ಕಾಬೂಲ್: ಪಾಕ್ ದೂತಾವಾಸದತ್ತ ಗುಂಡಿನ ದಾಳಿ

Update: 2022-12-02 16:51 GMT

ಕಾಬೂಲ್, ಡಿ.2: ಅಫ್ಘಾನ್ ರಾಜಧಾನಿ ಕಾಬೂಲ್ನಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಭದ್ರತಾ ಸಿಬಂದಿ ಗಾಯಗೊಂಡಿರುವುದಾಗಿ  ವರದಿಯಾಗಿದೆ.

ದೂತಾವಾಸದ ಮುಖ್ಯಸ್ಥರ ಹತ್ಯೆಗೆ ನಡೆದಿರುವ ಪ್ರಯತ್ನ ಇದಾಗಿದ್ದು ಈ ದಾಳಿಗೆ ಹೊಣೆಯಾದವರನ್ನು ತಕ್ಷಣ ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಆಗ್ರಹಿಸಿದ್ದಾರೆ. ದೂತಾವಾಸದ ಹಿಂದೆ ಇರುವ ಮನೆಗಳ ಮರೆಯಿಂದ ಬಂದ ದಾಳಿಕೋರ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು ರಾಯಭಾರ ಕಚೇರಿಯ ಭದ್ರತಾ ಸಿಬಂದಿ ಗಾಯಗೊಂಡಿದ್ದಾರೆ ಎಂದು ಕಚೇರಿಯ ಸಿಬಂದಿಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಇದೊಂದು ವಿಫಲ ದಾಳಿಯಾಗಿದೆ. ಕಾಬೂಲ್ನಲ್ಲಿ ರಾಜತಾಂತ್ರಿಕ ನಿಯೋಗದ ಭದ್ರತೆಗೆ ಯಾವುದೇ ಬೆದರಿಕೆ ಎದುರಾಗಲು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಅವಕಾಶ ನೀಡುವುದಿಲ್ಲ ಎಂದು ಅಫ್ಘಾನ್ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.

ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ಪಾಕ್ ಮಾನ್ಯತೆ ನೀಡದಿದ್ದರೂ ಕಾಬೂಲ್ನಲ್ಲಿ ಪೂರ್ಣಪ್ರಮಾಣದ ರಾಜತಾಂತ್ರಿಕ ನಿಯೋಗವನ್ನು ಮುಂದುವರಿಸಿದೆ.                                 

Similar News