ಮಂಗಳೂರು: ನಿರ್ವಹಣೆಯಿಲ್ಲದೆ ಸೊರಗಿದ ಕದ್ರಿ ಪಾರ್ಕ್!

Update: 2022-12-04 14:32 GMT

ಮಂಗಳೂರು, ಡಿ.4: ನಗರದ ಹೃದಯಭಾಗದಲ್ಲಿರುವ ಮತ್ತು ಹತ್ತಾರು ವರ್ಷದ ಹಿಂದೆ ಜನಾಕರ್ಷಣೆಯ ಕೇಂದ್ರವಾಗಿದ್ದ ಕದ್ರಿ ಪಾರ್ಕ್ ಸೂಕ್ತ ನಿರ್ವಹಣೆಯಿಲ್ಲದೆ ಸೊರಗುತ್ತಿದ್ದು, ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ ಎರಡನೆ ಅತೀ ದೊಡ್ಡ ಕಾರಂಜಿಯು ಈ ಪಾರ್ಕ್‌ನಲ್ಲಿದೆ ಎಂಬ ಹೆಗ್ಗಳಿಕೆಯ ಹೊರತಾಗಿಯೂ ಕಾಲಕಾಲಕ್ಕೆ ಸೂಕ್ತ ನಿರ್ವಹಣೆ ಮಾಡದ ಕಾರಣ ಪಾರ್ಕ್ ಸಮಸ್ಯೆಗಳ ಆಗರವಾಗಿದೆ.

ಪಾರ್ಕ್‌ನ ಹೊರಗಡೆ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಆವರಣ, ಪ್ರವೇಶದ್ವಾರ ಕೂಡ ಸುಸಜ್ಜಿತವಾಗಿವೆ. ಆದರೆ ಪಾರ್ಕ್‌ನೊಳಗೆ ಎಲ್ಲವೂ ಟೊಳ್ಳಾಗಿದೆ. ಕಾರಂಜಿಯಲ್ಲಿ ನೀರು ಚಿಮ್ಮುತ್ತಿಲ್ಲ. ಪ್ರವಾಸಿಗರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯೂ ಇಲ್ಲ. ಶೌಚಾಲಯವೂ ಇಲ್ಲ. ಇಲ್ಲಿ ಹಸಿರು ಮಾಯವಾಗಿದೆ. ಕಾಂಕ್ರಿಟ್‌ಗಳ ಮಧ್ಯೆ ಕಪ್ಪುಕಲ್ಲಿನ ವಿನ್ಯಾಸಗಳು ಮಾತ್ರ ಅಲ್ಲಲ್ಲಿ ಎದ್ದು ಕಾಣುತ್ತಿವೆ. ಕೆಲವು ಕಡೆ ನೀರು ನಿಂತಿದ್ದು, ಸೊಳ್ಳೆಯೂ ಉತ್ಪತ್ತಿಯಾಗಿವೆ. ಪಾರ್ಕ್‌ನೊಳಗೆ ಪ್ರವೇಶಿಸಿದವರು ಸೊಳ್ಳೆ ಕಡಿತಕ್ಕೊಳಗಾಗಿ ಆರೋಗ್ಯ ಕೆಡಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು ಎಂಬ ಆರೋಪ ಕೇಳಿ ಬಂದಿವೆ.

"ಜೆ.ಆರ್.ಲೋಬೋ ಶಾಸಕರಾಗಿದ್ದಾಗ ಈ ಪಾರ್ಕ್‌ನ ಅಭಿವೃದ್ಧಿಗೆ ಶ್ರಮಿಸಿದ್ದರು. ಆ ಬಳಿಕದ ಶಾಸಕರು ಇದರ ನಿರ್ವಹಣೆಯ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ರಸ್ತೆ ನಿರ್ಮಿಸಿ ಹಣಪೋಲು ಮಾಡಿಸುತ್ತಿದ್ದಾರೆ. ವಾರಾಂತ್ಯದಲ್ಲಿ ಸಾಕಷ್ಟು ಜನರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಒಳಗೆ ಏನೂ ಇಲ್ಲದ ಕಾರಣ ಅಧಿಕ ಮಂದಿ ನಿರಾಶೆಯಿಂದ ಮರಳುತ್ತಿದ್ದಾರೆ. ಇನ್ನಾದರು, ಜಿಲ್ಲಾಡಳಿತ, ಶಾಸಕರು, ಮನಪಾ ಆಡಳಿತವು ಈ ಬಗ್ಗೆ ಗಮನ ಹರಿಸಲಿ".
- ಎ.ಸಿ. ವಿನಯರಾಜ್
ಕಾರ್ಪೊರೇಟರ್, ಮಂಗಳೂರು ಮನಪಾ

 
"ಹಿಂದೊಮ್ಮೆ ಕದ್ರಿ ಪಾರ್ಕ್ ಅಂದರೆ ಜಿಲ್ಲೆ ಮಾತ್ರವಲ್ಲ ಹೊರಜಿಲ್ಲೆ, ಹೊರ ರಾಜ್ಯದವರೂ ಬರುತ್ತಿದ್ದರು. ಹೊರಗೆ ಸುಸಜ್ಜಿತ ರಸ್ತೆಯಿದೆ. ಪ್ರವೇಶದ್ವಾರವೂ ಆಕರ್ಷಕವಾಗಿದೆ. ಆದರೆ ಈಗ ಒಳಗೆ ಏನೂ ಇಲ್ಲ. ಎಲ್ಲವೂ ಖಾಲಿ, ಖಾಲಿ. ಕೋಟ್ಯಂತರ ರೂ. ವ್ಯಯಿಸಿದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಮನಪಾ ಆಡಳಿತ ಇನ್ನಾದರು ಗಮನಹರಿಸಬೇಕಿದೆ".
ಗಾವಳಿ ಸುರೇಶ್ ಎನ್. ಶೆಟ್ಟಿ
ಅಧ್ಯಕ್ಷರು
ಕರವೇ ಗಜಸೇನೆ ದ.ಕ.ಜಿಲ್ಲೆ

Similar News