ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ

Update: 2022-12-06 14:05 GMT

ಕೋಟ: ಯುವ ಜನರಲ್ಲಿ ಸಾಹಿತ್ಯದ ಆಸಕ್ತಿ ಕಡಿಮೆಯಾಗುತ್ತಿದೆ. ಪುಸ್ತಕ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಸೃಜನಶೀಲತೆ ಬೆಳೆಸಿಕೊಳ್ಳಬೇಕಾದರೆ ಯುವಕರು ಹೆಚ್ಚು ಓದುವ, ಬರೆಯುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳ ಬೇಕು ಎಂದು ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷೆ, ಪೆರ್ವಾಜೆ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಅವನಿ ಉಪಾಧ್ಯ ಅಭಿಪ್ರಾಯ ಪಟ್ಟಿದ್ದಾರೆ.

ಡಾ.ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಸಾಲಿಗ್ರಾಮ, ಕೋಟ ವಿದ್ಯಾಸಂಸ್ಥೆ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ, ಕ.ಸಾ.ಪ. ಉಡುಪಿ ಜಿಲ್ಲಾ ಘಟಕ ಸಹಕಾರದಲ್ಲಿ ಡಿ.6ರಂದು ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆ ಸ್ವರ್ಣಭವನದಲ್ಲಿ ಜರಗಿದ ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ವಿದ್ಯಾರ್ಥಿಗಳು ಅಂಕಗಳಿಸುವುದೇ ದೊಡ್ಡ ಸಾಧನೆ ಎಂದು ತಿಳಿಯಬಾರದು, ಜೀವನದಲ್ಲಿ ಇತರ ಚಟುವಟಿಕೆ ಕೂಡ ಅಷ್ಟೇ ಮುಖ್ಯ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂದೀಪನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಪ್ರಮಥ್ ಮಾತನಾಡಿ, ಮೊಬೈಲ್ ಜಗತ್ತಿನಲ್ಲಿ ಕಳೆದು ಹೋಗುತ್ತಿರುವ ಯುವಜನಾಂಗವನ್ನು  ಹೊಸ ಲೋಕಕ್ಕೆ ತರಲು ಸಾಹಿತ್ಯ ಪೂರಕವಾದದ್ದು. ಹಿರಿಯರು ತಮ್ಮ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಹೆಚ್ಚಿಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು ಎಂದರು.

ಮಕ್ಕಳ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಡಾ.ನೀ.ವಿಜಯ ಬಲ್ಲಾಳ್ ಶುಭ ಹಾರೈಸಿದರು. ಕೋಟ ವಿದ್ಯಾಸಂಘದ ಖಜಾಂಚಿ ವೆಲೇರಿಯನ್ ಮೆನೆಜಸ್, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ವಿವೇಕ ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಗದೀಶ್ ಹೊಳ್ಳ, ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಭಾಸ್ಕರ್ ಆಚಾರ್ಯ, ಕಾರ್ಯಕ್ರಮದ ಸಂಘಟಕರಾದ ಮಕ್ಕಳ ಸಾಹಿತ್ಯ ವೇದಿಕೆಯ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಉಪಸ್ಥಿತರಿದ್ದರು.

ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸ್ವಾಗತಿಸಿ, ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿ, ಮನೋಹರ್ ಭಟ್ ವಂದಿಸಿದರು. ವಿದ್ಯಾರ್ಥಿಗಳಿಂದ  ಕವಿಗೋಷ್ಠಿ, ಗಾಯನ ಗೋಷ್ಠಿ, ಕಥಾಗೋಷ್ಠಿ ನೆರವೇರಿತು.

Similar News