ವಿಕಲಚೇತನರ ಅಗತ್ಯಗಳಿಗೆ ಪೂರ್ಣ ಸಹಕಾರ: ದ.ಕ. ಡಿಸಿ ರವಿಕುಮಾರ್

Update: 2022-12-03 09:01 GMT

ಮಂಗಳೂರು, ಡಿ.3: ದ.ಕ. ಜಿಲ್ಲೆಯ ವಿಕಲಚೇತನರಿಗೆ ಅಗತ್ಯ ಸೌಲಭ್ಯ, ಸಹಕಾರವನ್ನು ನೀಡುವ ನಿಟ್ಟಿನಲ್ಲಿ ಸ್ಪಂದಿಸುವುದಾಗಿ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.

ದ.ಕ.ಜಿಲ್ಲಾ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಗರದ ಕುದ್ಮುಲ್‌ ರಂಗರಾವ್ ಪುರಭವನದಲ್ಲಿ ಆಯೋಜಿಸಲಾದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಹದ ಎಲ್ಲಾ ಅಂಗಗಳಿದ್ದೂ ಸಮಾಜದಲ್ಲಿ ದೃಷ್ಟಿಹೀನರಾಗಿ ಬದುಕುವವರ ನಡುವೆ ದೈಹಿಕ, ಮಾನಸಿಕ ಅಂಗವೈಕಲ್ಯದ ಹೊರತಾಗಿಯೂ ಮಾದರಿಯಾಗಿ, ಕಲೆ- ಸಂಸ್ಕೃತಿಯ ಪ್ರತೀಕವಾಗಿ ನಮ್ಮ ಮುಂದಿರುವ ವಿಕಲಚೇತನರು ಸಮಾಜಕ್ಕೆ ಮಾದರಿ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ಸಿವಿಲ್ ನ್ಯಾಯಾಧೀಶೆ ಶೋಭಾ, ಉದ್ಯಮಿ ಗಣೇಶ್ ಶೆಟ್ಟಿ, ಅಶೋಕ್ ಮೊಯ್ಲಿ, ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಕಲಚೇತನರಿಗಾಗಿನ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಸನ್ಮಾನ ನಡೆಯಿತು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಕಲಚೇತನರನ್ನು ಗೌರವಿಸಲಾಯಿತು. ಗಾಲಿಕುರ್ಚಿ, ಶ್ರವಣ ಸಾಧನ ಸೇರಿದಂತೆ ವಿಕಲಚೇತನರಿಗೆ ವಿವಿಧ ಇಲಾಖೆಗಳಿಂದ ಬಿಡುಗಡೆಯಾದ ವಿವಿಧ ರೀತಿಯ ಸಲಕರಣೆಗಳನ್ನು ಈ ಸಂದರ್ಭ ವಿತರಿಸಲಾಯಿತು.

ದ.ಕ. ನೂತನ ಜಿಲ್ಲಾಧಿಕಾರಿಯ ಸರಳತೆ:

ನಿಗದಿತ ಸಮಯಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ದ.ಕ. ಜಿಲ್ಲೆಯ ನೂತನ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ವಿಶೇಷ ಮಕ್ಕಳ ಜಾಥಾದಲ್ಲಿ ಪಾಲ್ಗೊಂಡರು. ಜಾಥಾದಲ್ಲಿ ಹುಲಿವೇಷಧಾರಿ ವಿಶೇಷ ಮಕ್ಕಳನ್ನು ತಬ್ಬಿಕೊಂಡು ಜಿಲ್ಲಾಧಿಕಾರಿ ಭಾವುಕರಾದ ಪ್ರಸಂಗವೂ ನಡೆಯಿತು. ಬಳಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ವಿಶೇಷ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅತ್ಯಂತ ಶಾಂತಚಿತ್ತದಿಂದ ವೀಕ್ಷಿಸಿದರು. ಈ ಸಂದರ್ಭ ತಮ್ಮ ಬಳಿಗೆ ಬಂದ ವೃದ್ಧೆ ತಾಯಿಯೊಬ್ಬರ ಅಳಲಿಗೆ ಸ್ಥಳದಲ್ಲೇ ಸ್ಪಂದಿಸುವ ಮೂಲಕ ಸರಳತೆಯನ್ನು ಮೆರೆದರು.

ಶಕ್ತಿನಗರದ ಮೀರಾ ಭಟ್ ಹೆಸರಿನ ಮಹಿಳೆ ತನ್ನಿಬ್ಬರು ವಿಕಲಚೇತನ ಹೆಣ್ಣು ಮಕ್ಕಳಿಗೆ ಬರುತ್ತಿರುವ ಮಾಶಾಸನ ಹೆಚ್ಚುವರಿಯಾಗಿದ್ದರೂ ಜಾರಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ, ತಕ್ಷಣ ಸ್ಥಳದಲ್ಲೇ ಪತ್ರಕ್ಕೆ ಸಹಿ ಹಾಕಿ ತಮ್ಮ ಸಹಾಯಕರಿಗೆ ಕರೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಪ್ರಸಂಗವೂ ನಡೆಯಿತು.

ಜನಪ್ರತಿನಿಧಿಗಳ ಅನುಪಸ್ಥಿತಿ!

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಳಗ್ಗೆ 9.15ಕ್ಕೆ ವಿಶ್ವ ವಿಕಲಚೇತನರ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು. ಆರಂಭದಲ್ಲಿ ಸಾನ್ನಿಧ್ಯ ವಿಶೇಷ ಶಾಲೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಿಯಮಾನುಸಾರ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಹೆಸರೂ ಮುದ್ರಣಗೊಂಡಿತ್ತು. ಸುಮಾರು 10.30ಕ್ಕೆ ಸಭಾ ಕಾರ್ಯಕ್ರಮ ಉದ್ಘಾಟನೆಗೊಂಡು 11.30ರವರೆಗೂ ಯಾವನೇ ಓರ್ವ ಜನಪ್ರತಿನಿಧಿಯೂ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ.

Similar News