ಪ್ರವಾದಿ ಬದುಕು ಸರ್ವ ಕಾಲಕ್ಕೂ ಮಾದರಿ: ಅಥರ್ ಖಾನ್

ಎಚ್‌ಐಎಫ್‌ ಇಂಡಿಯಾ ವತಿಯಿಂದ ಪ್ರವಾದಿ ಮುಹಮ್ಮದ್(ಸ)ರ ಜೀವನ-ಸಂದೇಶ ಅಭಿಯಾನದ ಸಮಾರೋಪ

Update: 2022-12-02 17:08 GMT

ಮಂಗಳೂರು: ಪ್ರವಾದಿ ಮುಹಮ್ಮದ್ (ಸ) ಅವರ ನಡೆನುಡಿ, ಬದುಕು ಸರ್ವರಿಗೂ, ಸರ್ವಕಾಲಕ್ಕೂ ಮಾದರಿಯಾಗಿದೆ. ಅದನ್ನು ಮನನ ಮಾಡುವುದರ ಜೊತೆಗೆ ಪ್ರತಿಯೊಬ್ಬರೂ ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಭೋಪಾಲ್‌ನ ಅಲ್ ಅಸ್ರ್  ಫೌಂಡೇಶನ್‌ನ ಅಧ್ಯಕ್ಷ, ಧಾರ್ಮಿಕ ವಿದ್ವಾಂಸ ಅಥರ್ ಖಾನ್ ಹೇಳಿದರು.

ಮಂಗಳೂರಿನ ‘ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (ಎಚ್‌ಐಎಫ್) ಇಂಡಿಯಾ’ ಹಮ್ಮಿಕೊಂಡಿದ್ದ ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ಸಂದೇಶ ಅಭಿಯಾನ (ಸೀರತ್ ಕಾರ್ಯಕ್ರಮ)ದ ಪ್ರಯುಕ್ತ ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ‘ನಾನೇಕೆ ಪ್ರವಾದಿಯಂತೆ ಆಗಬೇಕು’ ಎಂಬ ವಿಷಯ ಕುರಿತು ಅವರು ಸಂದೇಶ ನೀಡಿದರು.

ಪ್ರವಾದಿಯ ಕಾಲದ ಅನುಯಾಯಿಗಳು ಪ್ರವಾದಿ (ಸ) ಅವರನ್ನು ಪ್ರತೀ ಹೆಜ್ಜೆಯಲ್ಲೂ ಅನುಸರಿಸುತ್ತಿದ್ದರು. ತಮ್ಮ ಮಕ್ಕಳಿಗೆ ಪ್ರವಾದಿಯ ಜೀವನದ ಪ್ರತಿಯೊಂದು ಕ್ಷಣವನ್ನೂ ಕೂಡ ಬೋಧಿಸುತ್ತಿದ್ದರು. ಆದರೆ ಆಧುನಿಕತೆಯತ್ತ ವಾಲುತ್ತಿರುವ ಇಂದಿನ ಯುವಜನತೆ ಪ್ರವಾದಿಯ ನಡೆನುಡಿಯಿಂದ ವಿಮುಖರಾಗುತ್ತಿರುವುದು ವಿಷಾದನೀಯ ಎಂದು ಅಥರ್ ಖಾನ್ ಅಭಿಪ್ರಾಯಪಟ್ಟರು.

ನಾವು ದಿನನಿತ್ಯ ನಮ್ಮ ಮಕ್ಕಳಿಗೆ ಪ್ರವಾದಿಯ ಜೀವನ ಮತ್ತು ಸಂದೇಶವನ್ನು ಕಲಿಸಿಕೊಡಬೇಕು. ಸಂಬಂಧ ಗಳನ್ನು ವೃದ್ಧಿಸುವಂತಹ, ಮಾನವೀಯ ಮೌಲ್ಯಗಳನ್ನು ಸದಾ ಹೇಳಿಕೊಡಬೇಕು. ಅಷ್ಟೇ ಅಲ್ಲ, ಸದಾ ಪ್ರವಾದಿಯ ಪ್ರತಿರೂಪವಾಗಿ ನಾವು ಬಾಳಬೇಕು. ಬದುಕಿನುದ್ದಕ್ಕೂ ಅವರನ್ನು ನಾವು ಮಾದರಿಯಾಗಿ ಸ್ವೀಕರಿಸಬೇಕು. ಇದರಿಂದ ಜೀವನದ ಪ್ರತಿಯೊಂದು ಹಂತದಲ್ಲೂ ಯಶಸ್ವಿ ಸಾಧಿಸಲು ಸಾಧ್ಯವಿದೆ ಎಂದು ಅಥರ್ ಖಾನ್ ಹೇಳಿದರು.

ಹದೀಸ್‌ಗಳು ಹಲವಾರು ಇವೆ. ಅದನ್ನು ಪಾಲಿಸುತ್ತಲೇ ಉನ್ನತ ಮಟ್ಟದ ವ್ಯಕ್ತಿತ್ವ ಹೊಂದಿದ್ದ ಪ್ರವಾದಿಯ ಮಾನವೀಯ ಮೌಲ್ಯವನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಆ ಮೂಲಕ ಸಮಾಜಕ್ಕೆ, ಸಮುದಾಯಕ್ಕೆ ಒಳಿತಿನ ಸಂದೇಶಕರಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಎಚ್‌ಐಎಫ್-ಇಂಡಿಯಾ ಅಧ್ಯಕ್ಷ ನಾಝಿಮ್ ಎ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕ ಮುಹಮ್ಮದ್ ಹನೀಫ್ ಪಿ.ಎಸ್. ಸ್ವಾಗತಿಸಿದರು. ಎಚ್‌ಐಎಫ್ ಜೊತೆ ಕಾರ್ಯದರ್ಶಿ ಮುಹಮ್ಮದ್ ರಿಝ್ವಾನ್ ಪಾಂಡೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಾಯಿಖ್ ಅಹ್ಮದ್ ಮತ್ತು ಮುಹಮ್ಮದ್ ಅರ್ಮಾನ್ ಕಿರಾಅತ್ ಪಠಿಸಿದರು. ಬಿಲಾಲ್ ರಾಯಿಫ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

Similar News