ಪ್ರತೀ ತಿಂಗಳು 16 ಲಕ್ಷ ಉದ್ಯೋಗ ಸೃಷ್ಟಿ: ಕೇಂದ್ರ ಸಚಿವರ ಘೋಷಣೆ ಎಷ್ಟು ನಿಜ?

Update: 2022-12-05 04:13 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಅಕ್ಟೋಬರ್ ತಿಂಗಳಲ್ಲಿ ಪ್ರಧಾನಿ ಮೋದಿಯವರು ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ದಿನದಿಂದ, ದೇಶದ ಉದ್ಯೋಗ ಸೃಷ್ಟಿಯ ಕುರಿತಂತೆ ಸಚಿವರು ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿಕೆಯೊಂದರಲ್ಲಿ ಪ್ರತೀ ತಿಂಗಳು ಕೇಂದ್ರ ಸರಕಾರ ಸರಾಸರಿ 15ರಿಂದ 16 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ತಿಳಿಸಿದ್ದರು. ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಮಾತನಾಡಿದ ವೈಷ್ಣವ್ ಅವರು ಎಪ್ರಿಲ್, ಮೇ, ಜೂನ್, ಜುಲೈ ಹಾಗೂ ಆಗಸ್ಟ್‌ನಲ್ಲಿ ಸರಾಸರಿ 15-16 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ತಿಳಿಸಿದ್ದರು. ಅಂಕಿಅಂಶ ಸಚಿವಾಲಯದ ವೆಬ್‌ಸೈಟ್‌ಗಳು ಹಾಗೂ ಇಪಿಎಫ್‌ಒ ಸಚಿವಾಲಯದ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ದತ್ತಾಂಶಗಳೇ ತನ್ನ ಈ ಹೇಳಿಕೆಗೆ ಆಧಾರವಾಗಿವೆ ಎಂದವರು ತಿಳಿಸಿದ್ದರು. ನೌಕರರ ಭವಿಷ್ಯ ನಿಧಿ ಸಂಸ್ಥೆಯ ಬಳಿ ಇರುವ ವೇತನ ಪಟ್ಟಿಯನ್ನು ಅಂಕಿಅಂಶಗಳಿಗೆ ಆಧಾರವಾಗಿ ಬಳಸಿದ್ದರು. ಭಾರತೀಯ ಭವಿಷ್ಯನಿಧಿ ಸಂಸ್ಥೆ (ಇಪಿಎಫ್‌ಒ) ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ಅಧೀನದಲ್ಲಿರುವ ಇಲಾಖೆಯಾಗಿದೆ. ಇಪಿಎಫ್ ಯೋಜನೆಯನ್ನು, ನೌಕರರ ಭವಿಷ್ಯನಿಧಿ ಹಾಗೂ ಇತರ ವೆಚ್ಚಗಳ ನಿಯಮಗಳ ಕಾಯ್ದೆ 1952ರಡಿ ಸೃಷ್ಟಿಸಲಾಗಿತ್ತು. ಸಂಘಟಿತ ವಲಯಗಳಲ್ಲಿನ ಉದ್ಯೋಗಿಗಳ ನಿವೃತ್ತಿಯ ಜೀವನಕ್ಕಾಗಿ ಅವರ ಸಂಪಾದನೆಯ ಒಂದು ಪಾಲನ್ನು ಉಳಿಸುವ ಉದ್ದೇಶದೊಂದಿಗೆ ಇಪಿಎಫ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಇಪಿಎಫ್ ಯೋಜನೆಯಡಿ ಭವಿಷ್ಯ ನಿಧಿಗೆ, ನೌಕರನ ಜೊತೆ ಉದ್ಯೋಗದಾತನೂ ಸಮಾನ ದೇಣಿಗೆಯನ್ನು ಪಾವತಿಸಬೇಕಾಗುತ್ತದೆ. ನಿವೃತ್ತಿಯ ಬಳಿಕ ಉದ್ಯೋಗಿಗೆ ಆತನ ಇಪಿಎಫ್ ಉಳಿತಾಯದ ದೊಡ್ಡ ಮೊತ್ತದ ಹಣವನ್ನು (ಬಡ್ಡಿಸಮೇತ) ಪಾವತಿಸಬೇಕಾಗುತ್ತದೆ.ಇಪಿಎಫ್ ಕಾಯ್ದೆಯ ವ್ಯಾಪ್ತಿಗೆ ಬರಬೇಕಾದರೆ ಯಾವುದೇ ನೋಂದಾಯಿತ ಸಂಸ್ಥೆಯು 20 ಅಥವಾ ಅದಕ್ಕಿಂತ ಅಧಿಕ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರಬೇಕು. 20 ಉದ್ಯೋಗಿಗಳಿಗೂ ಕಡಿಮೆ ಸಂಖ್ಯೆಯಿರುವ ಸಂಸ್ಥೆಗಳು ಕೂಡಾ ಕಾಯ್ದೆಯ ಸೆಕ್ಷನ್ 1-(4)ರ ನಿಯಮಾವಳಿಗಳಡಿ (ಸ್ವಯಂಪ್ರೇರಿತ ಕವರೇಜ್) ಈ ಯೋಜನೆಗೆ ಸೇರ್ಪಡೆಗೊಳ್ಳಬಹುದಾಗಿದೆ.

ದೇಶದ ಆರ್ಥಿಕತೆಯಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾದ ಸಂಖ್ಯೆಯನ್ನು ತಿಳಿಯುವುದಕ್ಕೆ ಇಪಿಎಫ್‌ನ ವೇತನಪಟ್ಟಿಯನ್ನು ಬಳಸಿಕೊಳ್ಳುವ ವಿಧಾನಕ್ಕೆ ಹಲವಾರು ಇತಿಮಿತಿಗಳಿವೆ. ಈ ಬಗ್ಗೆ ರಾಷ್ಟ್ರೀಯ ಅಂಕಿಅಂಶ ಆಯೋಗದ ಮಾಜಿ ಸದಸ್ಯ ಹಾಗೂ ಕಾರ್ಯಕಾರಿ ಅಧ್ಯಕ್ಷ ಪಿ.ಸಿ.ಮೋಹನನ್ ಅವರು ಸಮರ್ಪಕ ಉದಾಹರಣೆಯೊಂದನ್ನು ನೀಡುತ್ತಾರೆ. ಒಂದು ವೇಳೆ ಒಂದು ಸಂಸ್ಥೆಯಲ್ಲಿ 18 ಮಂದಿ ಉದ್ಯೋಗಿಗಳಿದ್ದಲ್ಲಿ, ಆನಂತರ ಅದು ಇನ್ನೂ ಮೂವರನ್ನು ನೇಮಿಸಿಕೊಂಡಲ್ಲಿ ಆ ಸಂಸ್ಥೆಯು ಇಪಿಎಫ್ ನೋಂದಣಿಗೆ ಬೇಕಾದ ಕನಿಷ್ಠ ಮಿತಿಯನ್ನು ದಾಟುತ್ತದೆ ಹಾಗೂ ಅದರ ಎಲ್ಲಾ ಉದ್ಯೋಗಿಗಳು ಇಪಿಎಫ್‌ಗೆ ಅರ್ಹತೆಯನ್ನು ಪಡೆಯುತ್ತಾರೆ. ಆದರೆ ದೇಶದಲ್ಲಿ 21 ಹೊಸ ಉದ್ಯೋಗಗಳು ಸೃಷ್ಟಿಯಾಗಿವೆಯೆಂದು ಇದರ ಅರ್ಥವಲ್ಲ. ಇಲ್ಲಿ ಕೇವಲ ಮೂರು ಹೊಸ ಉದ್ಯೋಗಗಳಷ್ಟೇ ಸೃಷ್ಟಿಯಾಗಿದ್ದು, ಇತರ 18 ಮಂದಿ ಉದ್ಯೋಗಿಗಳು ಕೇವಲ ಇಪಿಎಫ್‌ಗೆ ನೋಂದಣಿಗೊಂಡಿದ್ದಾರಷ್ಟೇ.

2017ರ ನೀತಿ ಆಯೋಗದ ವರದಿಯ ಪ್ರಕಾರ ಭಾರತದ ಒಟ್ಟು ಉದ್ಯಮಸಂಸ್ಥೆಗಳ ಪೈಕಿ 10ಕ್ಕೂ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳ ಪಾಲು ನಾಲ್ಕನೆ ಮೂರರಷ್ಟಾಗಿದೆ. 2021ರ ನವೆಂಬರ್‌ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಕಟಿಸಿದ ವರದಿಯೊಂದು ಶೇ.93ರಷ್ಟು ಭಾರತದ ಶ್ರಮಿಕಶಕ್ತಿಯು ಅನೌಪಚಾರಿಕ ವಲಯಗಳಲ್ಲಿ ದುಡಿಯುತ್ತಿರುವುದಾಗಿ ತಿಳಿಸಿದೆ.ಹೀಗಾಗಿ,ಇಂತಹ ಸಂಸ್ಥೆಗಳು 20 ಉದ್ಯೋಗಿಗಳ ಮಿತಿಯನ್ನು ದಾಟಿ, ಇಪಿಎಫ್‌ಒನಲ್ಲಿ ನೋಂದಣಿಯಾದಾಗ, ನೂತನ ಉದ್ಯೋಗಗಳ ಸೃಷ್ಟಿಯ ಬಗ್ಗೆ ತಪ್ಪು ಲೆಕ್ಕಾಚಾರ ದೊರೆಯುವ ಸಾಧ್ಯತೆಗಳು ಅಧಿಕವಾಗಿದೆ.
         
2020ರ ಜನವರಿಯಲ್ಲಿ ಸುಪ್ರೀಂಕೋರ್ಟ್ ಪ್ರಕಟಿಸಿದ ತೀರ್ಪೊಂದು ಗುತ್ತಿಗೆ ಕಾರ್ಮಿಕರಿಗೂ ಇಪಿಎಫ್ ಸೌಲಭ್ಯವನ್ನು ಖಾತರಿಪಡಿಸಿರುವುದರಿಂದ ಭವಿಷ್ಯನಿಧಿ ಚಂದಾದಾರರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆಯೆಂದು ಬ್ರಿಟನ್‌ನ ಬಾಥ್ ವಿವಿಯ ಸಂದರ್ಶಕ ಪ್ರಾಧ್ಯಾಪಕರಾಗಿರುವ ಸಂತೋಷ್ ಮೆಹ್ರೋತ್ರಾ ಹೇಳುತ್ತಾರೆ. ಗುತ್ತಿಗೆ ಕಾರ್ಮಿಕರು ಸೇರಿದಂತೆ ಒಂದು ಸಂಸ್ಥೆಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ವೇತನವನ್ನು ಪಡೆಯುವ ಎಲ್ಲಾ ಉದ್ಯೋಗಿಗಳು ಇಪಿಎಫ್ ಚಂದಾದಾರರಾಗಲು ಅರ್ಹತೆಯನ್ನು ಪಡೆಯುತ್ತಾರೆ. ಇಲ್ಲಿಯೂ ನೂತನ ಉದ್ಯೋಗಗಳು ಸೃಷ್ಟಿಯಾಗಿಲ್ಲ. ಬದಲಾಗಿ ಈಗ ಅಸ್ತಿತ್ವದಲ್ಲಿರುವ ಉದ್ಯೋಗಗಳನ್ನು ನಿಯಮಬದ್ಧಗೊಳಿಸಲಾಗಿದೆಯಷ್ಟೇ. ಇಪಿಎಫ್‌ಒ ಕೇವಲ ಔಪಚಾರಿಕ ವಲಯವನ್ನಷ್ಟೇ ತಲುಪಿದೆ. 20ಕ್ಕೂ ಕಡಿಮೆ ಉದ್ಯೋಗಿಗಳಿರುವ ಅನೌಪಚಾರಿಕ ಕಾರ್ಮಿಕರು ಹಾಗೂ ಉದ್ಯಮಸಂಸ್ಥೆಗಳ ಕಾರ್ಮಿಕರು, ಇಪಿಎಫ್ ಜೊತೆ ನೋಂದಣಿಯಾಗಿಲ್ಲ. ಅಷ್ಟೇ ಅಲ್ಲದೆ ಒಂದೇ ವ್ಯಕ್ತಿಯ ಇಪಿಎಫ್ ಖಾತೆಗಳನ್ನು ಮರಳಿ ಚಂದಾದಾರಿಕೆಗೊಳಪಡಿಸಲಾಗುತ್ತದೆ. ಇದು ಕೂಡಾ ದೇಶದಲ್ಲಿನ ಉದ್ಯೋಗ ಸೃಷ್ಟಿಯ ಸಂಖ್ಯೆಯನ್ನು ತಿಳಿಯಲು ಇಪಿಎಫ್ ದತ್ತಾಂಶವನ್ನು ಅವಲಂಭಿಸುವುದಕ್ಕೆ ಅತಿ ದೊಡ್ಡ ಹಿನ್ನಡೆಯಾಗಿದೆ. ಇದರ ಜೊತೆಗೆ ಇಪಿಎಫ್‌ಒ ದತ್ತಾಂಶಗಳು ತಾತ್ಕಾಲಿಕವಾಗಿದ್ದು, ಅದು ಪ್ರತೀ ತಿಂಗಳು ಪರಿಷ್ಕರಣೆಗೊಳಗಾಗುತ್ತವೆ. ಸುದ್ದಿಯ ವಾಸ್ತವಾಂಶ ಬಯಲಿಗೆಳೆಯುವ ಖ್ಯಾತ ಜಾಲತಾಣ ಫ್ಯಾಕ್ಟ್‌ಚೆಕ್‌ನ ತನಿಖಾ ವರದಿಯೊಂದು ಕೂಡಾ ಇದನ್ನು ಸಮರ್ಥಿಸಿದೆ. ವಾಸ್ತವಿಕವಾಗಿ 2022ರ ಎಪ್ರಿಲ್‌ನಿಂದ ಅಕ್ಟೋಬರ್ ತಿಂಗಳುಗಳ ಅವಧಿಗೆ ಹೋಲಿಸಿದರೆ, ನವೆಂಬರ್ ತಿಂಗಳಲ್ಲಿ ಇಪಿಎಫ್ ಚಂದಾದಾರರ ಪಟ್ಟಿಯಲ್ಲಿ ಇಳಿಕೆ ಕಂಡುಬಂದಿತ್ತು. ಉದ್ಯೋಗ ಸೃಷ್ಟಿಯೆಂದರೆ, ಅಂಕಿಅಂಶಗಳ ಕಣ್ಕಟ್ಟುಗಳಲ್ಲ. ಇಂತಹ ಕಣ್ಕಟ್ಟುಗಳಿಂದ ದೇಶದ ಜನರ ಬದುಕಿನಲ್ಲಿ ಯಾವ ಬದಲಾವಣೆಗಳೂ ಆಗುವುದಿಲ್ಲ. ದೇಶಾದ್ಯಂತ ಮುಚ್ಚುತ್ತಿರುವ ಸಣ್ಣ ಉದ್ಯಮಗಳು ಪ್ರತಿದಿನ ಸಾವಿರಾರು ಜನರ ಉದ್ಯೋಗಗಳನ್ನು ಕಸಿಯುತ್ತಿವೆ. ಈಗಾಗಲೇ ಜನರು ಕಳೆದುಕೊಂಡಿರುವ ಉದ್ಯೋಗಗಳಿಗೆ ಹೋಲಿಸಿದರೆ, ಸರಕಾರ ನೀಡುತ್ತಿರುವ ಉದ್ಯೋಗಗಳು ಏನೇನೂ ಅಲ್ಲ.

Similar News