ಅಂಬೇಡ್ಕರ್: ಗೌರವವೂ ರಾಜಕಾರಣವಾಗುವ ಕಾಲದಲ್ಲಿ...

ಇಂದು ಅಂಬೇಡ್ಕರ್ ಮಹಾಪರಿನಿರ್ವಾಣ ದಿನ

Update: 2022-12-06 04:56 GMT

ದಲಿತರನ್ನು ಹೆಸರಿಗಷ್ಟೇ ಒಳಗೊಳ್ಳುವ ರಾಜಕಾರಣದ ವಿನೀತ ಮುಖದ ಹಿಂದೆ, ದಲಿತ ದಾಳವನ್ನು ಬಳಸಿಕೊಳ್ಳುವ ಧೂರ್ತತನವೇ ಇರುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಅತಿ ವಿನಯ, ಅಗಾಧ ಸೌಲಭ್ಯದ ಆಮಿಷ ಎಲ್ಲವನ್ನೂ ಮುಂದಿಟ್ಟುಕೊಂಡು ಬರುವ ಆಕ್ರಮಣಶೀಲತೆ ಎಷ್ಟು ಭಂಡತನದ್ದೂ ಆಗಿರುತ್ತದೆಂದರೆ, ಮುಖವಾಡ ಕಳಚಿಬಿದ್ದರೂ ಏನೂ ಆಗಿಲ್ಲವೆಂಬಂತೆ ಅರಗಿಸಿಕೊಂಡು ಮತ್ತೆ ಎಲ್ಲವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬಲ್ಲದು. ಇತಿಹಾಸದ ಸತ್ಯಗಳನ್ನೆಲ್ಲ ಅದುಮಿಟ್ಟು, ಸುಳ್ಳುಗಳನ್ನು ಅದರ ಮೇಲೆ ಪೇರಿಸುತ್ತ ರಾಜಕಾರಣವನ್ನು ಮಾಡುವುದರ ಹಿಂದಿರುವುದು ಇಂಥ ಭಂಡತನವೇ.

ಅಂಬೇಡ್ಕರರು ಅಸ್ಪೃಶ್ಯತೆ ವಿರುದ್ಧ ಹೋರಾಟ ಆರಂಭಿಸಿ (1924) ನೂರು ವರ್ಷಗಳೇ ಸಮೀಪಿಸುತ್ತಿವೆ. ಅತ್ಯಂತ ನೋವಿನಿಂದಲೇ ಹಿಂದೂ ಧರ್ಮವನ್ನು ತೊರೆದು ಬೌದ್ಧಧರ್ಮಕ್ಕೆ ಸೇರಿದ ಅವರು ತೀರಿಹೋಗಿ (1956) ಆರೂವರೆ ದಶಕಗಳೇ ಕಳೆದಿವೆ. ಆದರೂ, ಅವರನ್ನು ಅದೆಂದೋ ರಾಜಕೀಯಗೊಳಿಸಿರುವ ಈ ದೇಶ ದಮನಿತರನ್ನು ತುಳಿಯುತ್ತ ಮೆರೆಯುವ ಅತ್ಯಂತ ಹೇಸಿಗೆಗೆ ಮಣೆ ಹಾಕಿ ಮೌನವಾಗಿದೆ; ಮತ್ತು ಅದನ್ನೊಂದು ‘ಪರಂಪರೆ’ ಎಂದು ಭಾವಿಸುತ್ತ ಮೈಮರೆತಿದೆ.

ಕೊಂಚ ತಿರುಗಿ ನೋಡಿದರೆ, ನಾಲ್ಕು ವರ್ಷಗಳ ಹಿಂದೆ, 2018ರಲ್ಲಿ ಗುಜರಾತಿನಲ್ಲಿ 21 ವರ್ಷದ ದಲಿತ ಯುವಕನನ್ನು ಕುದುರೆ ಸವಾರಿ ಮಾಡಿದನೆಂಬ ಕಾರಣಕ್ಕೆ ಕ್ಷತ್ರಿಯ ಸಮುದಾಯಕ್ಕೆ ಸೇರಿದ ಜನ ಕೊಂದುಹಾಕಿದರು. ಇದೊಂದು ಉದಾಹರಣೆಯಷ್ಟೆ. ಮೇಲ್ಜಾತಿಯವರ ಅಷ್ಟು ಮಟ್ಟದ ಕ್ರೌರ್ಯಕ್ಕೆ ಈ ದೇಶದ ದಲಿತರ ಎದೆಯೊಳಗೆ ಬೆಂಕಿ ಹೊತ್ತಿ ಉರಿಯುತ್ತಿದ್ದ ಹೊತ್ತಲ್ಲಿ ಪ್ರಧಾನಿ ಹೇಳಿದ್ದೇನು? ನಮ್ಮ ಸರಕಾರವು ಗೌರವಿಸಿದಷ್ಟು ಇನ್ನಾವ ಸರಕಾರವೂ ಅಂಬೇಡ್ಕರರನ್ನು ಗೌರವಿಸಿಲ್ಲ. ಅವರನ್ನು ರಾಜಕೀಯದೊಳಕ್ಕೆ ಎಳೆಯುವುದರ ಬದಲಾಗಿ ನಾವು ಸಾಧ್ಯವಾದಷ್ಟೂ ಅವರು ತೋರಿಸಿದ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದ್ದೇವೆ.

ಇವತ್ತಿನ ಇಡೀ ರಾಜಕಾರಣ ಅಂಬೇಡ್ಕರರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಿದೆ? ಅಂಬೇಡ್ಕರ್ ಹೆಸರಿನ ಮಧ್ಯೆ ಅವರ ತಂದೆ ರಾಮ್ಜಿ ಹೆಸರನ್ನು ಸೇರಿಸಿ ‘ರಾಮ’ಕರಣ ಮಾಡುವುದು, ನಿಧನರಾಗುವ ಹೊತ್ತಿಗೆ ಅಂಬೇಡ್ಕರರು ನೆಲೆಸಿದ್ದ ದಿಲ್ಲಿಯ 26, ಅಲಿಪುರ್ ರಸ್ತೆ ಮನೆಯನ್ನು ಜನ್ಮದಿನದಂದೇ ರಾಷ್ಟ್ರೀಯ ಸ್ಮಾರಕವಾಗಿ ಸಮರ್ಪಿಸುವುದು, ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ ರಾತ್ರಿ ಕಳೆಯುವುದಕ್ಕೆ ಸಂಸದರಿಗೆ ಸೂಚಿಸುವುದು ಇವೆಲ್ಲವೂ ಅಂಬೇಡ್ಕರ್‌ರ ಕುರಿತು ಅಂತಃಕರಣದಿಂದ ಉಕ್ಕಿದ ಪ್ರೇಮವೇನೂ ಅಲ್ಲವೆಂಬುದು ‘ಅವರು ತೋರಿಸಿದ ದಾರಿಯಲ್ಲಿ ನಡೆಯುವ’ವರಿಗೆ ಗೊತ್ತಿರದೇ ಇಲ್ಲದ್ದೇನೂ ಅಲ್ಲ.

ಅಂಬೇಡ್ಕರ್‌ರನ್ನು ರಾಜಕೀಯಗೊಳಿಸುವ ಯತ್ನ ಇಷ್ಟಕ್ಕೇ ನಿಲ್ಲುವುದಿಲ್ಲ. ‘ಅಂಬೇಡ್ಕರ್ ನಿಲುವನ್ನು ಪ್ರತಿನಿಧಿಸುವ ಯತ್ನದಲ್ಲಿರುವ ಕಾಂಗ್ರೆಸಿಗರು ಮತ್ತು ಕಮ್ಯುನಿಸ್ಟರಿಬ್ಬರ ಬಗ್ಗೆಯೂ ಅಂಬೇಡ್ಕರ್ ಜಿಗುಪ್ಸೆಗೊಂಡುಬಿಟ್ಟಿದ್ದರು’ ಎಂದು ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್’ ಬರೆಯುತ್ತದೆ. 

‘ಪ್ರಜಾಪ್ರಭುತ್ವ ಮತ್ತು ಪ್ರಗತಿ ಅಡಕಗೊಂಡಂಥ ಸುಧಾರಣೆ ಕುರಿತ ಅಂಬೇಡ್ಕರ್‌ರ ಇಡೀ ರಾಜಕೀಯ ಪರಿಕಲ್ಪನೆಯನ್ನು ಕಾಂಗ್ರೆಸಿಗರು ಮತ್ತು ಕಮ್ಯುನಿಸ್ಟರು ಒಡಕು, ಅವ್ಯವಸ್ಥೆ ಮತ್ತು ಘರ್ಷಣೆಯ ಉದ್ದೇಶದಲ್ಲಿ ವಿಕಾರಗೊಳಿಸಿಬಿಟ್ಟರು’ ಎಂದು ಟೀಕಿಸುತ್ತದೆ. ‘ಯಾಕೆ ಅಂಬೇಡ್ಕರ್ ಅವರನ್ನು ಯೋಜನಾ ಆಯೋಗದ ಸದಸ್ಯರನ್ನಾಗಿ ಮಾಡಲಿಲ್ಲ? ಅರ್ಥಶಾಸ್ತ್ರದಲ್ಲಿನ ಪರಿಣತಿಯನ್ನು ದೇಶಕ್ಕಾಗಿ ಬಳಸಿಕೊಳ್ಳಲು ಯಾಕೆ ನೆಹರೂ ಮುಂದಾಗಲಿಲ್ಲ?’ ಎಂಬ ಪ್ರಶ್ನೆಯೆತ್ತುತ್ತ, ‘ನೆಹರೂ ಅರ್ಹತೆಗೆ ಬೆಲೆ ಕೊಡಲೇ ಇಲ್ಲ; ಕೇವಲ ಸ್ವಜನಪಕ್ಷಪಾತಿಯಾಗಿದ್ದರು’ ಎನ್ನುತ್ತದೆ. 

ಆದರೆ ಅಂಬೇಡ್ಕರ್‌ರಿಗೆ ಇತಿಹಾಸವು ಅನ್ಯಾಯ ಮಾಡಿರುವಲ್ಲಿ, ಅವರ ಮಾನವೀಯ ಕಳಕಳಿಗೆ ಬೆಲೆ ಕೊಡದಿರುವ ಮತ್ತು ಅದನ್ನು ಅಷ್ಟೇ ನಾಜೂಕಾಗಿ ಅದುಮುವ ಹುನ್ನಾರಗಳು ನಡೆದಲ್ಲಿ ತಾನು ಪ್ರತಿನಿಧಿಸುವ ‘ಪರಂಪರೆ’ಯ ಪಾಲೂ ಇದೆ ಎಂಬುದನ್ನು ಕೇಸರಿ ರಾಜಕಾರಣವು ಉದ್ದೇಶಪೂರ್ವಕವಾಗಿಯೇ ಮರೆಯುತ್ತದೆ. 

ದೇವಸ್ಥಾನ ಪ್ರವೇಶ ಮಸೂದೆ ವಿಚಾರದಲ್ಲಿ ಗಾಂಧೀಜಿಗೆ ಬರೆಯುತ್ತ, ತಪ್ಪಾದ ನಡವಳಿಕೆಗಳನ್ನು ಪಾಲಿಸುತ್ತಿದ್ದಾರೆ ಎಂಬುದಕ್ಕಿಂತ ಹೆಚ್ಚಾಗಿ ಅವು ತೀರಾ ಮೂಲಭೂತವಾದವುಗಳಾಗಿವೆ ಎಂಬ ಕಾರಣಕ್ಕೆ ಹಿಂದೂಗಳು ಮತ್ತು ಹಿಂದೂ ಧರ್ಮದ ವಿಚಾರದಲ್ಲಿ ಜಿಗುಪ್ಸೆಗೊಂಡಿದ್ದೇನೆ ಎಂದು ಅಂಬೇಡ್ಕರ್ ಹೇಳಿದ್ದನ್ನು ಅದು ಎಲ್ಲೂ ಪ್ರಸ್ತಾಪಿಸುವುದಿಲ್ಲ. 

ದಲಿತರನ್ನು ಮತ್ತೆ ಹಿಂದೂ ಧರ್ಮದ ತೆಕ್ಕೆಗೆ ತರುವ ಪ್ರಯತ್ನಗಳು ನಡೆದಾಗ, ಕಹಿ ಸಂಗತಿಯೊಂದನ್ನು ಸಿಹಿಯಾಗಿಸಲಿಕ್ಕಾಗದು. ಯಾವುದರದ್ದೇ ರುಚಿಯನ್ನು ಬದಲಿಸಬಹುದು. ಆದರೆ ವಿಷ ಅಮೃತವಾಗಲಾರದು ಎಂದು ಅಂಬೇಡ್ಕರ್ ಹೇಳಿದ್ದರ ಹಿಂದಿರುವ ಇತಿಹಾಸವನ್ನು ಮರೆತಂತೆ ನಟಿಸುತ್ತದೆ. ‘‘ನಾನು ಹಿಂದೂವಾಗಿ ಹುಟ್ಟಿದೆ. ಅದರ ಮೇಲೆ ನನ್ನ ನಿಯಂತ್ರಣವಿರಲಿಲ್ಲ. ಆದರೆ ನಾನು ಹಿಂದೂವಾಗಿ ಸಾಯಲಾರೆ’’ ಎಂದು 1935ರಲ್ಲಿ ಅಂಬೇಡ್ಕರ್ ಘೋಷಿಸಿದಾಗ ಅವರ ಸಂಕಟಗಳು ಎಂಥವಿದ್ದವು ಎಂಬುದರ ಅರಿವಿದ್ದೂ ಜಾಣಮೌನವನ್ನೇ ಮೆರೆಯುತ್ತದೆ. 

ಮುಂದೆ 1956 ಅಕ್ಟೋಬರ್ 14ರಂದು ನಾಗ್ಪುರದಲ್ಲಿ ಸಾವಿರಾರು ಅನುಯಾಯಿಗಳೊಡನೆ ಅಂಬೇಡ್ಕರ್ ಬೌದ್ಧಧರ್ಮಕ್ಕೆ ಮತಾಂತರಗೊಂಡ ಬಳಿಕ ‘‘ಅಸಮಾನತೆ ಮತ್ತು ದಬ್ಬಾಳಿಕೆಯದ್ದಾಗಿದ್ದ ನನ್ನ ಹಳೆಯ ಧರ್ಮವನ್ನು ತಿರಸ್ಕರಿಸುವುದರೊಂದಿಗೆ ಇಂದು ನಾನು ಮರುಹುಟ್ಟು ಪಡೆದಿದ್ದೇನೆ’’ ಎಂದಿದ್ದನ್ನೂ ಅದು ನೆನಪಿಸಿಕೊಳ್ಳಲು ಬಯಸುವುದಿಲ್ಲ.

ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ದಮನಿತರ ಸಾಮಾಜಿಕ ಸಮಾನತೆಗಾಗಿ ಹೋರಾಡಿ, ಅದು ಆಗದೇ ಉಳಿದಾಗ ಕಡೆಯ ದಾರಿಯೆಂದು ಬೌದ್ಧಧರ್ಮದೆಡೆಗೆ ಹೊರಳಿದ ಅಂಬೇಡ್ಕರ್, ಆಮೇಲೆ ಏಳೇ ವಾರಗಳಲ್ಲಿ ತೀರಿಹೋದರು. ಕಡೆಯ ದಿನಗಳಲ್ಲಿ ಸಂಕಟವನ್ನೇ ತುಂಬಿಕೊಂಡು ಅಂಬೇಡ್ಕರ್ ನಿರ್ಗಮಿಸುವಂತಾದುದು ಈ ಸಮಾಜದ ದುರವಸ್ಥೆಯನ್ನು ಮಾತ್ರವಲ್ಲ, ಆಳದ ಕ್ರೌರ್ಯವನ್ನೇ ಕಾಣಿಸುತ್ತದೆ. 

ಹಲ್ಲೆಯೆಸಗುವ, ಅತ್ಯಾಚಾರಗೈಯುವ, ಕೊಲ್ಲುವ ಅಮಾನವೀಯ ಪೌರುಷವೇ ಧರ್ಮದ ಹೆಸರಿನಲ್ಲಿ ಅಟ್ಟಹಾಸಗೈಯುತ್ತಿರುವಲ್ಲಿ, ಅಂಬೇಡ್ಕರರು ಅಂದು ಕಂಡಿದ್ದ ಕನಸುಗಳು ಇನ್ನೂ ಹೋರಾಟದ ಕಿಡಿ ಹೊತ್ತಿಸುತ್ತಲೇ ಇವೆ. ದುಷ್ಟ ರಾಜಕಾರಣವು ಒಂದು ದಿನ ಅಂಗಾತ ಬೀಳಲೇಬೇಕು ಎಂಬ ನಿರೀಕ್ಷೆ ಮಿಂಚುವುದು ಅಲ್ಲೇ.

ಆದರೆ, ವಾಸ್ತವವು ತೀರಾ ಅಷ್ಟು ಸರಳವಾಗಿಲ್ಲ ಎಂಬುದು ಅಷ್ಟೇ ದುಗುಡ ಮೂಡಿಸುವ ಸಂಗತಿ. ಈಚಿನ ಕೆಲ ವರ್ಷಗಳ ರಾಜಕಾರಣವನ್ನು, ಅಲ್ಲಿ ‘ದಲಿತ’ ಎಂಬ ಪದ ರಾಜಕಾರಣದ ದಾಳವಾಗುತ್ತಿರುವುದನ್ನು ನೋಡಿದರೆ ಆ ದುಗುಡದ ಸುಳಿವುಗಳು ಕಾಣಿಸುತ್ತವೆ. ಮೇಲ್ಜಾತಿ ಬಲದ ಮೇಲೆಯೇ ಹೆಚ್ಚು ವಾಲಿರುವ ಬಿಜೆಪಿ, ದಲಿತರು ಮತ್ತು ಹಿಂದುಳಿದವರನ್ನು ಓಲೈಸುವ ತಂತ್ರಗಾರಿಕೆಯಲ್ಲೂ ಹಿಂದಿಲ್ಲ ಮತ್ತು ಮೇಲ್ಜಾತಿಯವರ ಮತಕ್ಕಿಂತ ಹೆಚ್ಚಿನ ಬೆಂಬಲವನ್ನು ಕೆಳವರ್ಗದವರಿಂದ ಪಡೆಯುತ್ತಲೇ ಬಂದಿರುವುದೂ ನಿಜ. ಆದರೆ ಅಧಿಕಾರದ ಪ್ರಶ್ನೆ ಬಂದಾಗ ಅದು ಕೆಳವರ್ಗದವರನ್ನು ಅದೆಷ್ಟು ಗಮನಿಸಿದೆ ಎಂಬುದನ್ನು ನೋಡಿದರೆ ಕಾಣುವ ಆಳವೇ ಬೇರೆ.

ಇತ್ತೀಚಿನ ವರ್ಷಗಳಲ್ಲಿ ಅದು ಭಾರೀ ಪ್ರಮಾಣದಲ್ಲಿ ಕೆಳವರ್ಗದವರ ಮತಗಳನ್ನು ಸೆಳೆದಿದೆ. ಒಂದು ಸಮೀಕ್ಷೆಯಂತೆ 2014ರ ಚುನಾವಣೆಯಿಂದಲೇ ಈ ಬದಲಾವಣೆ ಶುರುವಾಗಿದೆ. ಮೇಲ್ಜಾತಿಯ ಹೆಚ್ಚು ಕಡಿಮೆ ಅರ್ಧಕ್ಕರ್ಧದಷ್ಟು ವೋಟುಗಳು 2014ರ ಚುನಾವಣೆಯಲ್ಲಿ ಬಿಜೆಪಿ ಪಾಲಾಗಿವೆ. ಇದೇ ವೇಳೆ, ಬಿಜೆಪಿ ಗಳಿಸಿದ ದಲಿತರು (ಎಸ್‌ಸಿ), ಆದಿವಾಸಿಗಳು (ಎಸ್‌ಟಿ) ಮತ್ತು ಹಿಂದುಳಿದವರ (ಒಬಿಸಿ) ಮತಗಳ ಸಂಖ್ಯೆಯಲ್ಲೂ ಭಾರೀ ಏರಿಕೆಯಾಗಿದೆ. ಇದೇ ವೇಳೆ, ಕಾಂಗ್ರೆಸ್ ಪಡೆಯುವ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದವರ ಮತಗಳ ಪ್ರಮಾಣ ಕುಸಿಯುತ್ತಿದೆ.

ದಲಿತರಾದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ತಂದ ಬಿಜೆಪಿಯು, ಅಂತರಾಳದಲ್ಲಿ ದಲಿತರಿಗೆ ಏನು ಮಾಡಿದೆ ಎಂದು ಕೇಳಿಕೊಂಡರೆ, ಒಳಗಿನಿಂದಲೇ ಬಿಜೆಪಿ ಬದಲಾಗಿದೆಯೇ ಎಂದು ನೋಡಿದರೆ ಇಲ್ಲ. 

ಪಕ್ಷದ ನಾಯಕತ್ವ ಪ್ರಮುಖವಾಗಿ ಮೇಲ್ಜಾತಿಯವರ ಕೈಯಲ್ಲೇ ಇರುವುದನ್ನು ಅದು ನಿರಂತರವಾಗಿ ಕಾಯ್ದುಕೊಂಡು ಬಂದಿದೆ. ಹತ್ತರಲ್ಲಿ ನಾಲ್ವರು ಬಿಜೆಪಿ ಸಂಸದರು ಮೇಲ್ಜಾತಿಗೆ ಸೇರಿದವರಾಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿನ ಜಾತಿ ಆಧಾರಿತ ಸಂಯೋಜನೆಯನ್ನು ಗಮನಿಸಿದರೂ ಸಿಗುವುದು ಇಂಥದೇ ಚಿತ್ರ.

ದಲಿತರನ್ನು ಹೆಸರಿಗಷ್ಟೇ ಒಳಗೊಳ್ಳುವ ರಾಜಕಾರಣದ ವಿನೀತ ಮುಖದ ಹಿಂದೆ, ದಲಿತ ದಾಳವನ್ನು ಬಳಸಿಕೊಳ್ಳುವ ಧೂರ್ತತನವೇ ಇರುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಅತಿ ವಿನಯ, ಅಗಾಧ ಸೌಲಭ್ಯದ ಆಮಿಷ ಎಲ್ಲವನ್ನೂ ಮುಂದಿಟ್ಟುಕೊಂಡು ಬರುವ ಆಕ್ರಮಣಶೀಲತೆ ಎಷ್ಟು ಭಂಡತನದ್ದೂ ಆಗಿರುತ್ತದೆಂದರೆ, ಮುಖವಾಡ ಕಳಚಿಬಿದ್ದರೂ ಏನೂ ಆಗಿಲ್ಲವೆಂಬಂತೆ ಅರಗಿಸಿಕೊಂಡು ಮತ್ತೆ ಎಲ್ಲವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬಲ್ಲದು. ಇತಿಹಾಸದ ಸತ್ಯಗಳನ್ನೆಲ್ಲ ಅದುಮಿಟ್ಟು, ಸುಳ್ಳುಗಳನ್ನು ಅದರ ಮೇಲೆ ಪೇರಿಸುತ್ತ ರಾಜಕಾರಣವನ್ನು ಮಾಡುವುದರ ಹಿಂದಿರುವುದು ಇಂಥ ಭಂಡತನವೇ.

ಇಂಥ ರಾಜಕಾರಣವು ದಲಿತರನ್ನು ಹಾಡಿ ಹೊಗಳುತ್ತ, ಅವರ ಬಗ್ಗೆ ಇನ್ನಿಲ್ಲದಂಥ ಕಾಳಜಿ ತೋರಿಸುತ್ತಲೇ, ಅವರ ಆಹಾರವನ್ನು ಕಸಿಯುವ ಕೆಲಸವನ್ನೂ ಮಾಡುತ್ತದೆ. ಅವರ ಮನೆಯ ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾದರೆ ಏನೂ ಗೊತ್ತಿಲ್ಲದಂತೆ ಉಳಿದುಬಿಡುತ್ತದೆ. 

ಅವರ ಮನೆಯ ನಿರುದ್ಯೋಗಿ ಹುಡುಗರನ್ನು ಬೇರೆಯವರ ಮೇಲೆ ಕತ್ತಿ ಮಸೆಯುವ ಕೆಲಸಕ್ಕೆ ಹಚ್ಚಿ ಹಾಯಾಗಿರುತ್ತದೆ. ಇಷ್ಟೆಲ್ಲದರ ನಂತರವೂ ಅದು ಒಂದು ಭ್ರಾಮಕ ಪ್ರಭಾವಳಿಯೊಂದಿಗೆ ಆಕರ್ಷಿಸುತ್ತಲೇ ಇರುತ್ತದೆ. ಸತ್ಯವನ್ನು ಪೂರ್ತಿಯಾಗಿ ಮರೆಮಾಚಬಲ್ಲ ಈ ಆಕರ್ಷಣೆ ಎಷ್ಟು ಅಪಾಯಕಾರಿಯಾದದ್ದು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಜಗತ್ತಿನ ಅತಿ ಎತ್ತರದ ಪ್ರತಿಮೆ ನಿಲ್ಲಿಸಿ, ಹೊಸದೇ ಬಗೆಯಲ್ಲಿ ಮಾರುಕಟ್ಟೆಯನ್ನು ಆಕರ್ಷಿಸುವ ಭ್ರಮೆಯನ್ನು ಸೃಷ್ಟಿಸಲಾಗಿರುವ ಈ ದೇಶದಲ್ಲಿ ಪ್ರತಿಮೆಗೆ ಸಂಬಂಧಿಸಿಯೇ ಏನೇನಾಯಿತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅಂಬೇಡ್ಕರ್ ಹೆಸರಿನ ಮಧ್ಯೆ ‘ರಾಮ್ಜಿ’ ಎಂದು ಸೇರಿಸಲು ಆದಿತ್ಯನಾಥ್ ಸರಕಾರ ಆದೇಶ ನೀಡಿದ ಬೆನ್ನಲ್ಲೇ ಅಲಹಾಬಾದಿನಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ನಡೆಯಿತು. ತ್ರಿವೇಣಿಪುರಂನಲ್ಲಿನ ಅಂಬೇಡ್ಕರ್ ಉದ್ಯಾನದಲ್ಲಿದ್ದ ಪ್ರತಿಮೆಯನ್ನು ದ್ವಂಸಗೊಳಿಸಲಾಯಿತು. ಒಂದೇ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಅಂಥ ಮೂರನೇ ಪ್ರಕರಣ ಅದಾಗಿತ್ತು.

ತ್ರಿಪುರಾದಲ್ಲಿ ಎಡರಂಗ ಸರಕಾರವನ್ನು ಸೋಲಿಸಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಲಾಯಿತು. ಇಂಥದೊಂದು ತಲೆತಗ್ಗಿಸುವ ಘಟನೆ ನಡೆಯುತ್ತಿದ್ದಂತೆಯೇ ವಿಕೃತ ಸುಖಿಗಳಿಗೆ ಅದೆಂಥದೋ ಹುಕಿ ಬಂದಂತಿತ್ತು. ಲೆನಿನ್ ಪ್ರತಿಮೆ ಧ್ವಂಸದ ಬಳಿಕ ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆ ವಿರೂಪ ಪ್ರಕರಣ ನಡೆಯಿತು. ನಡುವೆಯೇ ಉತ್ತರ ಪ್ರದೇಶದಲ್ಲಿ ಒಂದರ ಬೆನ್ನಿಗೊಂದರಂತೆ ಅಂಬೇಡ್ಕರ್ ಪ್ರತಿಮೆ ಧ್ವಂಸ ಪ್ರಕರಣಗಳಾದವು.

ವಿರೂಪಗೊಳಿಸುವಿಕೆ ಎಂಬುದು ಒಂದು ವಿಕೃತಿ. ಇದು ಅಸ್ವಸ್ಥ ಮನಃಸ್ಥಿತಿಯ ಕೆಲಸ. ಸಮಾಜದ ನೆಮ್ಮದಿಯನ್ನು ಭಂಗಗೊಳಿಸುವ ಮೂಲಕ ವಿಲಕ್ಷಣ ಸಂಭ್ರಮವನ್ನು ಕಾಣುವ ಈ ಬಗೆ ಶತಮಾನಗಳಿಂದಲೂ ನಡೆದುಬಂದದ್ದೇ ಆಗಿದೆ. ಅಸಹಿಷ್ಣತೆಯನ್ನು ವ್ಯಕ್ತಗೊಳಿಸುವ ಅತ್ಯಂತ ಕೀಳು ಸ್ವರೂಪದ ಭಾಗವಾಗಿ ಪ್ರತಿಮೆ ವಿರೂಪದಂಥ ಕೃತ್ಯಗಳು ನಡೆಯುತ್ತವೆ. 

ಪ್ರಾಸಂಗಿಕವಾಗಿ ಹೇಳಬೇಕೆಂದರೆ, ಈಜಿಪ್ಟಿನ ಪ್ರತಿಮೆಗಳಲ್ಲಿ ಕಾಣುವ ಮೂಗಿಲ್ಲದ ವಿರೂಪಕ್ಕೆ ಕಾರಣ, ಪ್ರಾಚೀನ ಈಜಿಪ್ಟ್‌ನದ್ದು ಆಫ್ರಿಕನ್ ಸಂಸ್ಕೃತಿಯಾಗಿತ್ತೆಂಬ ಸತ್ಯವನ್ನು ಮರೆಮಾಚುವುದೇ ಆಗಿದೆ ಎನ್ನುತ್ತಾರೆ ವಿದ್ವಾಂಸರು. ಈಜಿಪ್ಟಿನ ಎಲ್ಲ ಪ್ರಸಿದ್ಧ ಸ್ಮಾರಕಗಳ ಮುಖ ಚಹರೆಯಲ್ಲಿ ಅವುಗಳ ಆಫ್ರಿಕನ್ ಮೂಲವೇ ಕಾಣಿಸುತ್ತಿದ್ದುದನ್ನು ಪ್ರಾಕ್ತನಶಾಸ್ತ್ರಜ್ಞರು ಗುರುತಿಸುತ್ತಾರೆ.

ನಮ್ಮ ಸಂದರ್ಭಕ್ಕೆ ಸಂಬಂಧಿಸಿದಂತೆ, ಇಂಥ ವಿಕೃತಿಗಳು ಈ ಸಮಾಜವನ್ನು ನೋಯಿಸುತ್ತಲೇ ಇರುವ ಕೆಲವು ಆರದ ಗಾಯಗಳ ಮೇಲೆ ಮತ್ತೆ ಉಪ್ಪುಚೆಲ್ಲುತ್ತ ತಮಾಷೆ ನೋಡುವ ರೀತಿಯವಾಗಿವೆ. ಒಂದೆಡೆಯಿಂದ ಇವು ವೈಚಾರಿಕತೆಯ ಮೇಲಿನ ದಾಳಿ ಎಂದು ಕಂಡರೂ, ತೀರಾ ಆಳದಲ್ಲಿ ಈ ನೆಲದ ಅಬಲ ವರ್ಗವನ್ನು ಕೆಣಕುವ ಕುಟಿಲಗಳೇ ಆಗಿವೆ. ಒಂದು ಸ್ಫೂರ್ತಿಯನ್ನೇ ಕೆಡವಿಹಾಕಿಬಿಡುತ್ತೇನೆಂಬಂತೆ ಹೊರಡುವ ಇಂಥ ಹುಂಬತನ ತನ್ನಷ್ಟಕ್ಕೆ ತಾನು ಹೇಡಿಯೂ ಆಗಿರುವುದನ್ನು, ನೋವುಣ್ಣುತ್ತಿರುವ ಈ ಸಮಾಜದ ಭಾಗ ಅತ್ಯಂತ ಸಂಯಮದಿಂದ ಗಮನಿಸಬೇಕು. 

ಸ್ಫೂರ್ತಿಯನ್ನು ಒಳಗಿನಿಂದಲೇ ಪ್ರತಿಮೆಯಾಗಿಸುವುದು ಆಗ ಸಾಧ್ಯ ಮತ್ತು ಅದು ಇಂಥ ಹತಾಶ ಆಕ್ರಮಣಗಳ ವಿರುದ್ಧದ ಸಾತ್ವಿಕ ಪ್ರತಿಕ್ರಮ. ಗೌರವವೂ ರಾಜಕಾರಣವಾಗಿಬಿಡುವ ಈ ದಿನಮಾನದಲ್ಲಿ ಅಂಬೇಡ್ಕರ್ ಎಂಬ ಚೇತನ ನಮ್ಮ ಆಂತರ್ಯದೊಳಗೆ ಇಂಥ ಬಗೆಯಿಂದ ಮಾತ್ರ ನಿಕ್ಕಿಯಾಗಲು ಸಾಧ್ಯ.

Similar News