​ಮೂಡಾದ 3ನೆ ಹಂತದ ಯೋಜನೆ ತ್ವರಿತ ವಿಲೇಗೆ ಪ್ರಯತ್ನ: ರವಿಶಂಕರ ಮಿಜಾರು

Update: 2022-12-05 11:26 GMT

ಮಂಗಳೂರು: ನಗರಾಭಿವೃದ್ಧಿ  ಪ್ರಾಧಿಕಾರದ ಮೂರನೇ ಹಂತದ ಮಹಾಯೋಜನೆಯು  ಕೋವಿಡ್ ಕಾರಣದಿಂದ ವಿಳಂಬವಾಗಿದೆ. ಇದರ ಸಾಧಕ-ಬಾಧಕ ಬಗ್ಗೆ ಕೆಲವೊಂದು ಆಕ್ಷೇಪಣೆ ಬಂದಿದ್ದು, ಇದರ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ರವಿಶಂಕರ ಮಿಜಾರು ಹೇಳಿದರು.

ನಗರದ ಮುಡಾ ಕಚೇರಿಯಲ್ಲಿ  ಸೋಮವಾರ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ಬಾಕಿಯುಳಿದಿರುವ ಕೆಲಸಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ ಎಂದರು.

ಮುಡಾ ಅಧ್ಯಕ್ಷನಾಗಿ ಪುನರಾಯ್ಕೆಗೊಂಡಿರುವುದು ಖುಷಿ ನೀಡಿದೆ ಎಂದು ಹೇಳಿದ ಅವರು, ಕೊಣಾಜೆ, ಕುಂಜತ್‌ಬೈಲ್ ಸೇರಿದಂತೆ ಮುಡಾದ 3 ಲೇಔಟ್‌ಗಳನ್ನು ಅತೀ ಶೀಘ್ರದಲ್ಲೇ ವಿಲೇವಾರಿ ಮಾಡಲಾಗುವುದು. ಪಾರ್ಕ್, ಸಾರ್ವಜನಿಕ ಸ್ಥಳದಲ್ಲಿ  ಹಣ್ಣು ಗಿಡನೆಟ್ಟು ಸುಂದರೀಕರಣಗೊಳಿಸಲಾಗುವುದು ಎಂದರು.

ಮುಡಾದಿಂದ 4 ವಿಧಾನಸಭಾ ಕ್ಷೇತ್ರದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಬಾಕಿಯುಳಿದ ಕಾಮಗಾರಿಗಳನ್ನು ಶೀಘ್ರ ಮುಗಿಸಲಾಗುವುದು. ಮಂಗಳೂರು ದಕ್ಷಿಣ ಮತ್ತು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ 100 ಪಾರ್ಕ್‌ಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದ್ದು, 45 ಪಾರ್ಕ್ ಟೆಂಡರ್ ಮುಕ್ತಾಯ ಹಂತದಲ್ಲಿದೆ. ಉಳಿದ ಗಾರ್ಡನ್ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.

ಮುಡಾ ಕಚೇರಿಯನ್ನು ಜನಸ್ನೇಹಿ ಕಚೇರಿಯನ್ನಾಗಿಸುವ ನಿಟ್ಟಿನಲ್ಲಿ ಕೆಲವೊಂದು ಕಠಿಣ ಕ್ರಮ ಅಗತ್ಯವಿದೆ. ಮುಡಾ ಕಡತ ವಿಲೇವಾರಿ ವಿಳಂಬವಾಗುತ್ತಿರುವ ದೂರುಗಳು ಬರುತ್ತಿದ್ದು, ಈ ಬಗ್ಗೆ ಗಮನಹರಿಸಲಾಗುವುದು.  ಕದ್ರಿ ಪಾರ್ಕ್‌ನಲ್ಲಿ ನೀರಿನ ಕೊರತೆ ನೀಗಿಸಲು ಗಂಗಯ್ಯನಪಳ್ಳದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಕಾರಂಜಿಯಲ್ಲೂ ನೀರು ಸಂಗ್ರಹಕ್ಕೆ ಅವಕಾಶವಿದ್ದು, 16ಎಕರೆ ಪಾರ್ಕ್ ಸ್ಥಳವನ್ನು ಸದ್ಬಳಕೆ ಮಾಡಲಾಗುವುದು ಎಂದು ಅವರು ಹೇಳಿದರು.

ನಗರದಲ್ಲಿ  ಕೆಲವೊಂದು ಸರ್ಕಲ್‌ಗಳು ಈಗಾಗಲೇ ಅಭಿವೃದ್ಧಿಯಾಗಿದ್ದು, ನಂದಿಗುಡ್ಡ ಸೇರಿದಂತೆ ಹಲವು ಸರ್ಕಲ್ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಸುರತ್ಕಲ್‌ನಲ್ಲಿ ವೈ-ಫೈ ಸೌಲಭ್ಯಗೊಂದಿಗೆ ವಿದ್ಯಾರ್ಥಿ ಸ್ನೇಹಿ ಬಸ್ ತಂಗುದಾಣ ನಿರ್ಮಾಣ ಮಾಡುವುದಾಗಿ ಅವರು ಹೇಳಿದರು.

ಮುಡಾ ಅಧ್ಯಕ್ಷರಿಗೆ ಮಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ, ಮಂಗಳೂರು ಮಹಾನಗರಪಾಲಿಕೆ ನಾಮನಿರ್ದೇಶಿತ ಸದಸ್ಯ ರಾಧಾಕೃಷ್ಣ, ಮುಡಾ ಅಧಿಕಾರಿಗಳು, ಸಿಬ್ಬಂದಿ ಶುಭ ಹಾರೈಸಿದರು.

Similar News