ಐಪಿಎಲ್ ನಲ್ಲಿ ಆಡುವುದಕ್ಕೆ ನಿವೃತ್ತಿ ಘೋಷಿಸಿದ ಬ್ರಾವೊ

ಇನ್ನು ಬೌಲಿಂಗ್ ಕೋಚ್ ಆಗಿ ಹೊಸ ಪಾತ್ರ

Update: 2022-12-02 17:47 GMT

ಹೊಸದಿಲ್ಲಿ, ಡಿ. 2: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್, ವೆಸ್ಟ್ ಇಂಡೀಸ್ನ ಡ್ವಾಯ್ನ್ ಬ್ರಾವೊ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುವುದಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಅವರು ಇನ್ನು ತಂಡದಲ್ಲಿ ಹೊಸ ಪಾತ್ರವನ್ನು ನಿಭಾಯಿಸಲಿದ್ದಾರೆ.

2023ರ ಋತುವಿಗೆ ಪೂರ್ವಭಾವಿಯಾಗಿ ಹಿರಿಯ ಆಟಗಾರ ಬ್ರಾವೊರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಅವರು ತಂಡದ ಹಾಲಿ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿಯ ಸ್ಥಾನವನ್ನು ವಹಿಸಲಿದ್ದಾರೆ. ಬಾಲಾಜಿ ವೈಯಕ್ತಿಕ ಕಾರಣಗಳಿಗಾಗಿ ಒಂದು ವರ್ಷದ ಅವಧಿಗೆ ವಿರಾಮ ತೆಗೆದುಕೊಂಡಿದ್ದಾರೆ.

‘‘ಈ ಹೊಸ ಪಾತ್ರವನ್ನು ನಾನು ಎದುರು ನೋಡುತ್ತಿದ್ದೆ. ನನ್ನ ಆಡುವ ದಿನಗಳು ಸಂಪೂರ್ಣವಾಗಿ ಮುಗಿದಾಗ ಕೋಚ್ ಆಗಬೇಕೆನ್ನುವ ಯೋಚನೆ ನನ್ನಲ್ಲಿತ್ತು. ಬೌಲರ್ಗಳೊಂದಿಗೆ ಕೆಲಸ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ. ಈ ಪಾತ್ರದ ಬಗ್ಗೆ ನಾನು ರೋಮಾಂಚಿತನಾಗಿದ್ದೇನೆ’’ ಎಂದು ಚೆನ್ನೈ ಸೂಪರ್ ಕಿಂಗ್ಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಬ್ರಾವೊ ಹೇಳಿದ್ದಾರೆ.

‘‘ಆಟಗಾರನಿಂದ ಕೋಚ್ ಆಗಲು ನಾನು ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ನನಗನಿಸುತ್ತದೆ. ಯಾಕೆಂದರೆ, ನಾನು ಆಡುವಾಗ ಬೌಲರ್ಗಳೊಂದಿಗೆ ಯಾವಾಗಲೂ ಮಾತನಾಡುತ್ತಾ, ಎದುರಾಳಿ ಬ್ಯಾಟ್ಸ್ಮನ್ಗಳನ್ನು ಹೇಗೆ ನಿಯಂತ್ರಿಸುವುದು ಎಂಬ ಬಗ್ಗೆ ಯೋಜನೆಗಳನ್ನು ರೂಪಿಸುತ್ತಿರುತ್ತೇನೆ. ಒಂದೇ ಒಂದು ವ್ಯತ್ಯಾಸವೆಂದರೆ, ನಾನಿನ್ನು ಮಿಡ್-ಆನ್ ಅಥವಾ ಮಿಡ್-ಆಫ್ (ಫೀಲ್ಡಿಂಗ್)ನಲ್ಲಿ ನಿಂತುಕೊಳ್ಳುವುದಿಲ್ಲ’’ ಎಂದು ಅವರು ಹೇಳಿದ್ದಾರೆ.

ಐಪಿಎಲ್ನ ಗರಿಷ್ಠ ವಿಕೆಟ್ ಗಳಿಕೆದಾರ

ಐಪಿಎಲ್ನಲ್ಲಿ ಅತ್ಯಂತ ಹೆಚ್ಚು ವಿಕೆಟ್ಗಳನ್ನು ಪಡೆದಿರುವ ದಾಖಲೆಯನ್ನು ಡ್ವಾಯ್ನ್ ಬ್ರಾವೊ ಹೊಂದಿದ್ದಾರೆ. ಅವರು 161 ಪಂದ್ಯಗಳಲ್ಲಿ 183 ವಿಕೆಟ್ ಗಳನ್ನ ಉರುಳಿಸಿದ್ದಾರೆ. ಆಲ್ರೌಂಡರ್ 130ರ ಸ್ಟ್ರೈಕ್ರೇಟ್ನಲ್ಲಿ 1560 ರನ್ ಗಳನ್ನ ಗಳಿಸಿದ್ದಾರೆ. ಸೂಪರ್ ಕಿಂಗ್ಸ್ ನ ಹಲವು ವಿಜಯಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

Similar News