ಇರಾನ್‍ನ 1,200 ವಿದ್ಯಾರ್ಥಿಗಳಿಗೆ `ವಿಷಪ್ರಾಶನ' : ವರದಿ

Update: 2022-12-06 16:34 GMT

ಲಂಡನ್, ಡಿ.6: ಇರಾನ್‍(Iran)ನಲ್ಲಿ ನಡೆಯುತ್ತಿರುವ ದೇಶವ್ಯಾಪಿ ಪ್ರತಿಭಟನೆಯ ಭಾಗವಾಗಿ ಬುಧವಾರದಿಂದ ವಿದ್ಯಾರ್ಥಿಗಳ ಪ್ರತಿಭಟನೆಗೆ ನಿರ್ಧರಿಸಿರುವ ಮಧ್ಯೆಯೇ, ವಿವಿಯ 1,200 ವಿದ್ಯಾರ್ಥಿಗಳ ಗುಂಪು `ಫುಡ್  ಪಾಯಿಸನ್'(``Food Poison'')ಗೆ ಒಳಗಾಗಿದೆ ಎಂದು `ದಿ ಡೈಲಿ ಟೆಲಿಗ್ರಾಫ್' (The Daily Telegraph)ವರದಿ ಮಾಡಿದೆ.

ಅಧಿಕಾರಿಗಳು ಆಹಾರದಲ್ಲಿ ಉದ್ದೇಶಪೂರ್ವಕವಾಗಿ ವಿಷ ಸೇರಿಸಿದ್ದಾರೆ ಎಂದು ಆರೋಪಿಸಿರುವ ಖರಾಝ್ಮಿ(Kharazmi) ಮತ್ತು ಅರಕ್ ವಿವಿ(Arak Vv) ಹಾಗೂ ಇತರ 4 ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ತಮಗೆ ನೀಡಿದ್ದ ಆಹಾರವನ್ನು ಬೀದಿಗೆಸೆದು ಪ್ರತಿಭಟಿಸಿದ್ದಾರೆ ಎಂದು ವರದಿಯಾಗಿದೆ.

 ಆಹಾರ ನಂಜಾಗಲು ನೀರಿನಿಂದ ಹರಡುವ ಬ್ಯಾಕ್ಟೀರಿಯಾಗಳು ಕಾರಣ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಆದರೆ ಇದೇ ರೀತಿಯ ಘಟನೆಗಳ ನಮ್ಮ ಹಿಂದಿನ ಅನುಭವಗಳು ಈ ಸಾಮೂಹಿಕ ಫುಡ್ ಪಾಯಿಸನಿಂಗ್‍ಗೆ ಅಧಿಕಾರಿಗಳು ನೀಡುತ್ತಿರುವ ಕಾರಣವನ್ನು ನಿರಾಕರಿಸುತ್ತವೆ ಎಂದು ಇಸ್ಫಹಾನ್ ವಿವಿ(Isfahan Vv)ಯ ವಿದ್ಯಾರ್ಥಿಗಳು ಹೇಳಿದ್ದಾರೆ.

ಹಲವಾರು ಪೀಡಿತ ವಿಶ್ವವಿದ್ಯಾಲಯಗಳಲ್ಲಿನ ಚಿಕಿತ್ಸಾಲಯಗಳು ನಿರ್ಜಲೀಕರಣ ಹಾಗೂ ಆಹಾರ ನಂಜಿನ ಇತರ ಸಂಬಂಧಿತ ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಔಷಧಗಳ ಕೊರತೆಯನ್ನು ಹೊಂದಿವೆ. ಏಕಾಏಕಿ ಉಲ್ಬಣಿಸಿರುವ ರಾಷ್ಟ್ರೀಯ ಪ್ರತಿಭಟನೆಯನ್ನು ತಡೆಯಲು ಉದ್ದೇಶಪೂರ್ವಕ ತಂತ್ರ ಇದಾಗಿರಬಹುದು ಎಂದು ಊಹಿಸಲಾಗಿದೆ.

ವಿದ್ಯಾರ್ಥಿಗಳ ದೇಶವ್ಯಾಪಿ ಪ್ರತಿಭಟನೆ ಬುಧವಾರ(ಡಿಸೆಂಬರ್ 7ರಿಂದ) ಆರಂಭವಾಗಲಿದೆ. ಈ ಮಧ್ಯೆ, ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಇರಾನ್ ರಾಷ್ಟ್ರೀಯ ತಂಡದ ಮಾಜಿ ಆಟಗಾರ ಅಲಿ ದಯೇಯ್ ಮಾಲಕತ್ವದ ರೆಸ್ಟಾರೆಂಟ್ ಹಾಗೂ ಚಿನ್ನಾಭರಣಗಳ ಅಂಗಡಿಗೆ ಇರಾನ್ ಅಧಿಕಾರಿಗಳು ಸೋಮವಾರ ಬೀಗ ಜಡಿದಿದ್ದಾರೆ ಎಂದು ವರದಿಯಾಗಿದೆ.

 ಸುದ್ಧಿಸಂಸ್ಥೆಯ ಸಂಪಾದಕರ  ಬಂಧನ : ಇರಾನ್‍ನ ಫಾರ್ಸ್ ಸುದ್ಧಿಸಂಸ್ಥೆಯ ಸಹಾಯಕ ಮುಖ್ಯ ಸಂಪಾದಕ ಅಬ್ಬಾಸ್ ದರ್ವಿಷ್ ತಾವಂಗರ್‍ರನ್ನು ಸುಳ್ಳು ಸುದ್ಧಿಯ ಆರೋಪದಲ್ಲಿ ಬಂಧಿಸಲಾಗಿದ್ದು ವಿಚಾರಣೆ ಮುಗಿಯುವವರೆಗೆ ಅವರು ಕಸ್ಟಡಿಯಲ್ಲಿ ಇರುತ್ತಾರೆ  ಎಂದು ಸರಕಾರಿ ಸ್ವಾಮ್ಯದ ಐಆರ್‍ಐಬಿ ಟಿವಿ ವಾಹಿನಿ ವರದಿ ಮಾಡಿದೆ.

ಸುದ್ಧಿಸಂಸ್ಥೆಯ ನೆಟ್‍ವರ್ಕ್ ಅನ್ನು ಹ್ಯಾಕ್ ಮಾಡಲಾಗಿದ್ದು ಸಂಸ್ಥೆಯ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ನವೆಂಬರ್ 26ರಂದು ಟೆಲಿಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಹೇಳಿಕೆಯಲ್ಲಿ ಫಾರ್ಸ್  ತಿಳಿಸಿತ್ತು. 

Similar News