ದಲಿತ,ಅಲ್ಪಸಂಖ್ಯಾತ ಮಕ್ಕಳ ಅಕ್ಷರದ ಹಕ್ಕು ಅಪಾಯದಲ್ಲಿ

Update: 2022-12-06 04:09 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಏಕಾಏಕಿ ಸ್ಥಗಿತಗೊಳಿಸಿದೆ. ಇದು ಶತಮಾನಗಳಿಂದ ಅಕ್ಷರ ಲೋಕದಿಂದ ವಂಚಿತರಾದ ಸಮುದಾಯಗಳ ಮಕ್ಕಳನ್ನು ಶಿಕ್ಷಣದಿಂದ ದೂರವಿಟ್ಟು ದಾಸ್ಯಕ್ಕೆ ತಳ್ಳುವ ಮನುವಾದಿ ಹುನ್ನಾರವಲ್ಲದೆ ಬೇರೇನೂ ಅಲ್ಲ. ಜಾತಿ ವ್ಯವಸ್ಥೆಯ ಕ್ರೌರ್ಯ ಮತ್ತು ಕಡು ಬಡತನದಲ್ಲಿ ನರಳುತ್ತಿರುವ ಮಕ್ಕಳಿಗೆ ಈ ವಿದ್ಯಾರ್ಥಿ ವೇತನದಿಂದ ಶಾಲಾ ಸಮವಸ್ತ್ರ ಮತ್ತು ಪಠ್ಯಪುಸ್ತಕ ಮತ್ತಿತರ ಖರ್ಚು ವೆಚ್ಚಗಳಿಗೆ ನೆರವಾಗುತ್ತಿತ್ತು.

ಎಂಟು ಲಕ್ಷ ರೂಪಾಯಿ ಆದಾಯ ಹೊಂದಿರುವ ಮೇಲ್ಜಾತಿಯ ಕುಟುಂಬಗಳಿಗೆ ಮೀಸಲಾತಿ ನೀಡಿರುವ ಮೋದಿ ಸರಕಾರ ಎರಡೂವರೆ ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಸಂಪೂರ್ಣವಾಗಿ ಸ್ಥಗಿತ ಗೊಳಿಸಿರುವುದು ಅನ್ಯಾಯದ ಪರಮಾವಧಿಯಲ್ಲದೆ ಬೇರೇನೂ ಅಲ್ಲ. ದಲಿತ ಮತ್ತು ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳನ್ನು ಶಾಲೆಗಳಿಂದ ಹೊರದಬ್ಬಿ ಸಿರಿವಂತರ ಮನೆಯ ಜೀತದಾಳುಗಳನ್ನಾಗಿ ಮಾಡುವ ದುಷ್ಟ ಮಸಲತ್ತು ಇದರೊಳಗೆ ಅಡಗಿದೆ.

2015ರಿಂದ ಇಲ್ಲಿಯವರೆಗೆ ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನದಿಂದ ಒಟ್ಟು ಎಂಟು ವರ್ಷಗಳಲ್ಲಿ 5.90 ಕೋಟಿ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಇದರಲ್ಲಿ 3.36. ಕೋಟಿ ಮುಸ್ಲಿಮ್ ವಿದ್ಯಾರ್ಥಿ ಗಳು, 53.19 ಲಕ್ಷ ಕ್ರೈಸ್ತ ವಿದ್ಯಾರ್ಥಿಗಳು ಮತ್ತು 45 ಲಕ್ಷ ಸಿಖ್ ವಿದ್ಯಾರ್ಥಿಗಳು ಹಾಗೂ 12 ಲಕ್ಷ ಬೌದ್ಧ ವಿದ್ಯಾರ್ಥಿಗಳು ಸೇರಿದ್ದಾರೆ. ಸಾಮಾನ್ಯವಾಗಿ ಶಾಲಾ ವಿದ್ಯಾರ್ಥಿಗಳಿಗೆ 225 ರೂಪಾಯಿ, ಹಾಸ್ಟೆಲ್‌ನಲ್ಲಿ ಇರುವ ವಿದ್ಯಾರ್ಥಿಗಳಿಗೆ 525 ರೂಪಾಯಿ ಲಭ್ಯವಾಗುತ್ತಿತ್ತು. ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಇದಕ್ಕೆ ಖರ್ಚು ಮಾಡಿದ ಒಟ್ಟು ಮೊತ್ತ 9,057 ಕೋಟಿ ರೂಪಾಯಿ.

ವಾಸ್ತವವಾಗಿ ಈ ವಿದ್ಯಾರ್ಥಿ ವೇತನದ ಒಟ್ಟು ಮೊತ್ತವನ್ನು 75-25 ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಭರಿಸುತ್ತಿದ್ದವು. ಈಗ ಕೇಂದ್ರದ ಮೋದಿ ಸರಕಾರ ರಾಜ್ಯಗಳೊಡನೆ ಸಮಾಲೋಚನೆ ಮಾಡದೆ ಏಕಪಕ್ಷೀಯವಾಗಿ ದಿಢೀರನೆ ಈ ತೀರ್ಮಾನ ಕೈಗೊಂಡಿದ್ದು ರಾಜ್ಯ ಸರಕಾರಗಳು ಅನಿವಾರ್ಯವಾಗಿ ಒಪ್ಪಿಕೊಳ್ಳಲೇ ಬೇಕಾದ ಪರಿಸ್ಥಿತಿ ಉಂಟಾಗಿದೆ. ಇದು ಪರಿಶಿಷ್ಟ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಮಾಡಿರುವ ಘನ ಘೋರ ಅನ್ಯಾಯ ಮಾತ್ರವಲ್ಲ, ರಾಜ್ಯ ಸರಕಾರಗಳನ್ನು ಕಡೆಗಣಿಸಿ ಒಕ್ಕೂಟ ವ್ಯವಸ್ಥೆಯ ಅಡಿಪಾಯಕ್ಕೆ ಕೊಡಲಿ ಪೆಟ್ಟು ನೀಡಿದಂತಾಗಿದೆ.

ಒಂದೆಡೆ ದಲಿತರು ಮತ್ತು ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಂಡು ಅವರನ್ನು ಜೀತಕ್ಕೆ ತಳ್ಳುವುದಲ್ಲದೆ ಇನ್ನೊಂದೆಡೆ ಬಡವರು ಮತ್ತು ಕೆಳ ಮಧ್ಯಮ ವರ್ಗದ ಮಕ್ಕಳು ಓದುವ ಸರಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಿಕ್ಷಣ ಮಾಫಿಯಾವನ್ನು ಪ್ರೋತ್ಸಾಹಿಸುವ ಹುನ್ನಾರ ಇದರಲ್ಲಿ ಅಡಗಿದೆ. ಸರಕಾರದ ಶಾಲೆಗಳಿಗೆ ಮಕ್ಕಳು ಬರುವುದಿಲ್ಲ ಎಂದು ನೆಪ ಮುಂದೆ ಮಾಡಿ ಅವುಗಳನ್ನು ವಿಲೀನಗೊಳಿಸುವ ಹಾಗೂ ಮುಚ್ಚುವ ಕಾರ್ಯ ಸದ್ದಿಲ್ಲದೆ ನಡೆದಿದೆ. ಈಗ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಾಗೂ ಹಿಂದುಳಿದ ಸಮುದಾಯಗಳ ಮಕ್ಕಳ ವಿದ್ಯಾರ್ಥಿ ವೇತನವನ್ನು ನಿಲ್ಲಿಸುವ ಮೂಲಕ ಆ ಮಕ್ಕಳು ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಖರೀದಿಸಲಾಗದೆ ಶಾಲೆಗೆ ಬರದಂತಾಗಿ ಕನಿಷ್ಠ ದಾಖಲಾತಿಯೂ ಆಗುತ್ತಿಲ್ಲ ಎಂದು ನೆಪ ಮುಂದೆ ಮಾಡಿ ಸರಕಾರದ ಶಾಲೆಗಳನ್ನು ಮುಚ್ಚಿ ಅವುಗಳ ಆಸ್ತಿಯನ್ನು ಒಳಗೊಂಡು ಇಡೀ ಶಿಕ್ಷಣ ಕ್ಷೇತ್ರವನ್ನು ಖಾಸಗಿ ಶಿಕ್ಷಣ ಮಾಫಿಯಾದ ಮಡಿಲಿಗೆ ಹಾಕುವುದು ಈ ಮಸಲತ್ತಿನ ಒಳಗುಟ್ಟಾಗಿದೆ.

ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಮತ್ತೆ ಭಾರತದ ಮೇಲೆ ಹೇರಲು ಹೊರಟವರು ತಮಗೆ ದೊರೆತ ರಾಜಕೀಯ ಅಧಿಕಾರವನ್ನು ಉಪಯೋಗಿಸಿ ಕೊಂಡು ಹಂತ ಹಂತವಾಗಿ ತಮ್ಮ ಮನುವಾದಿ ಕಾರ್ಯಸೂಚಿಯನ್ನು ಜಾರಿಗೆ ತರಲು ಹೊರಟಿದ್ದಾರೆ. ಈ ಷಡ್ಯಂತ್ರದ ಭಾಗವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮತ್ತು ಅಲ್ಪಸಂಖ್ಯಾತ ಮಕ್ಕಳ ಹಾಗೂ ಹಿಂದುಳಿದ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ. ಭಾರೀ ಬಂಡವಾಳಗಾರರ ಲಕ್ಷಾಂತರ ಕೋಟಿ ರೂಪಾಯಿ ಬ್ಯಾಂಕ್ ಸಾಲವನ್ನು ಮನ್ನಾ ಮಾಡಲು ಹೊರಟವರಿಗೆ ದಲಿತರ, ಬಡವರ ಮಕ್ಕಳ ವಿದ್ಯಾರ್ಥಿ ವೇತನ ಭಾರವಾಗಿದೆ.

ಪರಿಶಿಷ್ಟ ಜಾತಿ ಮತ್ತು ವರ್ಗದ ಮಕ್ಕಳ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸುವ ತೀರ್ಮಾನವನ್ನು ಸರಕಾರ ತಕ್ಷಣ ವಾಪಸ್ ಪಡೆಯಬೇಕು. ಇದು ಬಡವರ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡುವ ಹುನ್ನಾರ ಎಂದರೆ ಅತಿಶಯೋಕ್ತಿಯಲ್ಲ. ಆಡಳಿತ ಪಕ್ಷದಲ್ಲಿ ಇರುವ ಸದರಿ ಸಮುದಾಯಗಳ ಶಾಸಕರು ಮತ್ತು ಸಂಸದರು ಈ ತೀರ್ಮಾನ ಕೈ ಬಿಡಲು ಒತ್ತಡ ತರಲಿ.

ಇಂಥ ಅನ್ಯಾಯದ ಬಗ್ಗೆ ಜನಸಾಮಾನ್ಯರು ಮಾತನಾಡಬಾರದೆಂದು ಅವರನ್ನು ಕೋಮು ಮತ್ತು ಜಾತಿ ರಾಜಕೀಯದಲ್ಲಿ ಮುಳುಗಿಸಲಾಗಿದೆ. ಭಾವನಾತ್ಮಕ ವಿಷಯಗಳನ್ನು ಕೆರಳಿಸಿ ಅಶಾಂತಿಯ ವಾತಾವರಣವನ್ನು ನಿರ್ಮಿಸಲಾಗುತ್ತಿದೆ.ಇಂಥ ಮಸಲತ್ತುಗಳಿಗೆ ದಮನಿತ ಸಮುದಾಯಗಳು ಬಲಿ ಬೀಳದೆ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಇಳಿಯುವ ಅನಿವಾರ್ಯತೆ ಉಂಟಾಗಿದೆ. ಹಾಗಾಗಿ ಸರಕಾರ ಈ ತೀರ್ಮಾನವನ್ನು ಕೈ ಬಿಡಬೇಕು. ಇದರ ಬಗ್ಗೆ ರಾಜ್ಯ ಸರಕಾರಗಳ ಜೊತೆಗೆ ಸಮಾಲೋಚನೆ ಮಾಡಬೇಕೆಂದು ಎಲ್ಲೆಡೆಯಿಂದ ಹಕ್ಕೊತ್ತಾಯಗಳು ಬರಲಿ.

Similar News