ಸರಕಾರಿ ವಿವಿಗಳಲ್ಲಿ ಆರಂಭವಾಗದ ಶೈಕ್ಷಣಿಕ ವರ್ಷ

ಉನ್ನತ ಶಿಕ್ಷಣ ಇಲಾಖೆಯ ಆದೇಶವನ್ನೂ ಮೂಲೆಗುಂಪು ಮಾಡಿದ ಸರಕಾರಿ ವಿವಿಗಳು

Update: 2022-12-05 05:37 GMT

ಬೆಂಗಳೂರು, ಡಿ.5: ಸರಕಾರಿ ವಿಶ್ವವಿದ್ಯಾನಿಲಯಗಳು ಶೈಕ್ಷಣಿಕ ವರ್ಷದ ಕಡೆಗೆ ಗಮನ ಹರಿಸದೆ ಕ್ಯಾಲೆಂಡರ್ ವರ್ಷ ಮುಗಿಯುತ್ತಾ ಬಂದರೂ, ರಾಜ್ಯದ ಯಾವ ಸರಕಾರಿ ವಿವಿಯಲ್ಲೂ ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿಲ್ಲ. ಬಹುತೇಕ ಎಲ್ಲ ವಿವಿಗಳಲ್ಲಿ ಈಗಾಗಲೇ ಅಂತಿಮ ಪದವಿ ಪರೀಕ್ಷೆಯ ಫಲಿತಾಂಶ ಹೊರಬಂದಿದ್ದು, ಪ್ರಥಮ ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ವಿವಿಗಳು ಪ್ರವೇಶ ಪ್ರಕ್ರಿಯೆಯನ್ನು ನಡೆಸಲು ಮುಂದಾಗುತ್ತಿಲ್ಲ.

ಕೋವಿಡ್ ಕಾಲಘಟ್ಟದಲ್ಲಿ ಉಂಟಾಗಿದ್ದ ಶೈಕ್ಷಣಿಕ ವರ್ಷದ ಗೊಂದಲವನ್ನು ಸರಿಪಡಿಸಲು ಸರಕಾರಿ ವಿಶ್ವವಿದ್ಯಾನಿಲಯಗಳು ವಿಫಲವಾದ ಕಾರಣ ಉನ್ನತ ಶಿಕ್ಷಣ ಇಲಾಖೆಯೆ 2022-23ನೇ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅದನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ವಿವಿಗಳಿಗೆ ಆದೇಶ ಮಾಡಲಾಗಿತ್ತು. ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು ಇಲಾಖೆಗೆ ಈ ಕುರಿತು ಶಿಫಾರಸು ಮಾಡಿತ್ತು. ಆದರೆ ಸರಕಾರದ ಯಾವುದೇ ವಿವಿಯು ಈ ಆದೇಶವನ್ನು ಪಾಲಿಸಿಲ್ಲ. ಹಾಗಾಗಿ ಡಿಸೆಂಬರ್ ತಿಂಗಳ ಬಂದರೂ ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗದೇ ವಿದ್ಯಾರ್ಥಿಗಳಲ್ಲಿ ಗೊಂದಲವನ್ನು ಸೃಷ್ಟಿಸಿದೆ.

ಪ್ರತಿವರ್ಷ ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಸ್ನಾತಕೋತ್ತರ ಪದವಿಯ ಶೈಕ್ಷಣಿಕ ವರ್ಷ ಆರಂಭವಾಗುತ್ತಿತ್ತು. ಡಿಸೆಂಬರ್‌ನಲ್ಲಿ ಪದವಿಯ ಮೊದಲ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದವು. ಕೋವಿಡ್ ಇದ್ದ ಕಾರಣಕ್ಕೆ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿದ ಹಿನ್ನೆಲೆ, ಈಗ ಶೈಕ್ಷಣಿಕ ವರ್ಷದಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಶೈಕ್ಷಣಿಕ ವರ್ಷದ ಗೊಂದಲವನ್ನು ಸರಿಪಡಿಸಲು ಸರಕಾರವು ಹೊರಡಿಸಿದ್ದ ಆದೇಶವನ್ನು ಮೂಲೆಗುಂಪು ಮಾಡಿದ ಸರಕಾರಿ ವಿಶ್ವವಿದ್ಯಾನಿಲಯಗಳು, ವಿದ್ಯಾರ್ಥಿಗಳ ಬಾಳಲ್ಲಿ ಚೆಲ್ಲಾಟವಾಡುವ ಪ್ರಕ್ರಿಯೆಯನ್ನು ಮುಂದುವರಿಸುತ್ತಿವೆ.

ಕೇವಲ ಅನುದಾನವನ್ನು ನೀಡುತ್ತಿಲ್ಲ ಎಂದು ಸರಕಾರವನ್ನು ದೂರುತ್ತಿರುವ ಸರಕಾರಿ ವಿವಿಗಳ ಕುಲಪತಿಗಳು ಸೇರಿದಂತೆ ವಿವಿಯ ಸಿಂಡಿಕೇಟ್ ಸದಸ್ಯರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚರ್ಚೆ ಮಾಡಲು ನಿರ್ಲಕ್ಷ ವಹಿಸುತ್ತಿದ್ದಾರೆ. ರಾಜಕೀಯ ನಿರಾಶ್ರಿತರಿಗೆ ಹಾಗೂ ಎಬಿವಿಪಿ ಕಾರ್ಯಕರ್ತರಿಗೆ ಸಿಂಡಿಕೇಟ್ ಸದಸ್ಯತ್ವವನ್ನು ನೀಡಿದ ಪರಿಣಾಮವಾಗಿ, ಸಿಂಡಿಕೇಟ್ ಸಭೆಗಳಲ್ಲಿ ಹಣಕಾಸಿನ ವ್ಯವಹಾರ, ಕಾಮಗಾರಿಗೆ ಹಣ ಹೊಂದಾಣಿಕೆಯ ಬಗ್ಗೆ ಚರ್ಚಿಸಲಾಗುತ್ತಿದೆ. ಇದರಿಂದ ರಾಜ್ಯದ ವಿವಿಗಳ ಗುಣಮಟ್ಟ ಹಾಳಗುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸುತ್ತಿವೆ.

ಆದರೆ, ಖಾಸಗಿ ವಿವಿಗಳಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಈಗಾಗಲೇ ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷ ಆರಂಭವಾಗಿ ಪರೀಕ್ಷೆಗಳನ್ನು ನಡೆಸುವ ಹಂತಕ್ಕೆ ತಲುಪಿವೆ. ಕ್ರೈಸ್ಟ್ ಯುನಿವರ್ಸಿಟಿ, ರೇವಾ ಯುನಿವರ್ಸಿಟಿ ಸೇರಿದಂತೆ ಖಾಸಗಿ ವಿವಿಗಳಲ್ಲಿ ಎಂದಿನಂತೆ ಆಗಸ್ಟ್ ತಿಂಗಳಿನಲ್ಲಿಯೇ ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಆರಂಭಿಸಿವೆ. ಹಾಗಾಗಿ ಅಲ್ಲಿ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗದೆ ಇರುವ ಕಾರಣ ಸಕಾಲದಲ್ಲಿ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ, ಸಕಾಲದಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಸಾರಿಗೆ ಇಲಾಖೆಯಿಂದ ಉಚಿತ ವಿದ್ಯಾರ್ಥಿ ಪಾಸುಗಳನ್ನು ನಿಗದಿತ ವೇಳೆಗೆ ಪಡೆಯಲು ತೊಂದರೆಯನ್ನು ಅನುಭವಿಸುವಂತಾಗಿದೆ. ಇನ್ನು ಪ್ರಸಕ್ತ ಬಜೆಟ್‌ನಲ್ಲಿ ವಿವಿಗಳಿಗೆ ಮಂಜೂರು ಮಾಡಬೇಕಾದ ಹಣವನ್ನು ಹಂಚಿಕೆ ಮಾಡುವಲ್ಲಿ ಉಂಟಾಗುವ ಗೊಂದಲವನ್ನು ಹೇಗೆ ನಿವಾರಿಸುತ್ತಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

'ರಾಜ್ಯ ಸರಕಾರವು ಆದೇಶ ಹೊರಡಿಸಿದ್ದು, ಅದನ್ನು ಪಾಲನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸರಕಾರಕ್ಕೆ ತಿಳಿದಿದೆ. ಬೆಂಗಳೂರು ಉತ್ತರ ವಿವಿಯಲ್ಲಿ ಮೌಲ್ಯಮಾಪನಕ್ಕಾಗಿ ಇತರೆ ವಿವಿಗಳಿಂದ ಸಿಬ್ಬಂದಿಯನ್ನು ಎರವಲು ಪಡೆಯಲಾಗಿದೆ. ಹಾಗಾಗಿ ಶೈಕ್ಷಣಿಕ ವರ್ಷವನ್ನು ಆರಂಭ ಮಾಡಲು ಸಾಧ್ಯವಾಗಿಲ್ಲ. ರಾಜ್ಯದ ಎಲ್ಲ ಸರಕಾರಿ ವಿವಿಗಳಲ್ಲಿ ಈ ಸಮಸ್ಯೆ ಇದ್ದು, ಶೈಕ್ಷಣಿಕ ವರ್ಷವು 6 ತಿಂಗಳು ಹಿಂದೆ ಉಳಿದಿದೆ. 2023-24ನೇ ಶೈಕ್ಷಣಿಕ ವರ್ಷಕ್ಕೆ ಈ ಗೊಂದಲ ನಿವಾರಣೆ ಆಗುವ ಸಾಧ್ಯತೆ ಇದೆ.'

-ಪ್ರೊ.ನಿರಂಜನ, ಬೆಂಗಳೂರು ಉತ್ತರ ವಿವಿಯ ಕುಲಪತಿ

-----------------------------------------------

ಉನ್ನತ ಶಿಕ್ಷಣದಲ್ಲಿ ಏಕಾಏಕಿ ಎನ್‌ಇಪಿಯನ್ನು ಜಾರಿಗಳಿಸಿದ ಪರಿಣಾಮ ಸರಕಾರ ವಿವಿಗಳಲ್ಲಿ ಶೈಕ್ಷಣಿಕ ವರ್ಷದ ಗೊಂದಲ ಸೃಷ್ಟಿಯಾಗಿದೆ. ಕೋವಿಡ್ ಕಾಲದಲ್ಲಿ ಉಂಟಾಗಿದ್ದಶೈಕ್ಷಣಿಕ ಗೊಂದಲವನ್ನು ನಿವಾರಿಸಲು ಸರಕಾರ ಶ್ರಮಿಸಿದ್ದರೆ, ಖಾಸಗಿ ವಿವಿಗಳಂತೆ ಬಡ ಮಕ್ಕಳು ಓದುವ ಸರಕಾರ ವಿವಿಗಳಲ್ಲಿ ಇಷ್ಟೊತ್ತಿಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗುತ್ತಿತ್ತು.

- ಶ್ರೀಪಾದ ಭಟ್,  ಶಿಕ್ಷಣ ತಜ್ಞ

-----------------------------------------

ರಾಜ್ಯದ ಉನ್ನತ ಶಿಕ್ಷಣದಲ್ಲಿ ಉಂಟಾಗಿರುವ ಶೈಕ್ಷಣಿಕ ವರ್ಷದ ಗೊಂದಲಗಳ ಕುರಿತು ಪ್ರತಿಕ್ರಿಯೆ ನೀಡಲು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ. ಬಿ.ತಿಮ್ಮೇಗೌಡ ನಿರಾಕರಿಸಿದ್ದಾರೆ. ಇನ್ನು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾವುದೇ ಸ್ಪಷ್ಟನೆಯನ್ನು ನೀಡದೆ, ವಿವಿಗಳನ್ನು ಸಂಪರ್ಕಿಸುವಂತೆ ಹೇಳುತ್ತಿದ್ದಾರೆ.

Similar News