ನ್ಯಾಯಾಧೀಶರ ನೇಮಕಾತಿ : ಸಿಜೆಐ ಉಪಸ್ಥಿತಿಯಲ್ಲಿಯೇ ಸುಪ್ರೀಂ ವಿರುದ್ಧ ಕಿಡಿಕಾರಿದ ಉಪರಾಷ್ಟ್ರಪತಿ

Update: 2022-12-03 16:22 GMT

ಹೊಸದಿಲ್ಲಿ,ಡಿ.3: ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ (ಎನ್‌ಜೆಎಸಿ) ಕಾಯ್ದೆಯನ್ನು ರದ್ದುಗೊಳಿಸಿದ ಬಳಿಕ ಸಂಸತ್ತಿನಲ್ಲಿ ಯಾವುದೇ ‘ಪಿಸು ಮಾತು’ಗಳು ಕೇಳುತ್ತಿಲ್ಲ ಎಂದು ಹೇಳಿರುವ ಉಪರಾಷ್ಟ್ರಪತಿ ಜಗದೀಪ ಧಂಕರ್ (Jagdeep Dhankar)ಅವರು,ಇದು ತುಂಬ ಗಂಭೀರವಾದ ವಿಷಯವಾಗಿದೆ ಎಂದು ಬಣ್ಣಿಸಿದ್ದಾರೆ.

ಶುಕ್ರವಾರ ಇಲ್ಲಿ ಎಲ್.ಎಂ.ಸಿಂಘ್ವಿ(LM Singhvi) ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಧಂಕರ್,ಸಂಸತ್ತು ಅಂಗೀಕರಿಸಿದ ಕಾನೂನು ಜನರ ಆಶಯಗಳನ್ನು ಪ್ರತಿಫಲಿಸಿತ್ತು ಮತ್ತು ಅದನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿತ್ತು. ವಿಶ್ವದಲ್ಲಿ ಇಂತಹ ವಿದ್ಯಮಾನ ನಡೆದಿರುವ ಇನ್ನೊಂದು ನಿದರ್ಶನವಿಲ್ಲ ಎಂದು ಹೇಳಿದರು.

ಸಂವಿಧಾನದ ನಿಬಂಧನೆಗಳನ್ನು ಉಲ್ಲೇಖಿಸಿದ ಅವರು,ಕಾನೂನಿನ ವಸ್ತುನಿಷ್ಠ ಪ್ರಶ್ನೆಯು ಒಳಗೊಂಡಿರುವಾಗ ನ್ಯಾಯಾಲಯಗಳು ಅದನ್ನು ಪರಿಶೀಲಿಸಬಹುದು,ಆದರೆ ನಿಬಂಧನೆಯನ್ನು ರದ್ದುಗೊಳಿಸಬೇಕು ಎಂದು ಎಲ್ಲೂ ಹೇಳಿಲ್ಲ ಎಂದು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಡಿ.ವೈ.ಚಂದ್ರಚೂಡ (DY Chandrachud)ಅವರ ಉಪಸ್ಥಿತಿಯಲ್ಲಿ ಹೇಳಿದರು.

ಸಂವಿಧಾನದ ಪೀಠಿಕೆಯು ‘ಭಾರತದ ಜನರಾದ ನಾವು ’('We the people of India')ಎಂದು ಉಲ್ಲೇಖಿಸುತ್ತದೆ ಮತ್ತು ಸಂಸತ್ತು ಜನರ ಆಶಯಗಳನ್ನು ಪ್ರತಿಫಲಿಸುತ್ತದೆ. ಅದರ ಅರ್ಥ ಅಧಿಕಾರ ಜನರಲ್ಲಿ,ಅವರ ಆದೇಶದಲ್ಲಿ ಮತ್ತು ಅವರ ವಿವೇಕದಲ್ಲಿ ಇರುತ್ತದೆ ಎಂದರು.

ಎನ್‌ಜೆಎಸಿ ಕಾಯ್ದೆಯನ್ನು ಪ್ರಸ್ತಾಪಿಸಿದ ಧಂಕರ್,2015-16ರಲ್ಲಿ ಸಂಸತ್ತು ಸಂವಿಧಾನ ತಿದ್ದುಪಡಿ ಕಾಯ್ದೆಯ ಬಗ್ಗೆ ಚರ್ಚಿಸಿತ್ತು ಮತ್ತು ಇಡೀ ಲೋಕಸಭೆಯು ಅವಿರೋಧವಾಗಿ ಅದನ್ನು ಬೆಂಬಲಿಸಿತ್ತು. ರಾಜ್ಯಸಭೆಯಲ್ಲಿಯೂ ಅದು ಸರ್ವಾನುಮತದಿಂದ ಅಂಗೀಕಾರಗೊಂಡಿದ್ದು,ಓರ್ವ ಸದಸ್ಯರು ಗೈರುಹಾಜರಾಗಿದ್ದರು. ಜನರ ಆಣತಿಯನ್ನು ಸಾಂವಿಧಾನಿಕ ನಿಬಂಧನೆಯಾಗಿ ಪರಿವರ್ತಿಸಲಾಗಿತ್ತು. ಆದರೆ ಶಾಸನಬದ್ಧ ವೇದಿಕೆಯ ಮೂಲಕ ಅಭಿವ್ಯಕ್ತಿಗೊಂಡಿದ್ದ ಜನರ ಅಧಿಕಾರವನ್ನು ರದ್ದುಗೊಳಿಸಲಾಗಿತ್ತು. ಇಂತಹ ಯಾವುದೇ ನಿದರ್ಶನ ವಿಶ್ವಕ್ಕೆ ತಿಳಿದಿಲ್ಲ ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಕಗೊಳಿಸುವ ಕೊಲಿಜಿಯಂ ವ್ಯವಸ್ಥೆಯನ್ನು ತೆಗೆದುಹಾಕಲು ಬಯಸಿದ್ದ ಎನ್‌ಜೆಎಸಿ ಕಾಯ್ದೆಯನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್,ಅದನ್ನು ಅಸಾಂವಿಧಾನಿಕ ಎಂದು ಬಣ್ಣಿಸಿತ್ತು.

ಸಾಂವಿಧಾನಿಕ ನಿಬಂಧನೆಯನ್ನು ರದ್ದುಗೊಳಿಸಿರುವ ವಿಶ್ವದ ಮತ್ತೊಂದು ನಿದರ್ಶನವನ್ನು ಹುಡುಕಿ ಎಂದು ಇಲ್ಲಿ ಉಪಸ್ಥಿತರಿರುವ ನ್ಯಾಯಾಂಗದ ಗಣ್ಯ ವರ್ಗ,ಆಲೋಚಕರು ಮತ್ತು ಬುದ್ಧಿಜೀವಿಗಳನ್ನು ತಾನು ಕೋರುತ್ತಿದ್ದೇನೆ ಎಂದು ಧಂಕರ್ ಹೇಳಿದರು.

ಧಂಕರ್ ನ.26ರಂದು ದಿಲ್ಲಿಯಲ್ಲಿ ನಡೆದಿದ್ದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿಯೂ ಇಂತಹದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

ಕಾರ್ಯಾಂಗ,ಶಾಸಕಾಂಗ ಮತ್ತು ನ್ಯಾಯಾಂಗ ಸಾಮರಸ್ಯದಿಂದ ಕಾರ್ಯ ನಿರ್ವಹಿಸುವುದು ಪ್ರಜಾಪ್ರಭುತ್ವದ ಪ್ರಗತಿಗೆ ಮುಖ್ಯವಾಗಿದೆ ಎಂದ ಅವರು,ಒಂದರ ಅಧಿಕಾರವ್ಯಾಪ್ತಿಯಲ್ಲಿ ಇನ್ನೊಂದರ ಯಾವುದೇ ಅತಿಕ್ರಮಣ,ಅದು ಎಷ್ಟೇ ಸೂಕ್ಷ್ಮವಾಗಿದ್ದರೂ,ಆಡಳಿತವನ್ನು ಅಸ್ಥಿರಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ಕೊಲಿಜಿಯಂ ವ್ಯವಸ್ಥೆ ಕುರಿತು ಕೇಂದ್ರ ಮತ್ತು ಸರ್ವೋಚ್ಚ ನ್ಯಾಯಾಲಯದ ಮಧ್ಯೆ ನಡೆಯುತ್ತಿರುವ ಗುದ್ದಾಟದ ನಡುವೆಯೇ ಧಂಕರ್ ಅವರ ಈ ಹೇಳಿಕೆಗಳು ಹೊರಬಿದ್ದಿವೆ.

Similar News