ಉದ್ಯೋಗಿಗಳನ್ನು ವಜಾಗೊಳಿದ ಟ್ವಿಟರ್ ವಿರುದ್ಧ ಮತ್ತೊಂದು ಕಾನೂನು ಸಮರ

Update: 2022-12-06 12:04 GMT

ಕ್ಯಾಲಿಫೋರ್ನಿಯಾ: ತನ್ನ ಉದ್ಯೋಗಿಗಳನ್ನು ಸಾಮೂಹಿಕ ವಜಾಗೊಳಿಸಿರುವ ಎಲಾನ್ ಮಸ್ಕ್ (Elon Musk) ನೇತೃತ್ವದ ಟ್ವಿಟರ್ ಇಂಕ್(Twitter Inc) ವಿರುದ್ಧ ಮತ್ತೊಂದು ಕಾನೂನು ಸಮರ ಶುರುವಾಗಿದೆ. ಕಾರ್ಮಿಕ ರಕ್ಷಣಾ ಕಾಯ್ದೆಯಡಿ ವಜಾಗೊಳಿಸಲಾಗಿದ್ದ ನೌಕರರಿಗೆ ಹೋಲಿಸಿದರೆ ತಮಗೆ ನೀಡಲಾಗಿರುವ ಪರಿಹಾರ ಧನ ಕಡಿಮೆಯಿದೆ ಎಂದು ಸಾಮೂಹಿಕವಾಗಿ ವಜಾಕ್ಕೊಳಪಟ್ಟಿರುವ ನೌಕರರು ದೂರಿದ್ದಾರೆ.

ನವೆಂಬರ್ ನಲ್ಲಿ ವಜಾಗೊಳಿಸಲಾಗಿದ್ದ ನೂರಾರು ನೌಕರರಿಗೆ ಸಾಕಷ್ಟು ಕಾಲಾವಕಾಶ ನೀಡದೆ ಅವರನ್ನು ಕೆಲಸದಿಂದ ಹೊರಹಾಕಲಾಗಿದೆ ಎಂದು ಹೊಸ ದೂರಿನಲ್ಲಿ ಆರೋಪಿಸಲಾಗಿದೆ.

ಟ್ವಿಟರ್ ಇಂಕ್ ಅನ್ನು ಎಲಾನ್ ಮಸ್ಕ್ ಖರೀದಿಸುವ ಮುನ್ನ ಕಂಪನಿಯು ನೀಡಿದ್ದ ವಾಗ್ದಾನದಂತೆ ತಮಗೆ ಸಾಕಷ್ಟು ಪರಿಹಾರ ಧನ ನೀಡಲಾಗಿಲ್ಲ ಎಂದು ಆರೋಪಿಸಿರುವ ನೌಕರರ ಪರ ಲಾಸ್ ಏಂಜಲೀಸ್ ಮೂಲದ ವಕೀಲರೊಬ್ಬರು ಮಧ್ಯಸ್ಥಿಕೆದಾರರಾಗಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ವಜಾ‍‍ಕ್ಕೊಳಗಾಗಿರುವ ನೌಕರರು ಹಾಗೂ ಗುತ್ತಿಗೆದಾರರ ಪರ ಅರ್ಜಿ ಸಲ್ಲಿಸಿರುವ ಲೀಸಾ ಬ್ಲೂಮ್ ಎಂಬ ವಕೀಲೆ, ಇಂತಹ ನೂರಾರು ನೌಕರರ ದೂರನ್ನು ನ್ಯಾಯಾಲಯದ ಮುಂದೆ ತರಲು ತಾನು ಸಿದ್ಧ ಎಂದು ಹೇಳಿದ್ದಾರೆ. ಸಾರ್ವಜನಿಕವಾಗಿ ನಡೆಯುವ ಕಾನೂನು ಹೋರಾಟಗಳಿಗೆ ಹೋಲಿಸಿದರೆ ಮಧ್ಯಸ್ಥಿಕೆಯು ಮುಚ್ಚಿದ ಬಾಗಿಲುಗಳ ನಡುವೆ ನಡೆಯುವ ಕಾನೂನು ಪ್ರಕ್ರಿಯೆಯಾಗಿದೆ.

ಕಂಪನಿಯ ವಿರುದ್ಧ ರಾಷ್ಟ್ರೀಯ ಕಾರ್ಮಿಕ ಸಂಬಂಧಗಳ ಮಂಡಳಿ ಎದುರು ಮತ್ತೆರಡು ದೂರು ದಾಖಲಾಗಿದೆ. ಮೊದಲನೆ ದೂರಿನಲ್ಲಿ, ತನ್ನ ಸಹೋದ್ಯೋಗಿಗಳನ್ನು ಮುಷ್ಕರದಲ್ಲಿ ತೊಡಗಿಸುವ ಅಸಹಜ ಕ್ರಿಯೆಯಲ್ಲಿ ಪಾಲ್ಗೊಂಡಿದ್ದನೆಂದು ನೌಕರನೊಬ್ಬನನ್ನು ವಜಾಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಮತ್ತೊಂದು ದೂರಿನಲ್ಲಿ ತಾನು ಕಾನೂನು ಸಮರದಲ್ಲಿ ಭಾಗಿಯಾಗಿದ್ದರಿಂದ ಮತ್ತು ಮರಳಿ ಕಚೇರಿಯಲ್ಲಿ ಕೆಲಸ ಮಾಡುವ ನೀತಿಯ ವಿರುದ್ಧ ಪ್ರತಿಭಟಿಸುವಂತೆ ತನ್ನ ಸಹೋದ್ಯೋಗಿಗಳಿಗೆ ಸಲಹೆ ನೀಡಿದ್ದರಿಂದ ತನ್ನನ್ನು ವಜಾಗೊಳಿಸಲಾಗಿದೆ ಎಂದು ಮತ್ತೊಬ್ಬ ನೌಕರ ಆರೋಪಿಸಿದ್ದಾನೆ.

ಈ ಕುರಿತು ಕೂಡಲೇ ಪ್ರತಿಕ್ರಿಯಿಸಲು ಟ್ವಿಟರ್ ನಿರಾಕರಿಸಿದೆ ಎಂದು business-standard.com ವರದಿ ಮಾಡಿದೆ.

Similar News