ಖತರ್ ನಿಂದ ಸ್ವದೇಶಕ್ಕೆ ಮರಳಲಿರುವ ಇಂಗ್ಲೆಂಡ್ ಆಟಗಾರ ರಹೀಂ ಸ್ಟರ್ಲಿಂಗ್: ಕಾರಣವೇನು ಗೊತ್ತೇ?

Update: 2022-12-05 08:14 GMT

ಹೊಸದಿಲ್ಲಿ: ರಹೀಂ ಸ್ಟರ್ಲಿಂಗ್ Raheem Sterling  ಅವರು ಖತರ್ ನಲ್ಲಿರುವ ಇಂಗ್ಲೆಂಡ್‌ನ ವಿಶ್ವಕಪ್ ತಂಡವನ್ನು ತೊರೆದು  ಮನೆಗೆ ಮರಳಲಿದ್ದು ಫ್ರಾನ್ಸ್ ವಿರುದ್ಧ ಶನಿವಾರ ನಡೆಯುವ  ಕ್ವಾರ್ಟರ್-ಫೈನಲ್‌ಗೆ ಮೊದಲು ತಂಡಕ್ಕೆ ವಾಪಸಾಗುವುದು ಅನುಮಾನ ಎಂದು ವರದಿಯಾಗಿದೆ.

ಚೆಲ್ಸಿಯಾ ಫಾರ್ವರ್ಡ್ ಆಟಗಾರ  ಸ್ಟರ್ಲಿಂಗ್ "ಕೌಟುಂಬಿಕ ಕಾರಣಕ್ಕಾಗಿ  ಸೆನೆಗಲ್ ವಿರುದ್ಧ ರವಿವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ನಿಂದ  ಹೊರಗುಳಿದರು" ಎಂದು ಇಂಗ್ಲೆಂಡ್ ಫುಟ್ಬಾಲ್ ಅಸೋಸಿಯೇಶನ್ ದೃಢಪಡಿಸಿದೆ.

ಬ್ರಿಟಿಷ್ ಮಾಧ್ಯಮದಲ್ಲಿನ ವರದಿಗಳ ಪ್ರಕಾರ, ಶನಿವಾರ ರಾತ್ರಿ ಸ್ಟರ್ಲಿಂಗ್ ಕುಟುಂಬ ವಾಸವಿದ್ದ ಮನೆಗೆ ನುಸುಳಿದ್ದ ಶಸ್ತ್ರಸಜ್ಜಿತ ದರೋಡೆಕೋರರು ದರೋಡೆ ಗೈದಿದ್ದಾರೆ, 

" ಇಂತಹ ಸಮಯದಲ್ಲಿ ಸ್ಪಷ್ಟವಾಗಿ ಅವರ ಆದ್ಯತೆಯು ಅವರ ಕುಟುಂಬದೊಂದಿಗೆ ಇರುವುದಾಗಿದೆ. ನಾವು ಅದನ್ನು ಬೆಂಬಲಿಸುತ್ತೇವೆ ಹಾಗೂ  ಅವರಿಗೆ ಅಗತ್ಯವಿರುವಷ್ಟು ಸಮಯವನ್ನು ಕುಟುಂಬದೊಂದಿಗೆ ಕಳೆಯಲು ಬಿಡುತ್ತೇವೆ" ಎಂದು ಇಂಗ್ಲೆಂಡ್ ಮ್ಯಾನೇಜರ್ ಗ್ಯಾರತ್  ಸೌತ್‌ಗೇಟ್ ಹೇಳಿದರು.

"ಈ ಸಮಯದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಬೇಕಾಗುತ್ತದೆ ಹಾಗೂ  ಅವರಿಗೆ ಯಾವುದೇ ಒತ್ತಡ ಹಾಕಲು ನಾನು ಬಯಸುವುದಿಲ್ಲ'' ಎಂದು ಸೌತ್ ಗೇಟ್ ಹೇಳಿದ್ದಾರೆ.

ಸೌತ್‌ಗೇಟ್‌ರ ಆರು ವರ್ಷಗಳ ಕೋಚಿಂಗ್ ಅವಧಿಯಲ್ಲಿ ಸ್ಟರ್ಲಿಂಗ್ ಇಂಗ್ಲೆಂಡ್‌ಗೆ ಪ್ರಮುಖ ಆಟಗಾರರಾಗಿದ್ದರು.

27 ವರ್ಷ ವಯಸ್ಸಿನ ಸ್ಟರ್ಲಿಂಗ್  ಅವರು ತಮ್ಮ ದೇಶಕ್ಕಾಗಿ ಆಡಿರುವ 81 ಪಂದ್ಯಗಳಲ್ಲಿ 20 ಗೋಲುಗಳನ್ನು ಗಳಿಸಿದ್ದಾರೆ.  2022 ರ ವಿಶ್ವಕಪ್‌ನಲ್ಲಿ ಇರಾನ್ ವಿರುದ್ಧ ಇಂಗ್ಲೆಂಡ್ ನ  6-2 ಗೆಲುವಿನಲ್ಲಿ ಒಂದು ಗೋಲು ಗಳಿಸಿದ್ದರು.

Similar News