30 ಲಕ್ಷ ಕಬ್ಬು ಬೆಳೆಗಾರರಿಂದ ಎಫ್‌ಆರ್‌ಪಿ ಹೆಚ್ಚುವರಿ ದರ ನಿಗದಿಗೆ ಪಟ್ಟು

Update: 2022-12-05 07:37 GMT

ಬೆಂಗಳೂರು. ಡಿ.5: ರಾಜ್ಯದಲ್ಲಿ ರೈತ ಸಮೂಹ ದಂಗೆ ಏಳುವ ಕಾಲ ಸನ್ನಿಹವಾದಂತೆ ಕಾಣುತ್ತಿದೆ. ಒಂದು ತಿಂಗಳಿನಿಂದ ಸುಮಾರು 18 ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಬೀದಿಗಿಳಿದು ಸರಕಾರದ ವಿರುದ್ಧ ಧಿಕ್ಕಾರ ಹಾಕುತ್ತಿರುವುದು ಇದಕ್ಕೆ ಪೂರಕ. ಇಷ್ಟೇ ಅಲ್ಲದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 13 ದಿನಗಳಿಂದ ಧರಣಿ ನಡೆಯುತ್ತಿದೆ. ಕಣ್ಮುಂದೆ ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರೂ ರೈತ ದೇಶದ ಬೆನ್ನೆಲುಬು ಎನ್ನುವ ರಾಜಕಾರಣಿಗಳು ಮಾತ್ರ ಕ್ಯಾರೇ ಎನ್ನದೆ ಜಾಣ ಮೌನ ವಹಿಸಿದ್ದಾರೆ.

ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚಿರುವ ಕಬ್ಬು ಬೆಳೆಗಾರರು ಕಬ್ಬಿನ ಎಫ್‌ಆರ್‌ಪಿ ಹೆಚ್ಚುವರಿ ದರ ನಿಗದಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರಕಾರ ಮುಂದಿಟ್ಟುಕೊಂಡು ಹೋರಾಟಕ್ಕೆ ನಾಂದಿಹಾಡಲಾಗಿದೆ. ಕಬ್ಬು ಹೆಚ್ಚುವರಿ ದರ ನಿಗದಿ ಬಗ್ಗೆ ನಾಲ್ವೈದು ಸಭೆಗಳನ್ನು ನಡೆಸಿರುವ ಸರಕಾರ ನ.24ರಂದು ತಜ್ಞರ ತಂಡವನ್ನು ರಚಿಸಿ ವರದಿ ಪಡೆದರೂ ಯಾವುದೇ ನಿರ್ಧಾರವನ್ನು ಪ್ರಕಟಿಸದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಬಾಗಲಕೋಟೆಯಲ್ಲಿ ನಾಲ್ಕು ದಿನಗಳಿಂದ ಕಬ್ಬು ಬೆಳೆಗಾರರ ಹೋರಾಟ ಮುಗಿಲುಮುಟ್ಟಿದ್ದರೂ ಸರಕಾರ ನಿರ್ಲಕ್ಷ ವಹಿಸಿ ಸಬೂಬು ಹೇಳುತ್ತಾ ತ್ಯಪೆ ಹಾಕುತ್ತಿದೆ. 3,500 ರೂ. ನಿಗದಿಗೆ ಪಟ್ಟು: ಕರ್ನಾಟಕಕ್ಕಿಂತ ಸಕ್ಕರೆ ಇಳುವರಿ ಕಡಿಮೆಯಿರುವ ಪಂಜಾಬ್‌ನಲ್ಲಿ ಟನ್‌ಗೆ 3,800 ರೂ., ಉತ್ತರ ಪ್ರದೇಶದಲ್ಲಿ 3,500 ರೂ., ಗುಜರಾತ್‌ನಲ್ಲಿ 4,400 ರೂ. ದರ ನಿಗದಿಗೊಳಿಸಲಾಗಿದ್ದು, ಅಲ್ಲದೆ ನೆರೆಯ ತಮಿಳುನಾಡಿನಲ್ಲಿ ಕಬ್ಬು ಸಾಗಣೆಯ ವೆಚ್ಚವನ್ನು ಕಾರ್ಖಾನೆಗಳೇ ಭರಿಸುವ ನಿಯಮವನ್ನು ಅಲ್ಲಿನ ಸರಕಾರದಿಂದಲೇ ಜಾರಿಗೊಳಿಸಲಾಗಿದೆ.

ಆದರೆ, ಎಫ್‌ಆರ್‌ಸಿ ಬೆಲೆಯನ್ನು ಕನಿಷ್ಠ ಇಳುವರಿಗೆ ಟನ್‌ಗೆ 3,500 ರೂ.ನಿಗದಿ ಮಾಡಬೇಕೆಂದು ಒತ್ತಾಯಿಸಿ ರಾಜ್ಯದ ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಹಳಿಯಾಳ, ಮೈಸೂರು, ಬಳ್ಳಾರಿ, ಹಡಗಲಿ, ಕಲಘಟಗಿ, ಅಫ್ಝಲ್ಪುರ, ಬಿಜಾಪುರ, ಬಾಗಲಕೋಟೆ, ಗದಗ್, ಮುಂಡರಗಿ, ಚಾಮರಾಜನಗರ, ಹಾಸನ, ಬೀದರ್, ಚನ್ನರಾಯಪಟ್ಟಣ, ಕೊಪ್ಪಳ, ಮಂಡ್ಯ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸಲಾಗುತ್ತಿದೆ.

ಬೇಡಿಕೆಗಳು: ಕಬ್ಬಿನ ಕಟಾವು ಸಾಗಣೆ ವೆಚ್ಚದಲ್ಲಿ ಕಾರ್ಖಾನೆಯವರು 300ರಿಂದ 350 ರೂ. ಹೆಚ್ಚಳ ಮಾಡಿ ರೈತರನ್ನು ಸುಲಿಗೆ ಮಾಡಲು ಪ್ರಾರಂಭಿಸಿದ್ದು, ಸರಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ರೈತನ ಜಮೀನಿನಿಂದ ಕಾರ್ಖಾನೆ ನಡುವೆ ಇರುವ ಕಿಲೋಮೀಟರ್ ಆಧಾರದಲ್ಲಿ ದರ ಕಡಿತ ಮಾಡಬೇಕು. ಕಾನೂನು ಬಾಹಿರವಾಗಿ ಹೆಚ್ಚುವರಿ ಮಾಡಿದರೆ ಆಯಾ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಚೀಟಿಂಗ್ ಕೇಸ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಸಕ್ಕರೆ ಕಾರ್ಖಾನೆ ಫೀಲ್ಡ್ ಮೆನ್‌ಗಳು ಬಿಲ್‌ನಲ್ಲಿ ನೋಂದಾಯಿಸದೆ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ರೈತ ಮತ್ತು ಕಾರ್ಖಾನೆ ನಡುವೆ ಜಾರಿಗೆ ತಂದಿರುವ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿಗೆ ತಂದು ರೈತರಿಗೂ ಒಪ್ಪಂದ ಪತ್ರವನ್ನು ನೀಡಬೇಕು. ವಿದ್ಯುತ್ ಖಾಸಗಿಕರಣ ಕೈಬಿಡಬೇಕು. ಬ್ಯಾಂಕ್‌ಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪದ್ಧತಿಯನ್ನು ಪರಿಗಣಿಸಿ ಸಾಲ ನೀಡುವ ಪದ್ಧತಿ ಕೈಬಿಡಬೇಕು. ತಕ್ಷಣವೇ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು.

ಸರಕಾರ ನೀಡುವ ಪರಿಹಾರ, ಪ್ರೋತ್ಸಾಹಧನ, ವಿಧವಾ ವೇತನ, ವೃದ್ಧಾಪ್ಯ ವೇತನದ ಹಣವನ್ನು ಬ್ಯಾಂಕ್‌ಗಳು ಸಾಲದ ಖಾತೆಗಳಿಗೆ ಜಮಾ ಮಾಡಬಾರದು ಎನ್ನುವ ನಿಯಮವನ್ನು ಉಲ್ಲೇಖಿಸಿ ಸಿಬಿಲ್ ಸ್ಕೋರ್ ಇಲ್ಲ ಎಂದು ಸಬೂಬು ಹೇಳುತ್ತಾ ರೈತರಿಗೆ, ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ ಕೊಡುವುದನ್ನು ನಿಲ್ಲಿಸಲಾಗುತ್ತಿದೆ. ಬಗರ್ ಹುಕುಂ ಸಾಗುವಳಿಯಲ್ಲಿ ಹತ್ತಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ಅರಣ್ಯ ಭೂಮಿಯನ್ನು ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪಟ್ಟಾವನ್ನು ನೀಡಬೇಕು. ಕಾಡಂಚಿನಲ್ಲಿ ಪ್ರಾಣಿಗಳ ಹಾವಳಿ ತಪ್ಪಿಸಿ, ಕಾಡು ಪ್ರಾಣಿಗಳಿಂದ ಆಗುವ ಬೆಳೆ ಹಾನಿ ಪರಿಹಾರ ವೈಜ್ಞಾನಿಕವಾಗಿ ನಷ್ಟವನ್ನು ಭರಿಸಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಹೊತ್ತು ರೈತರು ಆಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದಾರೆ.

ಕಬ್ಬು ಬೆಳೆಗಾರರ ಹತ್ತೂ ಹಲವು ಬೇಡಿಕೆಗಳ ಅಹವಾಲುಗಳನ್ನು ಸ್ವೀಕರಿಸಿರುವ ಸರಕಾರದ ಮುಂದಿನ ನಿರ್ಧಾರಗಳ ಮೇಲೆ ರೈತರ ಬದುಕು ನಿಂತಿದೆ.

Similar News