ಚುನಾವಣಾ ಬಾಂಡ್ ರೂಪದಲ್ಲಿ ಕುರುಡು ಕಾಂಚಾಣದ ಕುಣಿತ

Update: 2022-12-05 05:44 GMT

ದೇಣಿಗೆ ವಿಚಾರದಲ್ಲಿ ಯಾವುದೇ ಪಾರದರ್ಶಕತೆ, ಉತ್ತರದಾಯಿತ್ವ ಇಲ್ಲದಿರುವುದರಿಂದ ಚುನಾವಣಾ ಬಾಂಡ್ ಮೂಲಕ ದೇಣಿಗೆಯಾಗಿ ಸಲ್ಲಿಕೆಯಾಗುವ ಹಣ ಮನಿ ಲಾಂಡರಿಂಗ್‌ಗೆ ಸಮವೆಂಬ ವಾದಗಳೂ ಇವೆ. ಇದು ಕಪ್ಪು ಹಣವನ್ನು ಬಿಳಿಯಾಗಿಸುವ ಸಾಧನವೆಂದೂ ಹೇಳಲಾಗುತ್ತದೆ. ದೇಣಿಗೆ ನೀಡುವವರ ಅನಾಮಧೇಯತೆಯು ಪ್ರಜಾಪ್ರಭುತ್ವಕ್ಕೇ ಮಾರಕವಾಗಲೂಬಹುದು ಎಂಬ ಆತಂಕವೂ ಈ ಎಲ್ಲ ವಾದಗಳ ಹಿಂದಿದೆ.

ಚುನಾವಣಾ ಬಾಂಡ್ ಯೋಜನೆಗೆ ಚುನಾವಣಾ ಆಯೋಗ 2017ರಿಂದಲೇ ವಿರೋಧ ವ್ಯಕ್ತಪಡಿಸುತ್ತ ಬಂದಿದೆ. ಆದರೂ ಚುನಾವಣಾ ಆಯೋಗ ಟಿ.ಎನ್.ಶೇಷನ್ ಕಾಲದಲ್ಲಿದ್ದಂತೆ ಬಲಿಷ್ಠವಾಗಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಚುನಾವಣಾ ಆಯೋಗಕ್ಕೆ ಈಚಿನ ವರ್ಷಗಳಲ್ಲಿ ನೇಮಕಗೊಳ್ಳುತ್ತಿರುವ ಆಯುಕ್ತರುಗಳೆಲ್ಲ ಹೌದಪ್ಪಗಳಾಗಿದ್ದಾರೆಂದು ನ್ಯಾಯಾಲಯವೇ ಬೇಸರ ವ್ಯಕ್ತಪಡಿಸಿದೆ. ಚುನಾವಣೆಗಳು ಆಳುವವರ ಆದೇಶದಂತೆ ನಡೆಯುವ ಸ್ಥಿತಿಯೂ ತಲೆದೋರಿದೆ. ದುಡ್ಡಿನ ಬಲದ ರಾಜಕಾರಣ ಮಾತ್ರ ಅವ್ಯಾಹತವಾಗಿದೆ. ಎಲ್ಲೆಲ್ಲೂ ಕುರುಡು ಕಾಂಚಾಣವೇ ಕುಣಿಯುತ್ತಲಿದೆ.

ದೇಣಿಗೆ ಹೆಸರಲ್ಲಿ ರಾಜಕೀಯ ಪಕ್ಷಗಳು ಪಡೆಯುವ ಹಣಕ್ಕೆ ಮಿತಿಯೇ ಇಲ್ಲ. ದೇಣಿಗೆ ರೂಪದಲ್ಲಿ ಬರುವ ಹಣ ಸಾವಿರಾರು ಕೋಟಿ. ಮೂಲವೇ ಗೊತ್ತಾಗದ ದುಡ್ಡು ರಾಜಕೀಯ ಪಕ್ಷಗಳ ಖಜಾನೆ ಸೇರುತ್ತದೆ. ಕಳೆದ 4 ವರ್ಷಗಳಿಂದ ಚಾಲ್ತಿಯಲ್ಲಿರುವ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಹಣ ಸಂದಾಯವಾಗುವ ವ್ಯವಸ್ಥೆಯ ಕುರಿತೇ ಪ್ರಶ್ನೆಗಳೂ ಇವೆ. ಈಗಾಗಲೇ ಇದನ್ನು ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸುಪ್ರೀಂ ಕೋರ್ಟಿನಲ್ಲಿವೆ. ಡಿಸೆಂಬರ್ 6ರಂದು ವಿಚಾರಣೆ ಸಾಧ್ಯತೆಯಿದೆ.

ಈ ನಡುವೆ, 2021-22ರ ಅವಧಿಯಲ್ಲಿ ಪಡೆದಿರುವ ದೇಣಿಗೆ ಯ ಬಗ್ಗೆ ನಾಲ್ಕು ರಾಷ್ಟ್ರೀಯ ಪಕ್ಷಗಳು ಮಾಹಿತಿಯನ್ನು ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ. ಅದರ ಪ್ರಕಾರ ಆಡಳಿತಾರೂಢ ಬಿಜೆಪಿಯದ್ದೇ ಸಿಂಹಪಾಲು. ಅದು ಪಡೆದಿರುವ ಒಟ್ಟು ದೇಣಿಗೆ ರೂ.614.53 ಕೋಟಿಯಾಗಿದ್ದು, ಇದು ಕಾಂಗ್ರೆಸ್ ಪಡೆದ ದೇಣಿಗೆಗಿಂತ ಆರು ಪಟ್ಟು ಹೆಚ್ಚು. ಕಾಂಗ್ರೆಸ್‌ಗೆ ಬಂದಿರುವ ದೇಣಿಗೆ 95.46 ಕೋಟಿ ರೂ.. ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ದೇಣಿಗೆಯಾಗಿ ಸ್ವೀಕರಿಸಿರುವುದು 43 ಲಕ್ಷ ರೂ. ಕೇರಳದಲ್ಲಿ ಅಧಿಕಾರದಲ್ಲಿರುವ ಸಿಪಿಐ-ಎಂ ಪಡೆದಿರುವುದು 10.05 ಕೋಟಿ ರೂ. ಇನ್ನು ಮೂರು ರಾಜ್ಯಗಳಲ್ಲಿ ಮಾನ್ಯತೆ ಪಡೆದಿರುವ, ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಕೂಡ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದು, ಈ ಅವಧಿಯಲ್ಲಿ ಅದು 44.54 ಕೋಟಿ ರೂ. ದೇಣಿಗೆ ಪಡೆದಿದೆ.

ದೇಶದಲ್ಲಿ ಒಟ್ಟು 22 ಚುನಾವಣಾ ಟ್ರಸ್ಟ್‌ಗಳಿದ್ದು, ಇವುಗಳಲ್ಲಿ ಪ್ರಮುಖ ಮತ್ತು ಶ್ರೀಮಂತವಾದುದು ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್. ಈ ಟ್ರಸ್ಟ್ 2021-22ರ ಅವಧಿಯಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಸುಮಾರು 464.83 ಕೋಟಿ ದೇಣಿಗೆ ನೀಡಿದ್ದು, ಇದರಲ್ಲಿಯೂ ಬಿಜೆಪಿಗೆ ಸಿಕ್ಕಿರುವುದು ಬಹುದೊಡ್ಡ ಪಾಲು. ಅಂದರೆ 335.5 ಕೋಟಿ. ಈ ಹಿಂದಿನ ವರ್ಷಗಳಲ್ಲಿಯೂ ಆಡಳಿತಾರೂಢ ಬಿಜೆಪಿಯೇ ಈ ಯೋಜನೆಯ ದೊಡ್ಡ ಫಲಾನುಭವಿ. 2017-18 ಮತ್ತು 2018-19ರಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳಿಂದ ಒಟ್ಟು 2,760.20 ಕೋಟಿ ರೂ.ಗಳನ್ನು ಪಡೆದಿದ್ದು, ಈ ಪೈಕಿ 1,660.89 ಕೋಟಿ ರೂ. ಅಂದರೆ ಶೇ. 60.17ರಷ್ಟು ದೇಣಿಗೆ ಬಿಜೆಪಿಗೆ ಬಂದಿದೆ. ಕಾರ್ಪೊರೇಟ್ ಸಂಸ್ಥೆಗಳ ಶೇ.95ರಷ್ಟು ದೇಣಿಗೆ ಬಿಜೆಪಿಗೇ ಹೋಗುತ್ತದೆಂದು ಪ್ರತಿಪಕ್ಷಗಳೂ ಆರೋಪಿಸಿವೆ.

ಜನಪ್ರಾತಿನಿಧ್ಯ ಕಾಯ್ದೆ ಪ್ರಕಾರ, ರಾಜಕೀಯ ಪಕ್ಷಗಳಿಗೆ ವ್ಯಕ್ತಿ ಅಥವಾ ಸಂಸ್ಥೆಗಳು ನೀಡುವ ದೇಣಿಗೆ ಮೊತ್ತವು 20ಸಾವಿರ ರೂ.ಗಳಿಗಿಂತ ಕಡಿಮೆಯಿದ್ದಲ್ಲಿ ಅಂಥವರ ಹೆಸರನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸಬೇಕಿಲ್ಲ. ಈಗ, 2,000 ರೂ.ಗಳಿಗಿಂತ ಹೆಚ್ಚಿನ ಮೊತ್ತದ ದೇಣಿಗೆಯಿದ್ದಲ್ಲಿ ನೀಡಿದವರ ಮಾಹಿತಿ ಬಹಿರಂಗಪಡಿಸಬೇಕೆಂದು ಸೂಚಿಸಿರುವ ಚುನಾವಣಾ ಆಯೋಗ ಈ ಸಂಬಂಧ ಸರಕಾರಕ್ಕೆ ಪತ್ರ ಬರೆದಿದೆ. ಆದರೆ, ಮಾಹಿತಿಯನ್ನೇ ಬಹಿರಂಗಪಡಿಸದೆ ವ್ಯಕ್ತಿಗಳು, ಸಂಸ್ಥೆಗಳು ತಮಗೆ ಬೇಕೆನಿಸಿದಷ್ಟು ದೊಡ್ಡ ಮೊತ್ತವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ನೀಡಲು ಅವಕಾಶ ಮಾಡಿಕೊಟ್ಟಿರುವ ವ್ಯವಸ್ಥೆಯೇ ಚುನಾವಣಾ ಬಾಂಡ್.

2017ರ ಹಣಕಾಸು ಮಸೂದೆಯಲ್ಲಿ ಚುನಾವಣಾ ಬಾಂಡ್ ಪರಿಚಯಿಸಲಾಯಿತು. ಈ ಬಾಂಡ್‌ಗಳು 1 ಸಾವಿರ, 10 ಸಾವಿರ, 1 ಲಕ್ಷ, 10 ಲಕ್ಷ ಮತ್ತು 1 ಕೋಟಿ ರೂ. ವೌಲ್ಯದಲ್ಲಿ ಲಭ್ಯ. ಮಾರಾಟ ಮಾಡುವ ಅಧಿಕಾರ ಹೊಂದಿರುವುದು ಎಸ್‌ಬಿಐ. ದೇಶದ ನಿಗದಿತ 29 ಎಸ್‌ಬಿಐ ಶಾಖೆಗಳಲ್ಲಿ ಇವು ಸಿಗುತ್ತವೆ. ಪ್ರತೀ ತ್ರೈಮಾಸಿಕದ ಆರಂಭದಲ್ಲಿ ಅಂದರೆ ಜನವರಿ, ಎಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳುಗಳ ಮೊದಲ 10 ದಿನಗಳಲ್ಲಿ ಇವುಗಳ ಮಾರಾಟವಿರುತ್ತದೆ. ಲೋಕಸಭೆ ಚುನಾವಣೆ ನಡೆಯುವ ವರ್ಷದಲ್ಲಿ ಕೇಂದ್ರ ಸರಕಾರವು ಹೆಚ್ಚುವರಿ 30 ದಿನಗಳನ್ನು ಇವುಗಳ ಮಾರಾಟಕ್ಕೆ ನೀಡಬಹುದಾಗಿದೆ.

ದೇಣಿಗೆ ನೀಡುವವರು ತಮ್ಮ ಆಯ್ಕೆಯ ಪಕ್ಷದ ಪರ ಬಾಂಡ್‌ಗಳನ್ನು ಖರೀದಿಸಬಹುದು ಮತ್ತು ನಂತರ ದಾನ ಮಾಡಬಹುದು. ಬಳಿಕ ಆ ರಾಜಕೀಯ ಪಕ್ಷವು ಇದಕ್ಕೆಂದೇ ಇರುವ ತನ್ನ ಖಾತೆಯ ಮೂಲಕ 15 ದಿನಗಳಲ್ಲಿ ಹಣವನ್ನು ಪಡೆಯಬಹುದು. ಒಂದು ವೇಳೆ, ಆ ರಾಜಕೀಯ ಪಕ್ಷವು 15 ದಿನಗಳಲ್ಲಿ ಹಣ ಪಡೆದು ಕೊಳ್ಳದಿದ್ದರೆ, ಆ ಬಾಂಡ್‌ಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಎಸ್‌ಬಿಐ ಜಮಾ ಮಾಡುತ್ತದೆ. ಒಬ್ಬ ವ್ಯಕ್ತಿ ಅಥವಾ ಕಂಪೆನಿಯು ಖರೀದಿಸಬಹುದಾದ ಬಾಂಡ್‌ಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.

ದೇಣಿಗೆ ವಿಚಾರದಲ್ಲಿ ಯಾವುದೇ ಪಾರದರ್ಶಕತೆ, ಉತ್ತರದಾಯಿತ್ವ ಇಲ್ಲದಿರುವುದರಿಂದ ಚುನಾವಣಾ ಬಾಂಡ್ ಮೂಲಕ ದೇಣಿಗೆಯಾಗಿ ಸಲ್ಲಿಕೆಯಾಗುವ ಹಣ ಮನಿ ಲಾಂಡರಿಂಗ್‌ಗೆ ಸಮವೆಂಬ ವಾದಗಳೂ ಇವೆ. ಇದು ಕಪ್ಪು ಹಣವನ್ನು ಬಿಳಿಯಾಗಿಸುವ ಸಾಧನವೆಂದೂ ಹೇಳಲಾಗುತ್ತದೆ. ದೇಣಿಗೆ ನೀಡುವವರ ಅನಾಮಧೇಯತೆಯು ಪ್ರಜಾಪ್ರಭುತ್ವಕ್ಕೇ ಮಾರಕವಾಗಲೂಬಹುದು ಎಂಬ ಆತಂಕವೂ ಈ ಎಲ್ಲ ವಾದಗಳ ಹಿಂದಿದೆ. ರಾಜಕೀಯ ಪಕ್ಷಗಳು ಸಂಗ್ರಹಿಸುವ ಒಟ್ಟು ದೇಣಿಗೆಯಲ್ಲಿ ಶೇ.70ರಿಂದ 80ರಷ್ಟು ಚುನಾವಣಾ ಬಾಂಡ್‌ಗಳಿಂದಲೇ ಸಂಗ್ರಹವಾಗುತ್ತದೆ. ಇದೇ ಹಣವೇ ಕುದುರೆ ವ್ಯಾಪಾರಕ್ಕೂ ಬಳಕೆಯಾಗುವುದು ಎಂಬ ಆರೋಪಗಳೂ ಇವೆ.

ಚುನಾವಣಾ ಬಾಂಡ್ ಯೋಜನೆಗೆ ಚುನಾವಣಾ ಆಯೋಗ 2017ರಿಂದಲೇ ವಿರೋಧ ವ್ಯಕ್ತಪಡಿಸುತ್ತ ಬಂದಿದೆ. ಆದರೂ ಚುನಾವಣಾ ಆಯೋಗ ಟಿ.ಎನ್.ಶೇಷನ್ ಕಾಲದಲ್ಲಿದ್ದಂತೆ ಬಲಿಷ್ಠವಾಗಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಚುನಾವಣಾ ಆಯೋಗಕ್ಕೆ ಈಚಿನ ವರ್ಷಗಳಲ್ಲಿ ನೇಮಕಗೊಳ್ಳುತ್ತಿರುವ ಆಯುಕ್ತರುಗಳೆಲ್ಲ ಹೌದಪ್ಪಗಳಾಗಿದ್ದಾರೆಂದು ನ್ಯಾಯಾಲಯವೇ ಬೇಸರ ವ್ಯಕ್ತಪಡಿಸಿದೆ. ಚುನಾವಣೆಗಳು ಆಳುವವರ ಆದೇಶದಂತೆ ನಡೆಯುವ ಸ್ಥಿತಿಯೂ ತಲೆದೋರಿದೆ. ದುಡ್ಡಿನ ಬಲದ ರಾಜಕಾರಣ ಮಾತ್ರ ಅವ್ಯಾಹತವಾಗಿದೆ. ಎಲ್ಲೆಲ್ಲೂ ಕುರುಡು ಕಾಂಚಾಣವೇ ಕುಣಿಯುತ್ತಲಿದೆ.

ಮುಂಬೈನಲ್ಲಿಯೇ ಹೆಚ್ಚು ಮಾರಾಟ

 2018ರಿಂದಲೂ ಹೆಚ್ಚಿನ ಬಾಂಡ್‌ಗಳು ಮಾರಾಟವಾದದ್ದು ಮುಂಬೈಯಲ್ಲಿ ಮತ್ತು ಅವುಗಳಲ್ಲಿ ಹೆಚ್ಚಿನವು ನಗದೀಕರಣಗೊಂಡದ್ದು ಹೊಸದಿಲ್ಲಿಯಲ್ಲಿ. ಮಾಹಿತಿಯ ಪ್ರಕಾರ ಅತ್ಯಧಿಕ ವೌಲ್ಯದ ಬಾಂಡ್‌ಗಳು ಮಾರಾಟವಾಗಿರುವ ಟಾಪ್ 5 ಎಸ್‌ಬಿಐ ಶಾಖೆಗಳು ಮುಂಬೈ, ಕೋಲ್ಕತಾ, ಹೈದರಾಬಾದ್, ಹೊಸದಿಲ್ಲಿ ಮತ್ತು ಚೆನ್ನೈ. 2,742.12 ಕೋಟಿ ರೂ. ವೌಲ್ಯದ ಬಾಂಡ್‌ಗಳು ಮುಂಬೈಯಲ್ಲಿ ಮಾರಾಟವಾಗಿದ್ದರೆ, 2,387.71 ಕೋಟಿ ರೂ. ವೌಲ್ಯದ ಬಾಂಡ್‌ಗಳು ಕೋಲ್ಕತಾದಲ್ಲಿ ಮಾರಾಟವಾಗಿವೆ. ಹೈದರಾಬಾದ್‌ನಲ್ಲಿ 1,885.35 ಕೋಟಿ ರೂ. ವೌಲ್ಯದ ಬಾಂಡ್‌ಗಳು ಮಾರಾಟವಾಗಿವೆ. ಹೊಸದಿಲ್ಲಿಯಲ್ಲಿ 1,519.44 ಕೋಟಿ ರೂ. ವೌಲ್ಯದ ಮಾರಾಟವಾಗಿದ್ದರೆ, ಚೆನ್ನೈ 1,053.20 ಕೋಟಿ ರೂ. ವೌಲ್ಯದ ಬಾಂಡ್‌ಗಳು ಮಾರಾಟ ಕಂಡಿವೆ. ಇನ್ನು ಅತಿ ಕಡಿಮೆ ವೌಲ್ಯದ ಬಾಂಡ್‌ಗಳ ಮಾರಾಟ ದಾಖಲಾಗಿರುವುದು ಪಾಟ್ನಾದಲ್ಲಿ. ಕೇವಲ 80 ಲಕ್ಷ ವೌಲ್ಯದ ಬಾಂಡ್‌ಗಳಷ್ಟೇ ಅಲ್ಲಿ ಮಾರಾಟವಾಗಿವೆ.

ನಾಲ್ಕು ವರ್ಷಗಳಲ್ಲಿ...

2018ರಿಂದ ಇಲ್ಲಿಯವರೆಗೆ ಅಂದರೆ ಕಳೆದ ನಾಲ್ಕು ವರ್ಷ ಗಳಲ್ಲಿ ಚುನಾವಣಾ ಬಾಂಡ್‌ಗಳಿಂದ ರಾಜಕೀಯ ಪಕ್ಷಗಳು ಪಡೆದಿರುವ ಒಟ್ಟು ಹಣ 10,791 ಕೋಟಿಗೂ ಅಧಿಕ. 2022ರ ಜನವರಿಯ ಮೊದಲ ಹತ್ತು ದಿನಗಳಲ್ಲಿಯೇ ಸುಮಾರು1,213 ಕೋಟಿ ರೂ. ವೌಲ್ಯದ ಚುನಾವಣಾ ಬಾಂಡ್‌ಗಳ ಮಾರಾಟವಾಗಿದೆಯೆಂಬ ವರದಿಗಳಿವೆ.

ಈ ನಾಲ್ಕು ವರ್ಷಗಳಲ್ಲಿ ಮುದ್ರಣವಾಗಿರುವ ಬಾಂಡ್‌ಗಳಲ್ಲಿ

  • 1 ಕೋಟಿ ರೂ. ವೌಲ್ಯದವು - 24,650 ಬಾಂಡ್‌ಗಳು
  • 10 ಲಕ್ಷ ರೂ. ವೌಲ್ಯದವು - 26,600 ಬಾಂಡ್‌ಗಳು
  • 1 ಲಕ್ಷ ರೂ. ವೌಲ್ಯದವು - 93,000 ಬಾಂಡ್‌ಗಳು
  • 10 ಸಾವಿರ ಮತ್ತು 1 ಸಾವಿರ ರೂ. ವೌಲ್ಯದವು - ತಲಾ 2,65,000 ಬಾಂಡ್‌ಗಳು
  • ಅಂದರೆ 1 ಕೋಟಿ ರೂ. ವೌಲ್ಯದ ಬಾಂಡ್‌ಗಳದ್ದೇ ಸಿಂಹಪಾಲು.

Full View

Similar News