ಆಧುನಿಕ ಫಿಸಿಯೋಥೆರಪಿಸ್ಟ್‌ಗಳು ಸಾಂಪ್ರದಾಯಿಕ ಔಷಧ ಪದ್ಧತಿಯತ್ತ ಗಮನಹರಿಸಿ: ಡಾ.ನಿರಂಜನ್ ವಾನಳ್ಳಿ

Update: 2022-12-02 17:40 GMT

ಕೊಣಾಜೆ: ಫಿಸಿಯೋಥೆರಪಿ  ಆಯುರ್ವೇದದ ಭಾಗವೂ ಆಗಿದೆ. ಆಧುನಿಕ ಫಿಸಿಯೋಥೆರಪಿಸ್ಟ್ ಗಳು  ಸಾಂಪ್ರದಾಯಿಕ ಔಷಧ ಪದ್ಧತಿಯತ್ತ ಗಮನಹರಿಸಬೇಕು. ಅಂತರಾಷ್ಟ್ರೀಯ ಸಮ್ಮೇಳನ ಇಂತಹ ಜ್ಞಾನ ಸಂಪಾದನೆಗೆ ಪೂರಕವಾಗಲಿ  ಎಂದು ಬೆಂಗಳೂರು ಉತ್ತರ ವಿ.ವಿ ಉಪಕುಲಪತಿ ಡಾ.ನಿರಂಜನ್ ವಾನಳ್ಳಿ ಅಭಿಪ್ರಾಯಪಟ್ಟರು.

ಅವರು  ನಿಟ್ಟೆ ಫಿಸಿಯೋಥೆರಪಿ ಸಂಸ್ಥೆ ಬೆಳ್ಳಿ ಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ ಆಡಿಟೋರಿಯಂನಲ್ಲಿ ನಡೆಯುವ ಅಂತರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನ `ಫಿಸಿಯೋ ಫನೇಸಿಯಾ-2022' ಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾಂಪ್ರದಾಯಿಕ ತಂತ್ರಗಳನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಕಲಿಸುವ ಕೆಲಸಗಳಾಗುತ್ತಿಲ್ಲ. ಸಾಂಪ್ರದಾಯಿಕ ಔಷಧಿಯ ಪದ್ಧತಿಯನ್ನು ಮರೆಯಲು ಅಸಾಧ್ಯ. ಇಂತಹ ವಿಚಾರಗಳ ಮೇಲೆ ಕಲಿಕೆ ಇದ್ದಲ್ಲಿ ಯಶಸ್ಸಿಗೆ ದಾರಿ. ದೇಶದ ಫಿಸಿಯೋಥೆರಪಿಸ್ಟ್ ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ  ಪಡೆದವರು. ಸಮ್ಮೇಳನದಿಂದ ಜ್ಞಾನವೃದ್ಧಿಯ ಜೊತೆಗೆ ಇನ್ನಷ್ಟು ನಾವೀನ್ಯತೆಗಳು ಆವಿಷ್ಕಾರವಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿ.ವಿಯ ಕುಲಾಧಿಪತಿ ಎನ್. ವಿನಯ ಹೆಗ್ಡೆ ಮಾತನಾಡಿ, ತರಗತಿಗಳಲ್ಲಿ ಸಿಗುವ ಜ್ಞಾನ ವಿಭಿನ್ನ. ಸಹೋದ್ಯೋಗಿಗಳ ಸಹಕಾರ, ವ್ಯವಸ್ಥೆ ಜತೆಗೆ ಹೊಂದಾಣಿಕೆ ಹಾಗೂ ರೋಗಿಗಳ ಜೊತೆಗಿನ ಒಡನಾಟದ ಜ್ಞಾನ ಕ್ಷೇತ್ರದಲ್ಲಿ ಯಶಸ್ಸನ್ನು ತಂದುಕೊಡುವುದು. 1980 ರಿಂದ ನಿಟ್ಟೆ ಎಂಬ ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಮೂಲಕ ಆರಂಭವಾದ ಸಂಸ್ಥೆ ಇಂದು ಉನ್ನತ ಶಿಕ್ಷಣ ಕೊಡುವಂತೆ ತಲುಪುವಲ್ಲಿ ಆಡಳಿತ ಹಾಗೂ ಸಿಬ್ಬಂದಿ ವರ್ಗದ ಶ್ರಮ ಇದೆ ಎಂದರು.

ಇಂಡಿಯನ್ ಎಸೋಸಿಯೇಶನ್ ಆಫ್ ಫಿಸಿಯೋಥೆರಫಿ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎಂ. ಅಣ್ಣಾಮಲೈ ಮಾತನಾಡಿದರು.

ಕಾರ್ಯಕ್ರಮದಲ್ಲಿ ಫಿಸಿಯೋಥೆರಫಿ ತಜ್ಞರಾದ ಡಾ. ಸವಿತಾ, ಡಾ. ಎಸ್. ನಟರಾಜನ್, ಡಾ. ಪೃಥ್ವಿರಾಜ್ ಆರ್, ಡಾ. ಅಜಿತ್ ಸೋಮನ್, ಡಾ. ಪಾರ್ಥ ಪೋತಿನ್ ರೇ, ಡಾ. ರಾಸೀಝ್ ಎನ್, ಡಾ. ಸುದೀಪ್ ಕಾಲೆ, ಡಾ. ಕಾಮರಾಜ್ ಹಾಗೂ ಡಾ. ಹರೀಶ್ ಕೃಷ್ಣ, ಪ್ರತಿಭಾನ್ವಿತರಾದ ಪಾಟಿಯಾಲದ ಡಾ.ಎ.ಜಿ.ಕೆ. ಸಿಂಗ್ ಅವರಿಗೆ ಅಕಾಡೆಮಿಕ್ ಸಾಧನೆಗಾಗಿ ಹಾಗೂ ಕ್ಲಿನಕಲ್ ಸರ್ವಿಸ್ ಗಾಗಿ ಬಹರೈನ್ ಡಾ. ಶ್ರೀದೇವಿ ಶ್ರೀರಾಮರಾಜನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಿಟ್ಟೆ ವಿವಿ ಸಹ ಕುಲಪತಿ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ, ಕುಲಸಚಿವ, ಡಾ. ಹರ್ಷ ಹಾಲಹಳ್ಳಿ ಉಪಸ್ಥಿತರಿದ್ದರು.

ಬಹರೈನ್, ಫಿಲಿಪೈನ್ಸ್, ಹಾಂಕಾಂಗ್ ಸೇರಿದಂತೆ ಬೇರೆ ಬೇರೆ ಭಾಗದ ಇಪ್ಪತ್ತು  ಅಂತರಾಷ್ಟ್ರೀಯ ಮಟ್ಟದ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಡಾ. ಪುರುಷೋತ್ತಮ್ ಸನ್ಮಾನಿತರನ್ನು ಪರಿಚಯಿಸಿದರು.

ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಡೀನ್ ಪ್ರೊ. ಡಾ. ದಾನೇಶ್ ಕುಮಾರ್ ಯು.ಕೆ. ಸ್ವಾಗತಿಸಿದರು. ಅಸಿಸ್ಟೆಂಟ್ ಪ್ರೊ. ಐಶ್ವರ್ಯ ನಾಯರ್ ವಂದಿಸಿದರು. ಡಾ. ಜುಮಾನಾ ಭಗತ್ ಕಾರ್ಯಕ್ರಮ ನಿರೂಪಿಸಿದರು.

ಸಂಜೆ ಗಣ್ಯರ ಉಪಸ್ಥಿತಿಯಲ್ಲಿ ಮಲಯಾಳಂ ಸಿನಿಮಾದ ಹಿನ್ನೆಲೆ ಗಾಯಕರಾದ ವಿಮಲ್ ರಾಯ್, ತಾನಿಯಾ ಎಲಿಜಬೆತ್ ಮ್ಯಾಥ್ಯೂ ಮತ್ತು ಶ್ರೇಯಾ ಎಸ್. ಮೆನನ್ ಅವರಿಂದ ಸಂಗೀತ ಹಾಗೂ ಚೆಂಡೆ ಪ್ರದರ್ಶನ ನಡೆಯಿತು.

Similar News