ಮಹಾರಾಷ್ಟ್ರ:11.5 ಕೋ.ರೂ.ಮೌಲ್ಯದ 288 ಮೆ.ಟ.ಅಡಿಕೆ ಈ.ಡಿ.ಯಿಂದ ಜಪ್ತಿ

Update: 2022-12-03 15:53 GMT

ಮುಂಬೈ,ಡಿ.3: ಅಡಿಕೆ ಕಳ್ಳಸಾಗಾಣಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಈ.ಡಿ.)ವು 11.5 ಕೋ.ರೂ.ಮೌಲ್ಯದ 288 ಮೆ.ಟನ್ ಅಡಿಕೆಯನ್ನು ವಶಪಡಿಸಿಕೊಂಡಿದೆ. ಈ ಅಡಿಕೆಯನ್ನು ಇಂಡೋನೇಷ್ಯಾದಿಂದ ಭಾರತ-ಮ್ಯಾನ್ಮಾರ್ ಗಡಿಯ ಮೂಲಕ ಕಳ್ಳಸಾಗಣೆ ಮಾಡಲಾಗಿತ್ತು. 16.5 ಲ.ರೂ.ನಗದು,ಆಕ್ಷೇಪಾರ್ಹ ದಾಖಲೆಗಳು,ಡಿಜಿಟಲ್ ಸಾಧನಗಳು ಮತ್ತು ಇತರ ಸಾಕ್ಷಾಧಾರಗಳನ್ನೂ ಈ.ಡಿ.ವಶಪಡಿಸಿಕೊಂಡಿದೆ. ಈ.ಡಿ.ಮಹಾರಾಷ್ಟ್ರದ ಗೊಂಡಿಯಾ ಮತ್ತು ನಾಗ್ಪುರ ಜಿಲ್ಲೆಗಳಲ್ಲಿಯ ಗೋದಾಮುಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ದಾಳಿ ಕಾರ್ಯಾಚರಣೆಗಳನ್ನು ನಡೆಸಿತ್ತು.

ಇಂಡೋನೇಷ್ಯಾದ ಅಡಿಕೆಯ ಪೂರೈಕೆದಾರರು,ಕಮಿಷನ್ ಏಜೆಂಟ್‌ಗಳು,ಲಾಜಿಸ್ಟಿಕ್ ಪೂರೈಕೆದಾರರು,ಸಾಗಣೆದಾರರು, ಹವಾಲಾ ಆಪರೇಟರ್‌ಗಳು ಮತ್ತು ಖರೀದಿದಾರರನ್ನು ಒಳಗೊಂಡ ಸುವ್ಯವಸ್ಥಿತ ಜಾಲವೊಂದು ಈ.ಡಿ.ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಜಾಲವು ಭಾರತ-ಮ್ಯಾನ್ಮಾರ್ ಗಡಿಯ ಮೂಲಕ ಇಂಡೋನೇಷ್ಯಾದ ಅಡಿಕೆಯನ್ನು ದೇಶದೊಳಗೆ ಕಳ್ಳ ಸಾಗಣೆ ಮಾಡುತ್ತಿತ್ತು. ನಕಲಿ ದೇಶಿಯ ಇನ್ವಾಯ್ಸಾಗಳನ್ನು ಬಳಸಿಕೊಂಡು ಕಳ್ಳ ಸಾಗಾಣಿಕೆ ಮಾಡಲಾಗಿದ್ದ ಅಡಿಕೆಯನ್ನು ಗೊಂಡಿಯಾ ಮತ್ತು ನಾಗ್ಪುರಗಳಿಗೆ ತರಲಾಗಿತ್ತು ಎಂದು ಈ.ಡಿ.ಹೇಳಿಕೆಯಲ್ಲಿ ತಿಳಿಸಿದೆ.

ಈ.ಡಿ.ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆಯಡಿ ಅಡಿಕೆ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ವಿವಿಧ ವ್ಯಕ್ತಿಗಳ ಕಚೇರಿಗಳು ಮತ್ತು ಮನೆಗಳು ಸೇರಿದಂತೆ ಮುಂಬೈ ಮತ್ತು ನಾಗ್ಪುರ ಜಿಲ್ಲೆಗಳಲ್ಲಿಯ 17 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.

ಸಿಬಿಐ ನಾಗ್ಪುರ ಘಟಕವು 5-3-2021ರಂದು ದಾಖಲಿಸಿಕೊಂಡಿದ್ದ ಎಫ್‌ಐಆರ್‌ನ ಆಧಾರದಲ್ಲಿ ಈ.ಡಿ.ತನಿಖೆಯನ್ನು ಆರಂಭಿಸಿತ್ತು. ನಾಗ್ಪುರದ ಹಲವಾರು ವ್ಯಾಪಾರಿಗಳು ವಿವಿಧ ಸರಕಾರಿ ನೌಕರರ ಶಾಮೀಲಾತಿಯೊಂದಿಗೆ ಇಂಡೋನೇಷ್ಯಾದಿಂದ ಕಳಪೆ ಗುಣಮಟ್ಟದ ಅಡಿಕೆಯ ಕಳ್ಳಸಾಗಣೆಯಲ್ಲಿ ತೊಡಗಿದ್ದರು ಮತ್ತು ನಕಲಿ ದಾಖಲೆಗಳನ್ನು ಬಳಸಿಕೊಂಡು ಈ ಅಡಿಕೆಯನ್ನು ದಕ್ಷಿಣ ಏಷ್ಯಾ ಆದ್ಯತೆ ವ್ಯಾಪಾರ ಒಪ್ಪಂದ (ಎಸ್‌ಎಪಿಟಿಎ) ಮತ್ತು ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ (ಎಸ್‌ಎಎಫ್‌ಟಿಎ)ಗಳ ಸದಸ್ಯರಾಷ್ಟ್ರಗಳಿಂದ ತರಿಸಲಾಗಿದೆ ಎಂದು ಸುಳ್ಳು ಹೇಳಿದ್ದರು. ತನ್ಮೂಲಕ ಸರಕಾರಕ್ಕೆ ಕಸ್ಟಮ್ಸ್ ಸುಂಕ ಪಾವತಿಯಿಂದ ನುಣುಚಿಕೊಂಡಿದ್ದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

Similar News