ಭ್ರೂಣ ನ್ಯೂನತೆಗಳ ಪ್ರಕರಣಗಳಲ್ಲಿ ತಾಯಿಯ ಆಯ್ಕೆ ಅಂತಿಮ: ದಿಲ್ಲಿ ಹೈಕೋರ್ಟ್

Update: 2022-12-06 16:06 GMT

ಹೊಸದಿಲ್ಲಿ,ಡಿ.6: ಭ್ರೂಣ ನ್ಯೂನತೆಗಳನ್ನು ಒಳಗೊಂಡ ಗರ್ಭಾವಸ್ಥೆಯ ಪ್ರಕರಣಗಳಲ್ಲಿ ತಾಯಿಯ ಆಯ್ಕೆಯು ಅಂತಿಮವಾಗಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯ(Delhi High Court)ವು ಮಂಗಳವಾರ ಎತ್ತಿ ಹಿಡಿದಿದೆ.

ತನ್ನ 33 ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸಲು 26ರ ಹರೆಯದ ವಿವಾಹಿತ ಮಹಿಳೆಗೆ ಅನುಮತಿ ನೀಡಿದ ನ್ಯಾ. ಪ್ರತಿಭಾ ಎಂ.ಸಿಂಗ್ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ತನ್ನ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣವು ಮಿದುಳಿಗೆ ಸಂಬಂಧಿಸಿದ ಕೆಲವು ನ್ಯೂನತೆಗಳಿಂದ ಬಳಲುತ್ತಿದೆ ಎನ್ನುವುದು ಗೊತ್ತಾದಾಗ ಗರ್ಭಪಾತ ಮಾಡಿಸಲು ಮಹಿಳೆ ದಿಲ್ಲಿಯ ಲೋಕನಾಯಕ ಜಯಪ್ರಕಾಶ ನಾರಾಯಣ (ಎಲ್ಎನ್ಜೆಪಿಎನ್) ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ಆದರೆ ಗರ್ಭವು ಮುಂದುವರಿದ ಹಂತದಲ್ಲಿದೆ ಎನ್ನುವುದನ್ನು ಉಲ್ಲೇಖಿಸಿ ಆಸ್ಪತ್ರೆಯು ಗರ್ಭಪಾತ ಮಾಡಲು ನಿರಾಕರಿಸಿತ್ತು. ಬಳಿಕ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು.

ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ ಗರ್ಭಾವಸ್ಥೆಯ 20 ವಾರಗಳವರೆಗೆ ಗರ್ಭಪಾತಕ್ಕೆ ಅನುಮತಿಯಿದೆ. ಆದರೆ ಕಳೆದ ಸೆಪ್ಟಂಬರ್ ನಲ್ಲಿ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಅದನ್ನು 24 ವಾರಗಳಿಗೆ ವಿಸ್ತರಿಸಿದೆ.

ಗರ್ಭಪಾತ ಹಕ್ಕುಗಳು ವಿಶ್ವಾದ್ಯಂತ ಚರ್ಚೆಯ ವಿಷಯವಾಗಿದೆ ಎಂದು ಮಂಗಳವಾರ ಹೇಳಿದ ನ್ಯಾ.ಸಿಂಗ್(Mr. Singh), ಭಾರತವು ತನ್ನ ಕಾನೂನಿನಲ್ಲಿ ಮಹಿಳೆಯ ಆಯ್ಕೆಯನ್ನು ಮಾನ್ಯ ಮಾಡುವ ದೇಶಗಳಲ್ಲೊಂದಾಗಿದೆ ಮತ್ತು ಇತ್ತೀಚಿಗೆ ವಿವಿಧ ಸಂದರ್ಭಗಳಡಿ ಮುಂದುವರಿದ ಹಂತದಲ್ಲಿರುವ ಗರ್ಭವನ್ನು ಅಂತ್ಯಗೊಳಿಸಲು ಅನುಮತಿಸುವ ತಿದ್ದುಪಡಿಗಳೊಂದಿಗೆ ಈ ಹಕ್ಕನ್ನು ಸಹ ವಿಸ್ತರಿಸಿದೆ ಎಂದರು.

ಗರ್ಭದಲ್ಲಿರುವ ಮಗುವಿನ ನ್ಯೂನತೆಗಳನ್ನು ಗುರುತಿಸುವ ಆಧುನಿಕ ತಂತ್ರಜ್ಞಾನದೊಂದಿಗೆ ಗರ್ಭಪಾತದ ಸುತ್ತಲಿನ ಸಮಸ್ಯೆಗಳು ಹೆಚ್ಚೆಚ್ಚು ಸಂಕೀರ್ಣಗೊಳ್ಳುವುದು ವಿದಿತವಾಗಿದೆ ಎಂದು ಹೇಳಿದ ಅವರು,ಭ್ರೂಣವು ನ್ಯೂನತೆಗಳನ್ನು ಹೊಂದಿರುವ ಇಂತಹ ಪ್ರಕರಣಗಳಲ್ಲಿ ಗರ್ಭಪಾತದ ನಿರ್ಧಾರವನ್ನು ತೆಗೆದುಕೊಳ್ಳುವಾಗ ಮಹಿಳೆಯರು ತೀವ್ರ ಸಂದಿಗ್ಧತೆಗೆ ಒಳಗಾಗುತ್ತಾರೆ ಎನ್ನುವುದನ್ನು ಒಪ್ಪಿಕೊಂಡರು.

ನ್ಯಾಯಾಲಯಗಳೂ ಇದಕ್ಕೆ ಹೊರತಾಗಿಲ್ಲ ಎಂದು ಹೇಳಿದ ನ್ಯಾ.ಸಿಂಗ್,ಕೇವಲ ವಾಸ್ತವಿಕ ಮತ್ತು ಕಾನೂನಾತ್ಮಕವಲ್ಲದ,ಆದರೆ ನೈತಿಕ ಅಂಶಗಳನ್ನೂ ಹೊಂದಿರುವ ಸಮಸ್ಯೆಗಳನ್ನು ನ್ಯಾಯಾಧೀಶರು ನಿಭಾಯಿಸಬೇಕಾಗುತ್ತದೆ ಎಂದರು.

ಇಂತಹ ಪ್ರಕರಣಗಳಲ್ಲಿ ರಚಿಸಲಾದ ವೈದ್ಯಕೀಯ ಮಂಡಳಿಗಳ ವರದಿಯ ಮಹತ್ವಕ್ಕೂ ಒತ್ತು ನೀಡಿದ ಅವರು,ಈ ಮಂಡಳಿಗಳ ಅಭಿಪ್ರಾಯಗಳು ಅಪೂರ್ಣ, ಅಸ್ಪಷ್ಟವಾಗಿರಬಾರದು. ಅವು ಸ್ವರೂಪದಲ್ಲಿ ಸಮಗ್ರವಾಗಿರಬೇಕು ಎಂದು ಹೇಳಿದರು. ಹಾಲಿ ಪ್ರಕರಣದಲ್ಲಿ ಎಲ್ಎನ್ಜೆಪಿಎನ್ ಆಸ್ಪತೆಯು ಸಲ್ಲಿಸಿದ್ದ ವೈದ್ಯಕೀಯ ವರದಿಯ ಕುರಿತು ಈ ಹಿಂದೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ನ್ಯಾಯಾಲಯವು, ಅದು ಅಪೂರ್ಣವಾಗಿದೆ ಎಂದು ಹೇಳಿತ್ತು.

Similar News