ಲಚಿತ್ ಅಸ್ಮಿತೆಯ ಅಪಹರಣ: ಇತಿಹಾಸವೆಂಬುದು ಇಲ್ಲಿ ಯಾರ ಇಚ್ಛೆ?

Update: 2022-12-07 04:41 GMT

ಇತಿಹಾಸದಲ್ಲಿ ಆಗಿಹೋದ ವ್ಯಕ್ತಿಯನ್ನು ರಾಜಕೀಯ ಲೆಕ್ಕಾಚಾರದೊಂದಿಗೆ ನೋಡುವ ಪರಿಪಾಠವೊಂದು ಈಚೆಗೆ ದೊಡ್ಡ ಮಟ್ಟದಲ್ಲಿಯೇ ಕಾಣಿಸುತ್ತಿದೆ. ಒಂದು ಸಮುದಾಯವನ್ನೇ ಅಂತಹ ವ್ಯಕ್ತಿಯ ವಿರುದ್ಧ ಎತ್ತಿ ಕಟ್ಟುವ ಅಥವಾ ಒಂದು ಸಮುದಾಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಮತಬ್ಯಾಂಕ್ ಆಗಿ ಪರಿವರ್ತಿಸುವುದೇ ಇವತ್ತಿನ ರಾಜಕೀಯ ಹೆಚ್ಚುಗಾರಿಕೆಯೂ ಆಗಿಬಿಡುತ್ತಿದೆ. ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮೂಲಕ ಒಂದೆಡೆ ಒಕ್ಕಲಿಗ ಸಮುದಾಯವನ್ನು ತನ್ನತ್ತ ಸೆಳೆಯುತ್ತಲೇ, ತಮಗೆ ಬೇಕಿರದ ಟಿಪ್ಪುವಿನ ವಿರುದ್ಧ ಆ ಸಮುದಾಯ ದ್ವೇಷ ಬೆಳೆಸಿಕೊಳ್ಳುವಂತೆ ಮಾಡುವ ಕಥೆಗಳನ್ನು ಪ್ರಚಾರ ಮಾಡುವ ಕೆಲಸವೊಂದು ಇನ್ನೊಂದು ಕಡೆಯಿಂದ ಆಗುತ್ತಿದೆ.

ಇದು ಇಲ್ಲಿ ಮಾತ್ರವೇ ನಡೆಯುತ್ತಿರುವ ರಾಜಕಾರಣವೇನೂ ಅಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಸಿಗುವ ಚಾರಿತ್ರಿಕ ಸಂಗತಿಗಳನ್ನು ರಾಜಕೀಯಗೊಳಿಸುತ್ತಲೇ, ಕಡೆಗೆ ಕಟ್ಟುಕಥೆಗಳನ್ನೂ ಲಾಭಕ್ಕಾಗಿ ಚಾರಿತ್ರಿಕವಾಗಿಸುವ ಜಾಣತನವೊಂದು ಕಳೆದ ಕೆಲವು ವರ್ಷಗಳಲ್ಲಿ ನಡೆದೇಬಂದಿದೆ. ಇದಕ್ಕೆ ಇತ್ತೀಚಿನ ಇನ್ನೊಂದು ಉದಾಹರಣೆ ಅಸ್ಸಾಮಿನ ವೀರ ಯೋಧ ಲಚಿತ್ ಬೊರ್ಪುಕನ್‌ನ್ನು ಬಳಸಿಕೊಳ್ಳಲಾಗುತ್ತಿರುವ ರೀತಿ.

ಅಸ್ಸಾಮಿನ ಅಹೋಮ್ ಸಾಮ್ರಾಜ್ಯ 17ನೇ ಶತಮಾನದಲ್ಲಿ ಮೊಗಲರ ವಿರುದ್ಧ ಗೆದ್ದುದರಲ್ಲಿ ಯೋಧ ಲಚಿತ್ ಬೊರ್ಪುಕನ್ ಮಹತ್ವದ ಪಾತ್ರವನ್ನು ನಿರ್ವಹಿಸಿದವನು. ಇದು ಆತನ 400ನೇ ಜನ್ಮವರ್ಷ. ವರ್ಷಪೂರ್ತಿ ಆತನ ಜನ್ಮವರ್ಷಾಚರಣೆ ಭಾಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಿಜೆಪಿ ಸರಕಾರ, ನವೆಂಬರ್ ಕಡೇ ವಾರದಲ್ಲಿ ವಿಶೇಷವಾಗಿ ಜನ್ಮವರ್ಷವನ್ನು ಆಚರಿಸಿತು. ಪೂರ್ವಭಾವಿಯಾಗಿ ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ, ಅಮಿತ್ ಶಾ ಪಾಲ್ಗೊಂಡಿದ್ದರು. ಬೊರ್ಪುಕನ್‌ನ್ನು ಹಿಂದೂ ರಾಷ್ಟ್ರೀಯವಾದಿ ನಾಯಕನೆಂದು ಬಿಂಬಿಸುವತ್ತ ಇದೆಲ್ಲವೂ ಕೇಂದ್ರೀಕೃತವಾಗಿತ್ತು.
ಅಸ್ಸಾಮಿ ಇತಿಹಾಸಕಾರರು ಮತ್ತು ಲೇಖಕರು ವಿರೋಧ ವ್ಯಕ್ತಪಡಿಸಿದ್ದೇ ಈ ಕಾರಣಕ್ಕೆ. 1671ರಲ್ಲಿ ಸರೈಘಾಟ್ ಕದನದಲ್ಲಿ ಮೊಗಲ್ ಸೈನ್ಯವನ್ನು ಸೋಲಿಸಿದ ಯೋಧ ಎಂದು ಅಸ್ಸಾಮಿನಲ್ಲಿ ಬೊರ್ಫುಕನ್ ಜನರ ಆದರಾಭಿಮಾನಕ್ಕೆ ಪಾತ್ರನಾದವನು. ಆದರೆ ಅಸ್ಸಾಮಿನಲ್ಲಿ ಬಿಜೆಪಿಯ ಆಡಳಿತ ಶುರುವಾದಂದಿನಿಂದ ಪಕ್ಷವು ಆತನನ್ನು ರಾಷ್ಟ್ರೀಯ ಮಹತ್ವದ ಯೋಧ ಎಂದು ಬಿಂಬಿಸುವ ಉತ್ಸಾಹವನ್ನು ತೋರಿಸುತ್ತಲೇ ಇದೆ. ಬೊರ್ಪುಕನ್ ಚರಿತ್ರೆಯನ್ನು ಕೋಮುವಾದೀಕರಿಸಿರುವ ನಡೆಯನ್ನೇ ಇತಿಹಾಸಕಾರರು ವಿರೋಧಿಸುತ್ತಿರುವುದು.

ಅಹೋಮ್ ಸಾಮ್ರಾಜ್ಯ ಮತ್ತು ಮೊಗಲ್ ಸಾಮ್ರಾಜ್ಯದ ನಡುವಿನ ಯುದ್ಧವನ್ನು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಯುದ್ಧವೆಂದು ಮರುರೂಪಿಸುತ್ತಿರುವುದೇ ಇಲ್ಲಿನ ವ್ಯಂಗ್ಯ. ಇತಿಹಾಸದ ನಿರೂಪಣೆ ಪ್ರಕಾರ, ಮೊಗಲರ ವಿರುದ್ಧ ಅಹೋಮ್ ಜನರದ್ದು ಸುಮಾರು ಮುಕ್ಕಾಲು ಶತಮಾನದ ಸತತ ಹೋರಾಟ. 17ನೇ ಶತಮಾನದಲ್ಲಿನ ಈ ನಿರಂತರ ಸಂಘರ್ಷ ದಿಲ್ಲಿ ಮತ್ತು ಅಸ್ಸಾಮ್ ನಡುವಿನ ಕದನವಾಗಿತ್ತು. ಅಸ್ಸಾಮ್ ಮೇಲಿನ ಮೊಗಲರ ದಾಳಿಗಳನ್ನು ಹಲವು ಬಾರಿ ಹಿಮ್ಮೆಟ್ಟಿಸಿದರೂ ಯುದ್ಧದ ಅತಿರೇಕ ಪರಿಣಾಮಗಳಿಂದ ಬೇಸತ್ತ ಅಹೋಮರು ಮೊಗಲರ ಜೊತೆಗೆ ಒಪ್ಪಂದಕ್ಕೂ ಇಲ್ಲವೆನ್ನುವುದಿಲ್ಲ. ಅದರಂತೆ ಪಶ್ಚಿಮ ಅಸ್ಸಾಮ್ ಮೊಗಲರದೆಂದೂ, ಪೂರ್ವ ಅಸ್ಸಾಮ್ ಅಹೋಮರದೆಂದೂ ಕದನಕ್ಕೆ ಕೊನೆ ಹಾಡುವುದಕ್ಕೆ ಬಯಸುತ್ತಾರೆ. ಇದೂ ಹೆಚ್ಚು ಕಾಲ ನಿಲ್ಲದೆ ಮತ್ತೆ ಕದನಗಳು ನಡೆಯುತ್ತವೆ. ಶಹಜಹಾನ್ ಕಾಲದಿಂದ ಔರಂಗಜೇಬನ ಕಾಲಕ್ಕೂ ಮುಂದುವರಿಯುತ್ತದೆ. ಪೂರ್ವ ಅಸ್ಸಾಮಿಗೂ ತಮ್ಮ ಸಾಮ್ರಾಜ್ಯ ವಿಸ್ತರಿಸುವ ಮೊಗಲರ ಉದ್ದೇಶದ ಈ ದಾಳಿಗಳು ಅಂತಿಮವಾಗಿ ಕೊನೆ ಕಾಣುವುದು ಅಹೋಮಿನ ರಾಜ ಚಕ್ರಧ್ವಜಸಿಂಗನ ಕಾಲದಲ್ಲಿ.

ಸರೈಘಾಟ್ ಯುದ್ಧದ ಸಮಯದಲ್ಲಿ ಅಹೋಮ್ ಸೈನ್ಯದ ಕಮಾಂಡರ್ ಆಗಿದ್ದವನು ಲಚಿತ್ ಬೊರ್ಫುಕನ್. ಗುವಾಹಟಿಯ ಬ್ರಹ್ಮಪುತ್ರದ ದಡದಲ್ಲಿ ನಡೆದ ಕದನ ಇದು. ಮೊಗಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯಲ್ಲಿ ನಡೆದ ಈ ಯುದ್ಧವು ನಿರ್ಣಾಯಕ ಅಹೋಮ್ ವಿಜಯವೆಂದು ಪರಿಗಣಿತವಾಗಿದೆ.
ಆದರೆ, ಅಹೋಮ್ ಸಾಮ್ರಾಜ್ಯ ಮತ್ತು ಮೊಗಲ್ ಸಾಮ್ರಾಜ್ಯದ ನಡುವಿನ ಯುದ್ಧ ಯಾವುದೇ ಧಾರ್ಮಿಕ ಆಯಾಮವುಳ್ಳದ್ದಾಗಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಲಚಿತ್ ಮೊಗಲರ ವಿರುದ್ಧ ಹೋರಾಡಿದ್ದು ಅವರು ಹೊರಗಿನವರು ಮತ್ತು ಅಸ್ಸಾಮಿನ ಮೇಲೆ ಆಕ್ರಮಣ ಮಾಡಿದರು ಎಂಬ ಕಾರಣಕ್ಕೆ. ಲಚಿತ್ ಮೊಗಲರ ವಿರುದ್ಧ ಹೋರಾಡಿದಾಗ ಮೊಗಲ್ ಸೇನೆಯ ಜನರಲ್ ಆಗಿದ್ದವನು ರಾಜಾ ರಾಮ್ ಸಿಂಗ್ ಕಚ್ವಾಹ. ಆತನೊಬ್ಬ ರಜಪೂತ. ಹಾಗಾಗಿ ಇದಕ್ಕೆ ಯಾವುದೇ ಧಾರ್ಮಿಕ ಕೋನವಿಲ್ಲ. ಔರಂಗಜೇಬನ ಸೈನ್ಯದಲ್ಲಿ ಅನೇಕ ಹಿಂದೂ ಸೈನಿಕರೂ ಇದ್ದರು. ಹಾಗೆಯೇ ಮುಸ್ಲಿಮರು ಅಹೋಮ್ ಸೈನ್ಯದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದರು.

ಇದೆಲ್ಲವೂ ಒಂದು ಕಡೆಯಾದರೆ, ಲಚಿತ್ ಬೋರ್ಫುಕನ್ ಈಗಿನ ರಾಜಕಾರಣವು ಬಿಂಬಿಸುವಂತೆ ಹಿಂದೂ ಆಗಿರಲಿಲ್ಲ ಎಂಬುದೂ ಇತಿಹಾಸಕಾರರ ವಾದ. ಆತ ತೈ ಧರ್ಮದವನು. ಲಚಿತ್ ಅಡಿಯಲ್ಲಿದ್ದ ಅನೇಕ ಸೈನಿಕರು ಬುಡಕಟ್ಟು ನಂಬಿಕೆಯವರಾಗಿದ್ದರು.
ಇತಿಹಾಸಕಾರರ ಪ್ರಕಾರ, ಬೊರ್ಫುಕನ್ ಕುರಿತ ಕಥನವು ಆತನ ಶೌರ್ಯ ಮತ್ತು ಕರ್ತವ್ಯಪ್ರಜ್ಞೆಯ ಕಥೆಗಳ ಮೇಲೆ ಚಿತ್ರಿಸಲ್ಪಟ್ಟಿದೆ. ಆತ ಧೀರ ಮತ್ತು ದೃಢ ಮನಸ್ಸಿನ ಕಮಾಂಡರ್ ಆಗಿದ್ದ ಮತ್ತು ಗಂಭೀರವಾದ ಅನಾರೋಗ್ಯದ ಹೊರತಾಗಿಯೂ ಯುದ್ಧದ ಸಮಯದಲ್ಲಿ ತನ್ನ ಕರ್ತೃತ್ವ ಶಕ್ತಿಯನ್ನು ತೋರಿಸಿದನೆಂಬುದು ಶ್ಲಾಘನೆಗೆ ಪಾತ್ರವಾಗಿದೆ. ಆತನ ಹೋರಾಟ ಅಸ್ಸಾಮಿ ಉಪರಾಷ್ಟ್ರೀಯತೆಯ ಭಾಗ. ಅಸ್ಸಾಮಿ ರಾಷ್ಟ್ರೀಯತಾವಾದಿ ನಾಯಕ ಎಂಬುದು ಪರಿಣಿತರ ವಾದ. ಅವನು ಮಾತೃಭೂಮಿ ಅಹೋಮ್‌ನ ಸಾರ್ವಭೌಮತ್ವವನ್ನು ಕಾಯ್ದವನು. ಆತ ಭಾರತೀಯ ಹೀರೊ ಅಥವಾ ಹಿಂದೂ ಯೋಧ ಅಲ್ಲ, ಆದರೆ ಅಸ್ಸಾಮಿ ವೀರ ಯೋಧ ಎಂಬ ವಾದಗಳು, ಬಿಜೆಪಿ ಆತನನ್ನು ಹಿಂದೂ ರಾಷ್ಟ್ರೀಯತಾವಾದಿ ನಾಯಕನೆಂದು ತೋರಿಸಲು ಪ್ರಯತ್ನಪಡುತ್ತಿರುವುದು ಈ ಸಂದರ್ಭದಲ್ಲಿ ತೀವ್ರವಾಗಿ ವ್ಯಕ್ತವಾಗುತ್ತಿವೆ.

ಈ ವಾದಗಳ ಪ್ರಕಾರ, ಅಹೋಮ್ ಸಾಮ್ರಾಜ್ಯವು ಜಾತ್ಯತೀತ ರಾಜಕೀಯವಾಗಿತ್ತು. ಲಚಿತ್ ದಿಲ್ಲಿಯ ಅಧಿಕಾರ ಸ್ಥಾನದ ವಿರುದ್ಧ ಹೋರಾಡಿದ. ಅವನನ್ನು ಹಿಂದೂ ಅಥವಾ ಭಾರತೀಯ ನಾಯಕ ಎಂದು ಬಿಂಬಿಸಿದರೆ, ಅಸ್ಸಾಮಿಗಳು ಪ್ರತಿಭಟಿಸುತ್ತಾರೆ. ಶ್ರಮ ಸಂಸ್ಕೃತಿಯ ಪ್ರಜ್ಞೆಯನ್ನು ಬೆಳೆಸಿದ ಲಚಿತ್, ರಾಜ್ಯದ ಆಸ್ತಿ ಮತ್ತು ಸಂಪನ್ಮೂಲಗಳನ್ನು ರಕ್ಷಿಸಿದವನು. ಲಚಿತ್ ಕಾಲದಲ್ಲಿ ಅಸ್ಸಾಮಿನ ಆರ್ಥಿಕತೆಯು ಸ್ವಾವಲಂಬಿ ನೆಲೆಯಲ್ಲಿತ್ತು. ಅಂಥ ಮೌಲ್ಯಗಳನ್ನು ಪ್ರಚುರಪಡಿಸುವ ಬದಲು ಸರಕಾರ ಅವನನ್ನು ಹಿಂದೂ ಯೋಧನನ್ನಾಗಿ ಮಾಡಲು ತೆರಿಗೆದಾರರ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತಿದೆ ಎಂಬುದು ಈಗ ಎದ್ದಿರುವ ತಕರಾರು.
ಆವತ್ತಿನ ಕಾಲಮಾನದಲ್ಲಿ ಮತ್ತು ರಾಜಕೀಯ ಸನ್ನಿವೇಶದಲ್ಲಿ ಪರಕೀಯರಾಗಿದ್ದ ಮುಸ್ಲಿಮರ ವಿರುದ್ಧ ಹೋರಾಡಿದ ಮತ್ತು ದೇಶದೊಳಗಿನ ಒಂದು ಪ್ರಾದೇಶಿಕ ಅಸ್ಮಿತೆಯನ್ನು ಕಾಯ್ದುಕೊಳ್ಳುವುದನ್ನಷ್ಟೇ ಉದ್ದೇಶವಾಗಿ ಹೊಂದಿದ್ದವನೊಬ್ಬನನ್ನು ಹಿಂದೂ ಯೋಧನನ್ನಾಗಿ ಪರಿವರ್ತಿಸುವ ಈ ರಾಜಕಾರಣವು ಉಗ್ರ ಕೋಮುವಾದಿ ನೆಲೆಯದ್ದಾಗಿದೆ ಎಂಬುದು ಪ್ರಾಮಾಣಿಕ ಇತಿಹಾಸಕಾರರ ನೋವಿನ ಮಾತು.

ಇತಿಹಾಸದಲ್ಲಿನ ಎಲ್ಲ ಕದನಗಳನ್ನೂ ಮುಸ್ಲಿಮರ ವಿರುದ್ಧದ ಹಿಂದೂ ಕದನಗಳು ಮತ್ತು ಹಿಂದೂ ವಿಜಯಗಳೆಂಬ ರೀತಿಯಲ್ಲಿ ಬಿಂಬಿಸುವ ಯತ್ನವೊಂದು ಇದೆಲ್ಲದರ ಅಡಿಯಲ್ಲಿ ನಡೆಯತೊಡಗಿದೆ. ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಅಸ್ಸಾಮಿ ರಾಷ್ಟ್ರೀಯತಾವಾದಿ ನಿಲುವೊಂದು ಕೆಲಸ ಮಾಡುತ್ತಿತ್ತು. ಅಸ್ಸಾಮಿನಲ್ಲಿ ನವೆಂಬರ್ 24ನ್ನು ಲಚಿತ್ ದಿವಸ್ ಎಂದು ಆಚರಿಸಲಾಗುತ್ತಿತ್ತು. ತರುಣ್ ಗೊಗೊಯಿ ನೇತೃತ್ವದ ಆಗಿನ ಕಾಂಗ್ರೆಸ್ ಸರಕಾರ ಗುವಾಹಟಿಯ ಬ್ರಹ್ಮಪುತ್ರದಲ್ಲಿ ಲಚಿತ್ ಬೊರ್ಪುಕನ್‌ನ 35 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಿತ್ತು. 1969ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡಮಿ ಲಚಿತ್ ಹೆಸರಲ್ಲಿ ಚಿನ್ನದ ಪದಕವನ್ನು ವರ್ಷದ ಅತ್ಯುತ್ತಮ ಕೆಡೆಟ್‌ಗೆ ಕೊಡುವುದನ್ನು ಆರಂಭಿಸಿತು.

ದಿಲ್ಲಿಯೆದುರಿನ ಅಹೋಮ್ ಮೊದಲಾದ ರಾಜ್ಯಗಳ ಹೋರಾಟಗಳು ದಿಲ್ಲಿ ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟವಾಗಿತ್ತೇ ಹೊರತು ಬೇರೇನಲ್ಲ. ಆದರೆ ಬಿಜೆಪಿ ರಾಜಕಾರಣದೊಂದಿಗೆ ಎಲ್ಲವೂ ಬೇರೆಯಾಗಿಯೇ ಬಿಂಬಿತವಾಯಿತು. 2016ರ ಚುನಾವಣೆಯನ್ನು ಅದು ಸರೈಘಾಟ್‌ನ ಕೊನೆಯ ಕದನ ಎಂದು ಹೇಳುವ ಮೂಲಕ ಕಾಂಗ್ರೆಸನ್ನು ಮೊಗಲರೊಂದಿಗೆ ಸಮೀಕರಿಸಿ, ತನ್ನ ಮುಸ್ಲಿಮ್ ವಿರೋಧಿ ನಿಲುವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿತೆನ್ನುತ್ತಾರೆ ಪರಿಣಿತರು. 2021ರ ಚುನಾವಣೆಯಲ್ಲಿ ಇದು ಇನ್ನೂ ನಿರ್ಲಜ್ಜ ರೀತಿಯಲ್ಲಿ ಪ್ರದರ್ಶಿತವಾಯಿತು. ಚೋಳನ್ ವಿಜಯಗಳನ್ನು ಅಥವಾ ಸರೈಘಾಟ್‌ನಲ್ಲಿ ಮೊಗಲರ ಮೇಲಿನ ಅಹೋಮ್ ವಿಜಯವನ್ನು ಹಿಂದೂ ವೈಭವದ ಉದಾಹರಣೆಗಳಾಗಿ ಬಿಂಬಿಸುವ ಕೆಲಸದಲ್ಲಿ, ಹಲ್ದಿಘಾಟಿಯಂತಹ ಐತಿಹಾಸಿಕ ಕದನಗಳ ಫಲಿತಾಂಶವನ್ನು ಹಿಂದೂ ಹೋರಾಟಗಾರರ ಪರವಾಗಿ ಬದಲಾಯಿಸುವ ಕೆಲಸದಲ್ಲಿ ಅದು ಮಾಡುತ್ತಿರುವುದು ಬಹುಸಂಖ್ಯಾತರ ನೆಲೆಯಿಂದ ಎಲ್ಲವನ್ನೂ ನೋಡುವ ರಾಜಕಾರಣವನ್ನೇ. ಅದಕ್ಕಾಗಿಯೇ ಮುಸ್ಲಿಮರ ವಿರುದ್ಧ ಹೋರಾಡಿದ ಇಂತಹ ಇನ್ನಷ್ಟು 'ಇಂಡಿಕ್' ವೀರರನ್ನು ಹುಡುಕಲು ಹಿಂದೂ ದೃಷ್ಟಿಕೋನದ ಅನ್ವೇಷಣೆಯೊಂದರ ಕಸರತ್ತು ಸಾಗಿಯೇ ಇದೆ. ಇತಿಹಾಸವೆಂಬುದು ಇಲ್ಲಿ ಯಾರ ಇಚ್ಛೆ?

(ಮಾಹಿತಿ ಕೃಪೆ: scroll.in)

Similar News