ಸುರತ್ಕಲ್‌: ಮನೆಯ ಮುಂದೆ‌ ನಿಂತಿದ್ದ ಮಗುವನ್ನು ಅಪಹರಿಸಲು ಯತ್ನ‌ ಆರೋಪ; ದೂರು

Update: 2022-12-06 17:31 GMT

ಸುರತ್ಕಲ್‌, ಡಿ.6: ಮನೆಯ ಮುಂದೆ‌ ನಿಂತಿದ್ದ ಮಗುವನ್ನು ಯುವಕನೋರ್ವ ಅಪಹರಿಸಲು ವಿಫಲ ಯತ್ನ‌ ನಡೆಸಿದ್ದಾನೆ ಎನ್ನಲಾದ ಘಟನೆ‌ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ಸುರತ್ಕಲ್‌ನಾದ್ಯಂತ ಸೋಮವಾರ ರಾತ್ರಿ 9ಗಂಟೆಯ ವೇಳೆಗೆ ವಿದ್ಯುತ್ ಕಡಿತಗೊಂಡಿತ್ತು. ಈ ವೇಳೆ ಚೊಕ್ಕಬೆಟ್ಟು ಮುಹಿಯುದ್ದೀನ್‌ ಜುಮಾ‌ ಮಸೀದಿಯ ಮುಂಭಾಗದ ಮನೆಯ ಮುಂದೆ ನಝೀರ್‌ ಎಂಬವರ ಮಗು ನಿಂತಿತ್ತು.‌ ಅಲ್ಲಿಗೆ ಬಂದ ನೀಲಿ ಬಣ್ಣದ ಟಿ ಶರ್ಟ್‌ ಧರಿಸಿದ್ದ ವ್ಯಕ್ತಿಯೋರ್ವ ಮಗುವಿನ ಕೈ ಹಿಡಿದು "ನಿನ್ನ ಅಣ್ಣ ಕಾರಿನಲ್ಲಿದ್ದಾನೆ ಬಾ" ಎಂದು ಕರೆದೊಯ್ಯಲು ಯತ್ನಿಸಿದ್ದಾನೆ‌ ಎನ್ನಲಾಗಿದೆ. ಈ ವೇಳೆ ಮಗು ಅಣ್ಣ ಮನೆಯಲ್ಲಿದ್ದಾನೆ ಎಂದು ಆತನ‌ ಕೈಯಿಂದ ತಪ್ಪಿಸಿಕೊಂಡು ಮನೆಗೆ ಓಡಿದೆ. ಬಳಿಕ ಅಪಹರಣಕ್ಕೆ‌ ಬಂದಿದ್ದ ವ್ಯಕ್ತಿ ಸ್ಥಳದಿಂದ‌ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಮಗುವಿನ ಪೋಷಕರು ಸುರತ್ಕಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮಗುವನ್ನು ಅಪಹರಿಸಲು ಯತ್ನಿಸಿದ್ದ ಎನ್ನಲಾದ ವ್ಯಕ್ತಿಯ ಚಲನವಲನಗಳು ಮಸೀದಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸುರತ್ಕಲ್‌ ಪೊಲೀಸರು, ಘಟನಾ ಸ್ಥಳದ ಸಮೀಪದ ಹಾಗೂ ವ್ಯಕ್ತಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾದ ರಸ್ತೆಯಯಲ್ಲಿರುವ ಮಸೀದಿ, ವಸತಿ ಸಂಕೀರ್ಣಗಳು ಹಾಗೂ ಅಂಗಡಿ ಮುಂಗಟ್ಟುಗಳ ಸಿಸಿಟಿಪಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಆತ ಮಗು ನಿಂತಿದ್ದ ಮಾರ್ಗವಾಗಿ ತೆರಳುತ್ತಿದ್ದ. ಮಗುವನ್ನು ಕಂಡು ಬಂದು ಮಾತನಾಡಿಸಿದ್ದಾನೆ. ಮಗು ಮಾತನಾಡಲು, ಮುಟ್ಟಲು ನಿರಾಕರಿಸಿದಾಗ ಆತ ಆತನ ಪಾಡಿಗೆ ತೆರಳಿದ್ದಾನೆ. ಆತನ ಕುರಿತು ಸಂಪೂರ್ಣ ಚಲನವಲನಗಳನ್ನು ಗಮನಿಸಲಾಗಿದ್ದು, ಆತ ಮಗುವಿನ ಅಪಹರಣಕ್ಕೆ ಶ್ರಮಿಸಿರುವ ಯಾವುದೇ ಶಂಕೆ ವ್ಯಕ್ತವಾಗಿಲ್ಲ ಎಂದು ಸುರತ್ಕಲ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

Similar News