ಮಧ್ಯಪ್ರದೇಶ: ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಶಿಕ್ಷಕನ ಅಮಾನತು

Update: 2022-12-04 06:22 GMT

ಬರ್ವಾನಿ: ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ  ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಹೆಜ್ಜೆ ಹಾಕಿದ್ದಕ್ಕಾಗಿ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಲಾಗಿದೆ.

" ರಾಜಕೀಯ ಪಕ್ಷದ ರ್ಯಾಲಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದಕ್ಕಾಗಿ" ತಕ್ಷಣವೇ ಜಾರಿಗೆ ಬರುವಂತೆ ಕುಂಜಾರಿಯ ಸರಕಾರಿ ಪ್ರಾಥಮಿಕ ಶಾಲೆಯ ಪ್ರಾಥಮಿಕ ಶಿಕ್ಷಕ ರಾಜೇಶ್ ಕನೌಜೆ ಅವರನ್ನು ಬುಡಕಟ್ಟು ಕಾಮಗಾರಿ ಇಲಾಖೆ ಸಹಾಯಕ ಆಯುಕ್ತ ನಿಲೇಶ್ ರಘುವಂಶಿ ಅಮಾನತುಗೊಳಿಸಿದ್ದಾರೆ. ಕನೌಜೆ ಮಧ್ಯಪ್ರದೇಶದ ನಾಗರಿಕ ಸೇವಾ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.

ನವೆಂಬರ್ 24 ರಂದು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮೋರ್ಗಾಂವ್ ಮೂಲಕ ಯಾತ್ರೆ ಹಾದುಹೋದಾಗ ಶಿಕ್ಷಕ ಕನೌಜೆ ಅವರು  ರಾಹುಲ್ ಮತ್ತು ಪ್ರಿಯಾಂಕಾ ಅವರೊಂದಿಗೆ ನಡೆದುಕೊಂಡು ಹೋಗಿದ್ದರು.

ಆದಿವಾಸಿ ಮುಕ್ತಿ ಸಂಘಟನೆಯ ಮುಖಂಡ ಗಜಾನಂದ ರೊಂದಿಗೆ ಆದಿವಾಸಿಗಳ ಸಮಸ್ಯೆಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸುತ್ತಿರುವುದಾಗಿ ಕನೌಜೆ ಹೇಳಿದ್ದರು.

ಬಿಜೆಪಿ ಹಾಗೂ  ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭಾರತ್ ಜೋಡೋ ಯಾತ್ರೆಗೆ ಹೆದರುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ, ಕಾಂಗ್ರೆಸ್ ಮುಖಂಡ ಬಾಲಾ ಬಚ್ಚನ್ ಆರೋಪಿಸಿದ್ದಾರೆ.

‘ಬಿಜೆಪಿಯ ಕಾರ್ಯಕ್ರಮಗಳಲ್ಲೂ ಸರಕಾರಿ ನೌಕರರು, ಅಧಿಕಾರಿಗಳು ಭಾಗವಹಿಸುತ್ತಿದ್ದರೂ ಅವರ ವಿರುದ್ಧ ಕ್ರಮಕೈಗೊಂಡಿಲ್ಲ’ ಎಂದರು.

ಗುರುವಾರ ಬರ್ವಾನಿ ಜಿಲ್ಲೆಯ ಚಚರಿಯಾದಲ್ಲಿ ನಡೆದ ಸರಕಾರದ ಪೆಸಾ ಜಾಗೃತಿ ಸಮಾವೇಶದಲ್ಲಿ ಗಜಾನಂದ  ಹಾಗೂ ಶಿಕ್ಷಕ ಕನೌಜೆ ಭಾಗವಹಿಸಿದ್ದರು.

Similar News