ಕನ್ನಡ ಆಡಳಿತ ಭಾಷೆಯಾದರೂ, ಆದೇಶಗಳು ಇಂಗ್ಲೀಷ್‍ನಲ್ಲಿವೆ: ಟಿ.ತಿಮ್ಮೇಗೌಡ ಕಿಡಿ

Update: 2022-12-04 17:14 GMT

ಬೆಂಗಳೂರು, ಡಿ. 4: ರಾಜ್ಯ ಸರಕಾರ ಕನ್ನಡ ಆಡಳಿತ ಭಾಷೆಯೆಂದು ಘೋಷಣೆ ಮಾಡಿ, ಆದೇಶ ಹೊರಡಿಸಿದೆ. ಆದರೂ ರಾಜ್ಯ ಸರಕಾರದ ಟಿಪ್ಪಣಿ ಮತ್ತು ಆದೇಶಗಳು ಇಂಗ್ಲೀಷ್‍ನಲ್ಲಿ ಬರುತ್ತಿವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಕಿಡಿಕಾರಿದರು.

ರವಿವಾರ ನಗರದ ನಯನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಕನ್ನಡ ನುಡಿ ಸಮ್ಮೇಳನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದಿಂದ ಕೆಳಹಂತದ ವರೆಗೂ ಇರುವ ಎಲ್ಲ ಸರಕಾರಿ ಕಚೇರಿಗಳಲ್ಲಿ ಕಡತಗಳು, ಟಿಪ್ಪಣಿ ಹಾಗೂ ಆದೇಶಗಳು ಕನ್ನಡದಲ್ಲಿರಬೇಕು. ಅಲ್ಲದೆ, ಎಲ್ಲ ಪತ್ರ ವ್ಯವಹಾರಗಳು ಕನ್ನಡದಲ್ಲೇ ಆಗಬೇಕು. ಎಲ್ಲ ನ್ಯಾಯಾಲಯಗಳ ನಡಾವಳಿ ಮತ್ತು ಆದೇಶಗಳು ಕನ್ನಡದಲ್ಲಿರಬೇಕು. ಶಾಲಾ ಕಾಲೇಜುಗಳಲ್ಲಿ ಕನ್ನಡ ಮಾತನಾಡುವುದನ್ನು ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು.

ಸಾಹಿತಿ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಮಾತನಾಡಿ, ಕರ್ನಾಟಕದಲ್ಲಿ ಹೊರತುಪಡಿಸಿ, ಕನ್ನಡಕ್ಕೆ ಮಾನ್ಯತೆ ಹಾಗೂ ಆಧ್ಯತೆಯನ್ನು ನಾವು ಬೇರೆಲ್ಲೋ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ನಾಡಿನಲ್ಲೇ ಕನ್ನಡಕ್ಕೆ ಅಧ್ಯತೆಯನ್ನು ನೀಡುವಂತಾಗಬೇಕು. ಆ ಕೆಲಸವನ್ನು ನಮ್ಮ ಸರಕಾರವೇ ಮಾಡಬೇಕಾಗಿದೆ ಎಂದರು. 

ಇತ್ತೀಚೆಗೆ ಗಡಿ ಸಂಘರ್ಷಗಳು ನಡಿಯುತ್ತಿದೆ. ಸ್ವತಂತ್ರ ಬಂದ ನಂತರ ರಾಜ್ಯಗಳ ಮರುವಿಂಗಡನೆಯಾಗಿದ್ದು, ಈ ಗಂಭೀರ ಸಮಯದಲ್ಲಿ ಒಕ್ಕೂಟ ವ್ಯವಸ್ಥೆಯ ಕೇಂದ್ರ ಸರಕಾರ ಈ ಬಿಕ್ಕಟ್ಟನ್ನು ಪರಿಹರಿಸುವುದಕ್ಕೆ ಮನಸ್ಸು ಮಾಡಬೇಕಾಗಿದೆ. ಗಡಿ ವಿವಾದವನ್ನು ಶಮನಗೊಳಿಸಲು ಕೇಂದ್ರವು ಉದಾಸೀನ ತೋರಿಸುತ್ತಿದ್ದು, ರಾಜ್ಯ-ರಾಜ್ಯಗಳ ನಡುವೆ ಪರಸ್ಪರ ಜಗಳ ಮುಂದುವರೆಯುತ್ತಿದೆ ಎಂದು ಹೇಳಿದರು.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆದರೂ ಕೆಲವು ಮರಾಠಿ ಮುಖಂಡರು ಸಾಲದ ಹೇಳಿಕೆಗಳನ್ನು ನೀಡಿ, ಅದರಿಂದ ಪ್ರೇರಿತರಾದ ಜನ ಭಾವೋದ್ವೇಗದಿಂದ ಕನ್ನಡಿಗರಿಗೆ ಕಿರುಕುಳ ನೀಡುತ್ತಿದ್ದಾರೆ. ಅವರ ಆಸ್ತಿಪಾಸ್ತಿಗಳನ್ನು ನಾಶಮಾಡುವುದು, ಉಭಯ ರಾಜ್ಯಗಳ ಸಂಬಂಧವನ್ನು ಕೆಡಿಸುವುದು, ಸೇರಿದಂತೆ ಅಸಂವಿಧಾನಾತ್ಮಕ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂದು ಅವರು, ಗಡಿ ವಿವಾದದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿರುವ ಪ್ರತಿಕ್ರಿಯೆಗೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಈ ವೇಳೆ ವಿಮರ್ಶಕಿ ಡಾ. ಎಂ.ಎಸ್ ಆಶಾದೇವಿ, ಕೆ.ಎ.ಎಸ್. ಅಧಿಕಾರಿ ಡಿ.ಎಂ.ಸತೀಶ್ ಕುಮಾರ್, ಡಾ.ಡಿ.ಸಿ.ರಾಮಚಂದ್ರ, ಎಂ.ವಿ.ರೇವಣಸಿದ್ಧಯ್ಯ, ಪಿ.ಶಶಿಕುಮಾರ್, ಮುಕ್ತಾ ಬಿ.ಕಾಗಲಿ, ಎನ್. ವಿಜಯಕುಮಾರ್, ಸಿ.ಪಿ.ಉಮೇಶ್, ಎಚ್.ಸಿ.ಗಿರೀಶ್, ಆರ್.ಬಿ.ಶಂಕರ್ ಅವರಿಗೆ ಕದಂಬ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥಾಪಕ ಸುರೇಶ್ ಜೀವನ್ಮುಖಿ, ಡಾ.ಗೋವಿಂದಯ್ಯ, ಕಸಾಪ ಕಾರ್ಯದರ್ಶಿ ರಾಮಲಿಂಗಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News