ಬಂಗಾಳಿಗಳ ಅವಹೇಳನ: ನಟ ಪರೇಶ್‌ ರಾವಲ್‌ ರನ್ನು ವಿಚಾರಣೆಗೆ ಕರೆದ ಕೊಲ್ಕತ್ತಾ ಪೊಲೀಸರು

Update: 2022-12-06 17:39 GMT

ಹೊಸದಿಲ್ಲಿ: ಗುಜರಾತ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಬೆಂಗಾಲಿಗಳ ಬಗ್ಗೆ ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ನಟ ಪರೇಶ್ ರಾವಲ್ ಅವರನ್ನು ಕೋಲ್ಕತ್ತಾ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಕೋಲ್ಕತ್ತಾ ಪೊಲೀಸರು ಪರೇಶ್ ರಾವಲ್‌ಗೆ ಸೋಮವಾರ ಹಾಜರಾಗುವಂತೆ ಸೂಚಿಸಿದ್ದಾರೆ.

ಪರೇಶ್ ರಾವಲ್ ವಿರುದ್ಧ ಮಾಜಿ ಸಂಸದ ಹಾಗೂ ಸಿಪಿಐ(ಎಂ) ಮುಖಂಡ ಎಂಡಿ ಸಲೀಂ ದೂರು ದಾಖಲಿಸಿದ್ದಾರೆ. ದ್ವೇಷವನ್ನು ಉತ್ತೇಜಿಸುವುದು, ಉದ್ದೇಶಪೂರ್ವಕ ಅವಮಾನ, ಸಾರ್ವಜನಿಕ ಕಿಡಿಗೇಡಿತನ ಮೊದಲಾದ ಪ್ರಕರಣದಡಿಯಲ್ಲಿ ಪರೇಶ್‌ ರಾವಲ್‌ ವಿರುದ್ಧ ಪ್ರಕರಣ ದಾಖಲಿಸಲು ಎಂಡಿ ಸಲೀಂ ದೂರು ನೀಡಿದ್ದಾರೆ.

 “ಗುಜರಾತ್‌ನ ಜನರು ಹಣದುಬ್ಬರವನ್ನು ಸಹಿಸಿಕೊಳ್ಳುತ್ತಾರೆ ಆದರೆ ಪಕ್ಕದಲ್ಲಿರುವ "ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು" ಸಹಿಸುವುದಿಲ್ಲ” ಎಂದು ಪರೇಶ್‌ ರಾವಲ್‌ ಹೇಳಿದ್ದಾರೆ. ಅಲ್ಲದೆ, ಬಂಗಾಳಿಗಳ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿ "ಅಡುಗೆ ಮೀನು" ಎಂದು ಬಳಸಿರುವುದು  ಬಂಗಾಳಿಗಳನ್ನು ಕೆರಳಿಸಿದೆ ಎಂದು ndtv.com ವರದಿ ಮಾಡಿದೆ.

"ಗ್ಯಾಸ್ ಸಿಲಿಂಡರ್‌ಗಳು ದುಬಾರಿಯಾಗಿದೆ, ಆದರೆ ಅವುಗಳ ಬೆಲೆ ಕಡಿಮೆಯಾಗುತ್ತದೆ, ಜನರಿಗೆ ಉದ್ಯೋಗವೂ ಸಿಗುತ್ತದೆ. ಆದರೆ ರೋಹಿಂಗ್ಯಾ ವಲಸಿಗರು ಮತ್ತು ಬಾಂಗ್ಲಾದೇಶಿಗಳು ದಿಲ್ಲಿಯಲ್ಲಿ ನಿಮ್ಮ ಸುತ್ತಲೂ ವಾಸಿಸಲು ಪ್ರಾರಂಭಿಸಿದರೆ ಏನಾಗುತ್ತದೆ? ಗ್ಯಾಸ್ ಸಿಲಿಂಡರ್‌ಗಳನ್ನು ನೀವೇನು ಮಾಡುತ್ತೀರಿ? ಬಂಗಾಳಿಗಳಿಗೆ ಮೀನು ಬೇಯಿಸಲು ಬಳಸುತ್ತೀರ. ?" ಎಂದು ಪರೇಶ್ ರಾವಲ್ ಕಳೆದ ವಾರ ವಲ್ಸಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದರು.

ಪರೇಶ್ ರಾವಲ್ ಅವರ ಹೇಳಿಕೆಯು ಪಶ್ಚಿಮ ಬಂಗಾಳದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ರಾವಲ್‌ ವಿರುದ್ಧ ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದೆ.

Similar News