿಟಿ ಸೀಟ್ ಗಳನ್ನು ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಸರಕಾರಿ ಸೇವೆಯಲ್ಲಿರುವ ವೈದ್ಯರಿಗೆ ಹಂಚಿಕೆ ಮಾಡಲು ಶುಕ್ರವಾರ ತಮಿಳುನಾಡು ಸರಕಾರಕ್ಕೆ ಅನುಮತಿ ನೀಡಿದೆ.

15 ದಿನಗಳಲ್ಲಿ 2020,ನ.7ರ ತಮಿಳುನಾಡು ಸರಕಾರದ ಆದೇಶದಂತೆ ಸೀಟ್ಗಳನ್ನು ಭರ್ತಿ ಮಾಡುವಂತೆ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ವಿಕ್ರಮನಾಥ್ ಅವರ ಪೀಠವು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು. ಸೇವೆಯಲ್ಲಿರುವ ಸರಕಾರಿ ವೈದ್ಯರಿಂದ ಭರ್ತಿಯಾಗದೆ ಉಳಿದಿರುವ ಎಲ್ಲ ಸೀಟ್ಗಳ ಕುರಿತು ಮಾಹಿತಿಯನ್ನು 16ನೇ ದಿನ ಕೇಂದ್ರ ಸರಕಾರಕ್ಕೆ ನೀಡುವಂತೆಯೂ ಪೀಠವು ರಾಜ್ಯ ಸರಕಾರಕ್ಕೆ ಸೂಚಿಸಿತು.

ಸೂಪರ್ ಸ್ಪೆಷಾಲಿಟಿ ಸೀಟ್ ಗಳ ಕುರಿತು ತನ್ನ ಆದೇಶವನ್ನು ರಾಜ್ಯ ಸರಕಾರವು ಬಲವಾಗಿ ಸಮರ್ಥಿಸಿಕೊಂಡಿತ್ತು.

‘ತಮಿಳುನಾಡು ಸರಕಾರವು ಈ ನ್ಯಾಯಾಲಯದ 2022,ಮಾ.16ರ ಆದೇಶದ ಕುರಿತು ಸ್ಪಷ್ಟನೆಯನ್ನು ಕೋರಿದೆ. ಈ ಆದೇಶವು ಅರ್ಜಿಗಳು ಇತ್ಯರ್ಥಗೊಳ್ಳುವವರೆಗೆ ಎಲ್ಲ ಶೈಕ್ಷಣಿಕ ವರ್ಷಗಳಿಗೆ ಅನ್ವಯಿಸುತ್ತದೆ. ನಾವು ವಕೀಲರ ವಾದಗಳನ್ನು ಆಲಿಸಿದ್ದೇವೆ. ಕಳೆದ ವರ್ಷ ಸೇವೆಯಲ್ಲಿರುವ ಅಭ್ಯರ್ಥಿಗಳಿಗಾಗಿ ಮೀಸಲಿರಿಸಲಾಗಿದ್ದ ಹಲವಾರು ಸೀಟ್ ಗಳನ್ನು ತುಂಬಲು ಸಾಧ್ಯವಾಗಿರಲಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ. ಸೂಪರ್ ಸ್ಪೆಷಾಲಿಟಿ ಕೋರ್ಸ್ ಗಳು ಅಮೂಲ್ಯ ರಾಷ್ಟ್ರೀಯ ಆಸ್ತಿಗಳಾಗಿವೆ ಮತ್ತು ಅವು ವ್ಯರ್ಥಗೊಳ್ಳಲು ಅವಕಾಶ ನೀಡಬಾರದು ಎಂದು ಅವರು ನಿವೇದಿಸಿಕೊಂಡಿದ್ದಾರೆ. ಸಮಸ್ಯೆಗೆ ಅಂತಿಮ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ ಎಂಬ ಅವರ ಕಳಕಳಿಯನ್ನು ನಾವು ಮೆಚ್ಚಿದ್ದೇವೆ. ಆದಾಗ್ಯೂ ಪ್ರಸಕ್ತ ಶೈಕ್ಷಣಿಕ ವರ್ಷಕ್ಕಾಗಿ ಸರಕಾರಿ ಆದೇಶದ ಆಧಾರದಲ್ಲಿ ಸೀಟ್ಗಳನ್ನು ಭರ್ತಿ ಮಾಡಲು ರಾಜ್ಯ ಸರಕಾರಕ್ಕೆ ಅನುಮತಿ ನೀಡುವುದು ಅಗತ್ಯವಾಗಿದೆ ಎನ್ನುವುದು ನಮಗೆ ಮನದಟ್ಟಾಗಿದೆ ’ ಎಂದು ಪೀಠವು ತಿಳಿಸಿತು.

ಮಾ.16ರ ತನ್ನ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಸೇವೆಯಲ್ಲಿರುವ ವೈದ್ಯರಿಗೆ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಶೇ.50ರಷ್ಟು ಸೂಪರ್ ಸ್ಪೆಷಾಲಿಟಿ ಸೀಟ್ ಗಳ ಹಂಚಿಕೆಗಾಗಿ 2021-22ನೇ ಸಾಲಿಗೆ ಕೌನ್ಸೆಲಿಂಗ್ ಮುಂದುವರಿಸಲು ತಮಿಳುನಾಡು ಸರಕಾರಕ್ಕೆ ಅನುಮತಿ ನೀಡಿತ್ತು.

ತಮಿಳುನಾಡು ಸರಕಾರದ ಮಾಹಿತಿಯಂತೆ ಖಾಲಿಯಿರುವ ಸೀಟ್ ಗಳನ್ನು ಅಖಿಲ ಭಾರತ ಮೆರಿಟ್ ಲಿಸ್ಟ್ ಗೆ ಅನುಗುಣವಾಗಿ ಭರ್ತಿ ಮಾಡಲು ಶುಕ್ರವಾರ ಕೇಂದ್ರ ಸರಕಾರಕ್ಕೆ ಅನುಮತಿ ನೀಡಿದ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯನ್ನು 2023,ಫೆ.14ಕ್ಕೆ ಮುಂದೂಡಿತು.

Similar News