ನ್ಯಾಯವ್ಯವಸ್ಥೆಯ ಅಂಚುಗಳ ನೆಲಸಮವನ್ನು ನೋಡಿ ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ ಎಂದ ದಿಲ್ಲಿ ಹೈಕೋರ್ಟ್

Update: 2022-12-03 11:48 GMT

ಹೊಸದಿಲ್ಲಿ: ಸರಕಾರಿ ಜಮೀನಿನಲ್ಲಿ ನಿರ್ಮಾಣಗೊಂಡ ಚ್ಯಾರಿಟೇಬಲ್ ಆಸ್ಪತ್ರೆಯ ಲೀಸ್ ಡೀಡ್ ಅನ್ನು ರದ್ದುಗೊಳಿಸಿದ ಆದೇಶವನ್ನು ಬದಿಗೆ ಸರಿಸಿ ತೀರ್ಪು ಪ್ರಕಟಿಸಿದ ದಿಲ್ಲಿ ಹೈಕೋರ್ಟ್ (Delhi High Court), ನ್ಯಾಯದಾನದ ಅಂಚುಗಳನ್ನು ಹಾಡುಹಗಲೇ ನೆಲಸಮಗೊಳಿಸುತ್ತಿರುವಾಗ ಪ್ರಜಾಪ್ರಭುತ್ವದ ಆತ್ಮಸಾಕ್ಷಿ ರಕ್ಷಕನಾಗಿರುವ ನ್ಯಾಯಾಲಯ ಕಣ್ಣುಮುಚ್ಚಿ ಕುಳಿತಿರಲು ಸಾಧ್ಯವಿಲ್ಲ ಎಂದು ಹೇಳಿದೆ.

ಉದಾತ್ತ ಕಾರ್ಯವೊಂದರಲ್ಲಿ ತೊಡಗಿಕೊಂಡಿರುವ ಚ್ಯಾರಿಟೇಬಲ್ ಆಸ್ಪತ್ರೆಗೆ ಲೀಸ್ ಡೀಡ್ ರದ್ದತಿ ಮತ್ತು ತೆರವು ಪ್ರಕ್ರಿಯೆಗೊಳಗಾಗವಂತೆ ಮಾಡುವುದು  ಸರಿಯಾಗದು ಎಂದು ನ್ಯಾಯಾಲಯ ಹೇಳಿದೆ.

ಎಲ್ಲರ ಕಲ್ಯಾಣದ ಸಾಧನವಾಗಬೇಕಾಗಿರುವ ಕಾನೂನನ್ನು ಈ ಪ್ರಕರಣದಲ್ಲಿ ದೌರ್ಜನ್ಯದ ಸಾಧನವನ್ನಾಗಿಸಲಾಗಿದೆಎಂದು ಜಸ್ಟಿಸ್ ಚಂದ್ರ ಧಾರಿ ಸಿಂಗ್ ಅವರು ಆದೇಶ ಪ್ರಕಟಿಸುವ ಸಂದರ್ಭ ಹೇಳಿದರು.

ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ 1995 ರಲ್ಲಿ ಖೋಸ್ಲಾ ಮೆಡಿಕಲ್ ಇನ್‍ಸ್ಟಿಟ್ಯೂಟ್‍ನ ಲೀಸ್ ಡೀಡ್ ಅನ್ನು ರದ್ದುಗೊಳಿಸಿ ಹಾಗೂ  ಸ್ಥಳವನ್ನು ತೆರವುಗೊಳಿಸುವಂತೆ ನೀಡಿದ್ದ ಸೂಚನೆಯನ್ನು ವಿಚಾರಣಾಧೀನ ನ್ಯಾಯಾಲಯ ಎತ್ತಿ ಹಿಡಿದಿರುವುದನ್ನು ಪ್ರಶ್ನಿಸಿ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ದಿಲ್ಲಿ  ಹೈಕೋರ್ಟ್ ನಡೆಸಿ ಮೇಲಿನ ಆದೇಶ ಹೊರಡಿಸಿದೆ.

ಲೀಸ್ ಡೀಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಕ್ಕೆ ಯಾವುದೇ ಪುರಾವೆಯಿಲ್ಲದೇ ಇರುವುದರಿಂದ ಲೀಸ್ ಡೀಡ್ ರದ್ದತಿ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳಿದೆ.

Similar News