‘ನಾವು ಕಂಡೂ ಕಾಣದ ಗಾಂಧಿ’ ಕೃತಿ ಬಿಡುಗಡೆ

Update: 2022-12-03 14:15 GMT

ಉಡುಪಿ, ಡಿ.3: ಉಡುಪಿ ಸುಹಾಸಂ ವತಿಯಿಂದ ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಓ.ಆರ್.ಪ್ರಕಾಶ್ ಬರೆದ ‘ನಾವು ಕಂಡೂ ಕಾಣದ ಗಾಂಧಿ’ ಪುಸ್ತಕ ಬಿಡುಗಡೆ ಸಮಾರಂಭವು ಶನಿವಾರ ಉಡುಪಿ ಕಿದಿಯೂರು ಹೊಟೇಲಿನ ಅನಂತಶಯನ ಹಾಲ್‌ನಲ್ಲಿ ನಡೆಯಿತು.

ಪುಸ್ತಕವನ್ನು ಬಿಡುಗಡೆಗೊಳಿಸಿದ ಮನೋ ತಜ್ಞ ಡಾ.ಪಿ.ವಿ.ಭಂಡಾರಿ ಮಾತನಾಡಿ, ಗಾಂಧೀಜಿ ವೈಯಕ್ತಿಕ, ಸಾರ್ವಜನಿಕ ಬದುಕು ಒಂದೇ ಆಗಿದ್ದರಿಂದಲೇ ಮಹಾತ್ಮನ ಪಟ್ಟವೇರಿದ್ದಾರೆ. ಜನರ ಹೃದಯದಲ್ಲಿ ಇಂದಿಗೂ ನೆಲೆಸಿದ್ದಾರೆ. ಗಾಂಧೀಜಿ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ. ಗಾಂಧಿ ವಿಚಾರದಲ್ಲಿ ನಾವು ಕಣ್ಣಿದ್ದೂ ಕುರುಡರಾಗಿದ್ದೇವೆ. ಗಾಂಧೀಜಿ ಆತ್ಮಚರಿತ್ರೆಯಲ್ಲಿ ಸತ್ಯ ದರ್ಶನವಿದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ವಹಿಸಿದ್ದರು. ಉಡುಪಿ ಡಿಐಇಟಿ ಹಿರಿಯ ಉಪನ್ಯಾಸಕ ಡಾ.ಅಶೋಕ್ ಕಾಮತ್ ಪುಸ್ತಕ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ ಲೇಖಕ ಅರವಿಂದ ಚೊಕ್ಕಾಡಿ, ಕಸಾಪ ಉಡುಪಿ ತಾಲೂಕು ಕಾರ್ಯದರ್ಶಿ ಜನಾರ್ದನ ಕೊಡವೂರು ಉಪಸ್ಥಿತರಿದ್ದರು. ಬೈಂದೂರು ಸಹಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯ ಕ್ರಮ ನಿರೂಪಿಸಿದರು.  

Similar News