ಮಂಗಳೂರು: ವಿಶ್ವ ವಿಶಿಷ್ಟಚೇತನರ ದಿನಾಚರಣೆ

Update: 2022-12-04 12:19 GMT

ಮಂಗಳೂರು : ಸಕ್ಷಮ ದ.ಕ. ಜಿಲ್ಲಾ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ. ಜಿಲ್ಲಾ ಶಾಖೆ, ಯುವ ರೆಡ್ ಕ್ರಾಸ್ ಮಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ನಗರದ ಹಂಪನಕಟ್ಟೆಯ ವಿ.ವಿ. ಕಾಲೇಜಿನ ರವೀಂದ್ರ ಕಲಾಭವನದಲ್ಲಿ ರವಿವಾರ ಜಿಲ್ಲಾ ತೃತೀಯ ಸಮಾವೇಶ ಮತ್ತು ವಿಶ್ವ ವಿಶಿಷ್ಟಚೇತನರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ವಿಶಿಷ್ಟಚೇತನರು ನಮ್ಮಂತೆಯೇ ಬದುಕಬೇಕು ಎಂಬ ಸಹಾನುಭೂತಿ ನಮ್ಮಲ್ಲಿರಬೇಕು. ಅವರಿಗೆ ನಮ್ಮಂತೆಯೇ ಬದುಕುವ ಹಕ್ಕು ಒದಗಿಸಬೇಕು ಎಂದು ಹೇಳಿದರು.

ಭಾರತದಲ್ಲಿ ಶೇ.2.4ರಷ್ಟು ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಶೇ.೧೫ರಷ್ಟು ಅಂಗವಿಕಲತೆ, ವಿಶಿಷ್ಟ ಚೇತನರಿದ್ದಾರೆ. ವಿಶಿಷ್ಟ ಚೇತನರು ಒಂದಲ್ಲೊಂದು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಹ ವಾತಾವರಣ ನಿರ್ಮಿಸಬೇಕಿದೆ. ಕಳೆದ 41 ವರ್ಷಗಳಿಂದ ನಾನು ವಿಶಿಷ್ಟ ಚೇತನರ ದಿನಾಚರಣೆಯಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಡಾ.ಎಂ.ಶಾಂತಾರಾಮ ಶೆಟ್ಟಿ ಹೇಳಿದರು.

ಸಕ್ಷಮ ದ.ಕ. ಜಿಲ್ಲಾಧ್ಯಕ್ಷ ಡಾ. ಮುರಳೀಧ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ. ಜಿಲ್ಲಾ ಶಾಖೆಯ ಸಭಾಪತಿ ಸಿಎ ಶಾಂತಾರಾಮ ಶೆಟ್ಟಿ, ಸಕ್ಷಮ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ವಿನೋದ್ ಶೆಣೈ, ಮಂಗಳೂರು ವಿ.ವಿ. ಯುವ ರೆಡ್‌ಕ್ರಾಸ್ ಸಂಚಾಲಕ ಡಾ. ಗಣಪತಿ ಗೌಡ, ಸಕ್ಷಮ ಟ್ರಸ್ಟಿ ಜಯದೇವ ಕಾಮತ್, ಡಾ.ಕೆ.ಆರ್. ಕಾಮತ್, ಕುಸುಮಾಧರ ಮತ್ತಿತರರು ಉಪಸ್ಥಿತರಿದ್ದರು.

ನೇತ್ರದಾನ ಮತ್ತು ದೇಹದಾನ, ವಿಶೇಷ ಚೇತನರ ಸವಲತ್ತುಗಳು ಮತ್ತು ಸವಾಲಿಗಳು ವಿಷಯದ, ಕಾನೂನಾತ್ಮಕ ಪೋಷಕತ್ವ ಮತ್ತು ನಿರಾಮಯ ಎಂಬ ವಿಷಯಗಳ ಬಗ್ಗೆ ವಿಚಾರಗೋಷ್ಠಿ ನಡೆಯಿತು. ಸಕ್ಷಮ ದ.ಕ. ಜಿಲ್ಲಾ ಕಾರ್ಯದರ್ಶಿ ಹರೀಶ್ ಪ್ರಭು ಸಮಾವೇಶದ ನಿರ್ಣಯ ಮಂಡಿಸಿದರು. ಅಲ್ಲದೆ ಗಾಲಿಕುರ್ಚಿ ವಿತರಿಸಲಾಯಿತು.

ರಾಜಶೇಖರ ಭಟ್ ಸ್ವಾಗತಿಸಿದರು. ಸೌಮ್ಯ ಪೈ ಕಾರ್ಯಕ್ರಮ ನಿರೂಪಿಸಿದರು. ವೃಂದಾ ಕೇಶವ ಭಟ್ ಸಕ್ಷಮ ಗೀತೆ ಹಾಡಿದರು.

Similar News