ಮನುಷ್ಯನ ಮೆದುಳಿಗೆ ಎಲೆಕ್ಟ್ರಾನಿಕ್ ಚಿಪ್: ಪ್ರಯೋಗಕ್ಕೆ ಸಜ್ಜಾದ ಎಲಾನ್ ಮಸ್ಕ್

Update: 2022-12-02 17:48 GMT

ಸ್ಯಾನ್ ಫ್ರಾನ್ಸಿಸ್ಕೋ: ಟೆಕ್ ದಿಗ್ಗಜ, ಬಿಲಿಯಾಧಿಪತಿ ಎಲಾನ್‌ ಮಸ್ಕ್‌ (Elon Musk) ತಮ್ಮ ನೂತನ ಮಹತ್ವಾಕಾಂಕ್ಷೆಯನ್ನು ಘೋಷಿಸಿದ್ದು, ತಮ್ಮ ಸಂಸ್ಥೆಯು ಮಾನವನ ಮೆದುಳಿಗೆ ಅಳವಡಿಸುವ ರೋಬಾಟಿಕ್‌ ಚಿಪ್‌ (Brain Chip) ಅನ್ನು ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದ್ದಾರೆ. ಇದನ್ನು ಶೀಘ್ರದಲ್ಲೇ ಮನುಷ್ಯರ ಮೇಲೆ ಪ್ರಯೋಗಿಸಲು ಸಂಸ್ಥೆಯು ಎದುರು ನೋಡುತ್ತಿದೆ ಎಂದು ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.

ಎಲಾನ್‌ ಮಸ್ಕ್‌ ಅವರ ಸ್ಟಾರ್ಟ್‌ ಅಪ್‌ ಸಂಸ್ಥೆಯಾಗಿರುವ ನ್ಯೂರಾಲಿಂಕ್‌ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಈ ಚಿಪ್‌ ಅಳವಡಿಸಿದ ಬಳಕೆದಾರರು ಮೆದುಳಿನ ಸಂಜ್ಞೆಯನ್ನು ನೇರವಾಗಿ ಮೊಬೈಲ್‌, ಕಂಪ್ಯೂಟರ್‌ ಮೊದಲಾದ ಎಲೆಕ್ಟ್ರಾನಿಕ್‌ ಸಾಧನಗಳಿಗೆ ರವಾನಿಸಬಹುದು ಎಂದು ಹೇಳಲಾಗಿದೆ. 

ಈ ಯೋಜನೆಯನ್ನು ಮುಖ್ಯವಾಗಿ, ಮೆದುಳಿನ ಸಂಜ್ಞೆಯನ್ನು ತಮ್ಮ ದೇಹದ ಇತರೆ ಭಾಗಗಳಿಗೆ ರವಾನಿಸಲು ಸಾಧ್ಯವಾಗದ, ತಮ್ಮ ದೇಹದ ಭಾಗಗಳ ಮೇಲೆ ಸ್ವಾಧೀನ ಕಳೆದುಕೊಂಡವರಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಕೈಗಳ ಮೇಲೆ ಸ್ವಾಧೀನವಿಲ್ಲದವರೂ ಈ ಚಿಪ್‌ ಮೂಲಕ ತಮ್ಮ ಎಲೆಕ್ಟ್ರಾನಿಕ್‌ ಸಾಧನಗಳನ್ನು ಸಂಜ್ಞೆಗಳ ಮೂಲಕ ಬಳಕೆ ಮಾಡಬಹುದು ಎಂದು ಸಂಸ್ಥೆಯ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ. 

ಈಗಾಗಲೇ ಈ ಪ್ರಯೋಗಗಳನ್ನು ಕೋತಿಗಳ ಮೇಲೆ ಯಶಸ್ವಿಯಾಗಿ ಮಾಡಿದ್ದು, ಮನುಷ್ಯರ ಮೇಲೆ ಪ್ರಯೋಗ ಮಾಡಲು ಕಂಪೆನಿಯು ಎದುರು ನೋಡುತ್ತಿದೆ. ಕಂಪ್ಯೂಟರ್‌ಗಳೊಂದಿಗೆ ಮೆದುಳಿನಿಂದಲೇ ನೇರವಾಗಿ ಸಂವಹನ ಸಾಧ್ಯವಾಗುವಂತಹ ಈ ಚಿಪ್‌ಗಳು ಸಂಪೂರ್ಣ ಕಾರ್ಯರೂಪಕ್ಕೆ ಬಂದರೆ ತಮ್ಮ ದೇಹದ ಮೇಲೆ ಸ್ವಾಧೀನ ಕಳೆದುಕೊಂಡವರಿಗೆ ಪ್ರಯೋಜನಕಾರಿಯಾಗಿರಲಿದೆ ಎಂದು ಹೇಳಲಾಗಿದೆ. 

ತಮ್ಮ ಸ್ನಾಯುಗಳ ಮೇಲೆ ಸ್ವಾಧೀನ ಕಳೆದುಕೊಂಡವರು, ಆರೋಗ್ಯ ಪೂರ್ಣ ವ್ಯಕ್ತಿಗಳಿಗಿಂತ ವೇಗವಾಗಿ ಈ ಚಿಪ್‌ ಮೂಲಕ ತಮ್ಮ ಫೋನ್‌ಗಳನ್ನು ನಿರ್ವಹಿಸಬಲ್ಲರು ಎಂದು ಎಲಾನ್‌ ಮಸ್ಕ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಇದು ಅಸಾಧ್ಯ ಎನಿಸಬಹುದು. ಆದರೂ, ಬೆನ್ನು ಹುರಿ ಮುರಿದವರೂ ಈ ಚಿಪ್‌ ಮೂಲಕ ತಮ್ಮ ದೇಹದ ಎಲ್ಲಾ ಭಾಗದ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಿದೆ” ಎಂದು ಮಸ್ಕ್‌ ಹೇಳಿದ್ದಾರೆ.

ಇದನ್ನೂ ಓದಿ: ಜಿದ್ದಾದಿಂದ ಹೊರಟಿದ್ದ 197 ಪ್ರಯಾಣಿಕರಿದ್ದ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಷ

Similar News