ಸುರತ್ಕಲ್ ಟೋಲ್‌ಗೇಟ್‌ನಲ್ಲಿದ್ದ ಕಾರ್ಮಿಕರಿಗೆ ಉದ್ಯೋಗ ನೀಡುವ ಮೂಲಕ ಭರವಸೆ ಉಳಿಸಿಕೊಂಡು ಪ್ರತಿಭಾ ಕುಳಾಯಿ

Update: 2022-12-02 17:35 GMT

ಸುರತ್ಕಲ್‌, ಡಿ.2: ಸುರತ್ಕಲ್ ಟೋಲ್‌ಗೇಟ್‌ ತೆರವಿನ ಬಳಿಕ ಅಲ್ಲಿನ ಕಾರ್ಮಿಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಅವರು ಉದ್ಯೋಗ ಕಲ್ಪಿಸುವ ಮೂಲಕ ಭರವಸೆಯನ್ನು ಉಳಿಸಿಕೊಂಡು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸುರತ್ಕಲ್‌ ಟೋಲ್‌ಗೇಟ್‌ ತೆರವಾದರೆ ನಮ್ಮ ಆದಾಯ, ಕುಟುಂಬದ ಗತಿಯೇನು ಎಂದು ಟೋಲ್‌ಗೇಟ್‌ನ ಸ್ಥಳೀಯ ನೌಕರರು ಪ್ರತಿಭಾ ಅವರನ್ನು ಪ್ರಶ್ನಿಸಿದ್ದರು. ಈ ಕುರಿತು ಕೆಲದಿನಗಳ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಅವರು, ಟೋಲ್‌ಗೇಟ್‌ನಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ 35 ಮಂದಿಗೂ ಉದ್ಯೋಗ ಕಲ್ಪಿಸುವುದಾಗಿ ನೌಕರರಿಗೆ ಭರವಸೆ ನೀಡಿದ್ದರು. ಅದರಂತೆ 32 ಮಂದಿಯ ಪೈಕಿ ಉದ್ಯೋಗ ಅರಸಿ ಬಂದಿದ್ದ 19 ಮಂದಿಗೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸುವ ಮೂಲಕ ತಮ್ಮ ಭರವಸೆಯನ್ನು ಉಳಿಸಿಕೊಂಡಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಸುರತ್ಕಲ್ ಟೋಲ್ ಗೇಟ್ ನಲ್ಲಿ ಉದ್ಯೋಗ ಕಳೆದುಕೊಂಡ 35 ಮಂದಿಯನ್ನು ನಾನು ಭೇಟಿಯಾಗಿ ಅವರಿಗೆ ಅವರ ವಿದ್ಯಾರ್ಹತೆಗೆ ಅನುಸಾರವಾಗಿ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿದ್ದೆ. ಅದರಂತೆ 22 ಮಂದಿ ನನ್ನನ್ನು ಭೇಟಿಯಾಗಿದ್ದು ಬಹುಪಾಲು ಯುವಕ-ಯುವತಿಯರಿಗೆ ಬೇರೆ ಬೇರೆ ಸಂಸ್ಥೆಗಳಲ್ಲಿ ಸೂಕ್ತ ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದೇನೆ. ಉದ್ಯೋಗ ಕಳೆದುಕೊಂಡವರಲ್ಲಿ ಒಬ್ಬ ವಿದ್ಯಾರ್ಥಿಯಾಗಿದ್ದು ಆತನ ಮನೆಯ ಪರಿಸ್ಥಿತಿ ತೀರಾ ಹದಗೆಟ್ಟಿರುವ ಕಾರಣ ಹಗಲು ಕೆಪಿಟಿಯಲ್ಲಿ ಕಲಿತು ರಾತ್ರಿ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದ. ಆತನನ್ನು ನನ್ನ ಕುಳಾಯಿ ಫೌಂಡೇಶನ್ ಮೂಲಕ ದತ್ತು ಪಡೆದು ಶಿಕ್ಷಣದ ಖರ್ಚು ವೆಚ್ಚ ನೋಡಿಕೊಳ್ಳುವ ಜೊತೆಗೆ ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದೇನೆ. ಇನ್ನೊಬ್ಬ ಮಹಿಳೆ ಟೋಲ್ ನಲ್ಲಿ ದುಡಿದು ತನ್ನ ಮಕ್ಕಳನ್ನು ಸಾಕುತ್ತಿದ್ದು ಆಕೆಗೆ ಸೂಕ್ತ ಉದ್ಯೋಗ ಕೊಡಿಸಿ ಮಕ್ಕಳನ್ನು ಶೈಕ್ಷಣಿಕ ದತ್ತು ಪಡೆಯಲಿದ್ದೇನೆ” ಎಂದು ತಿಳಿಸಿದ್ದಾರೆ.

ಪ್ರತಿಭಾ ಅವರ ಕೆಲಸವನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ಅಭಿನಂಧಿಸಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Similar News