ಕಣ್ಣೂರು: ಮರಳು ಅಕ್ರಮ ಸಾಗಾಟ ಆರೋಪ; ಚಾಲಕ ಸೆರೆ

Update: 2022-12-06 15:43 GMT

ಮಂಗಳೂರು, ಡಿ.6: ಮರಳನ್ನು ಅಕ್ರಮವಾಗಿ ಟಿಪ್ಪರ್ ಲಾರಿಗೆ ತುಂಬಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಕಂಕನಾಡಿ ನಗರ ಠಾಣೆಯ ಪೊಲೀಸರು ಮಂಗಳವಾರ ದಾಳಿ ನಡೆಸಿ ಜೆಸಿಬಿ ಯಂತ್ರ ಮತ್ತು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದು ಆರೋಪಿ ಲಾರಿ ಚಾಲಕನನ್ನು ಬಂಧಿಸಿದ ಘಟನೆ ಮಂಗಳವಾರ ವರದಿಯಾಗಿದೆ.

ಮಂಗಳವಾರ ಬೆಳಗ್ಗೆ ಸುಮಾರು 6ಕ್ಕೆ ಠಾಣಾ ನಿರೀಕ್ಷಕ ಎಚ್.ಎಸ್.ಭಜಂತ್ರಿ ತನ್ನ ಸಿಬ್ಬಂದಿಯ ಜೊತೆ ಗಸ್ತಿನಲ್ಲಿದ್ದಾಗ ಲಭಿಸಿದ ಖಚಿತ ಮಾಹಿತಿಯಂತೆ ಕಣ್ಣೂರು ನೇತ್ರಾವತಿ ನದಿ ತೀರದ ಮರಳಿನ ಧಕ್ಕೆಯಲ್ಲಿ ಮರಳನ್ನು ಅಕ್ರಮವಾಗಿ ಟಿಪ್ಪರ್‌ಗೆ ಲೋಡ್ ಮಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಜೆಸಿಬಿ ಚಾಲಕ ಪರಾರಿಯಾಗಿದ್ದಾನೆ ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಲಾರಿ ಚಾಲಕ ಬಾಗಲಕೋಟೆಯ ಸುಭಾಸ್ ಕೆಲೂರನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಟಿಪ್ಪರ್ ಮತ್ತು ಜೆಸಿಬಿ ಮಾಲಕ ಮುಹಮ್ಮದ್ ಅಯೂಬ್‌ನ ಸೂಚನೆಯಂತೆ ಮರಳು ಲೋಡ್ ಮಾಡುತ್ತಿರುವುದು ಗೊತ್ತಾಗಿದೆ. 10 ಲ.ರೂ. ಅಂದಾಜು ಮೌಲ್ಯದ ಟಿಪ್ಪರ್ ಲಾರಿ, 6000 ರೂ. ಅಂದಾಜು ಮೌಲ್ಯದ ಮರಳು ಮತ್ತು 25 ಲ.ರೂ. ಅಂದಾಜು ಮೌಲ್ಯದ ಜೆಸಿಬಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Similar News