ಲಾಲು ಪ್ರಸಾದ್ ಯಾದವ್ ಅವರ ಮೂತ್ರಪಿಂಡ ಕಸಿ ಪ್ರಕ್ರಿಯೆ ಯಶಸ್ವಿ

ಆರ್‌ಜೆಡಿ ಮುಖ್ಯಸ್ಥನಿಗೆ ಕಿಡ್ನಿ ದಾನ ಮಾಡಿದ ಪುತ್ರಿ ರೋಹಿಣಿ ಆಚಾರ್ಯ

Update: 2022-12-05 13:01 GMT

ಪಾಟ್ನಾ: ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಯಾದವ್ ಅವರ ಮೂತ್ರಪಿಂಡ ಕಸಿ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ. ಲಾಲೂ ಪುತ್ರಿ ರೋಹಿಣಿ ಆಚಾರ್ಯ ಅವರು ತಮ್ಮ ಕಿಡ್ನಿಯನ್ನು ಲಾಲು ಪ್ರಸಾದ್ ಅವರಿಗೆ ದಾನ ಮಾಡಿದ್ದಾರೆ. ಇದೀಗ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿದೆ.

ತನ್ನ ತಂದೆಯೊಂದಿಗಿನ ಹಳೆಯ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರೋಹಿಣಿ ಆಚಾರ್ಯ ಅವರು, ಹಾರೈಕೆ ಮಾಡುವಂತೆ ತಮ್ಮ ಅನುಯಾಯಿಗಳ ಬಳಿ ಕೇಳಿಕೊಂಡಿದ್ದಾರೆ.

ರಾಜ್ಯಸಭಾ ಸಂಸದರಾಗಿರುವ ಲಾಲು ಯಾದವ್ ಅವರ ಹಿರಿಯ ಪುತ್ರಿ ಡಾ. ಮಿಸಾ ಭಾರತಿ ಅವರು, "ತಂಗಿ ರೋಹಿಣಿಯ ಡೋನರ್ ಆಪರೇಷನ್ ಯಶಸ್ವಿಯಾಗಿ ಮಾಡಲಾಗಿದೆ. ಅವರು ಈಗ ಐಸಿಯುನಲ್ಲಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಈಗ ತಂದೆಯ ಆಪರೇಷನ್ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ. 

ಯಾದವ್ ಅವರ ಪುತ್ರ, ಬಿಹಾರದ   ಉಪಮುಖ್ಯಮಂತ್ರಿ, ತೇಜಸ್ವಿ ಯಾದವ್,  "ಪಾಪಾ ಅವರ ಮೂತ್ರಪಿಂಡ ಕಸಿ ಕಾರ್ಯಾಚರಣೆ ಯಶಸ್ವಿಯಾದ ನಂತರ, ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ ಸ್ಥಳಾಂತರಿಸಲಾಗಿದೆ. ಮೂತ್ರ ಪಿಂಡದ ದಾನಿ ಸಹೋದರಿ ರೋಹಿಣಿ ಆಚಾರ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರು ಇಬ್ಬರೂ ಆರೋಗ್ಯವಾಗಿದ್ದಾರೆ .ನಿಮ್ಮ ಪ್ರಾರ್ಥನೆ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ. 

ಮೇವು ಹಗರಣ ಪ್ರಕರಣಗಳಲ್ಲಿ ಆರೋಪಿಯಾಗಿರುವ ಯಾದವ್ ಅವರು ಆರೋಗ್ಯ ಸಮಸ್ಯೆಗಳಿಂದಾಗಿ ಪ್ರಸ್ತುತ ಜಾಮೀನಿನ ಮೇಲೆ ಹೊರಬಂದಿದ್ದು,  ಈ ವರ್ಷದ ಆರಂಭದಲ್ಲಿ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ. ಅಲ್ಲಿಯೇ ತಮ್ಮ ಮೂತ್ರಪಿಂಡದ ಕಸಿ ಮಾಡಿಸುತ್ತಿದ್ದಾರೆ.

Similar News