ಆಕ್ಷೇಪಾರ್ಹ ಆನ್‌ಲೈನ್ ಸಂದೇಶ: ಬಿಜೆಪಿ ಶಾಸಕನಿಗೆ ಪೊಲೀಸ್ ನೋಟಿಸ್

Update: 2022-12-07 15:26 GMT

ಹೈದರಾಬಾದ್, ಡಿ. 7: ನ್ಯಾಯಾಲಯದ ಸೂಚನೆಗಳನ್ನು ಉಲ್ಲಂಘಿಸಿರುವುದಕ್ಕಾಗಿ ಬಿಜೆಪಿ(BJP)ಯ ಅಮಾನತುಗೊಂಡಿರುವ ಶಾಸಕ ಟಿ. ರಾಜಾ ಸಿಂಗ್‌(T. Raja Singh)ಗೆ ಹೈದರಾಬಾದ್‌ನ ಮಂಗಳಾತ್ ಪೊಲೀಸರು ಮಂಗಳವಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ನ್ಯಾಯಾಲಯದ ಎಚ್ಚರಿಕೆಯ ಹೊರತಾಗಿಯೂ, ಸಿಂಗ್ ಇತರ ಧರ್ಮಗಳ ವಿರುದ್ಧ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಪ್ರಚೋದನಾತ್ಮಕ ಮತ್ತು ಉದ್ವಿಗ್ನಕಾರಿ ಭಾಷಣಗಳನ್ನು ನಿರಂತರವಾಗಿ ಮಾಡುತ್ತಿರುವುದಕ್ಕಾಗಿ ಅಮಾನತುಗೊಂಡಿರುವ ಶಾಸಕನ ವಿರುದ್ಧ ಮುನ್ನೆಚ್ಚರಿಕಾ ಬಂಧನ ಕಾಯ್ದೆಯನ್ನು ಹೇರಲು ತೆಲಂಗಾಣ ಹೈಕೋರ್ಟ್ ಮತ್ತು ಹೈದರಾಬಾದ್ ಪೊಲೀಸ್ ಕಮಿಶನರ್ ಆದೇಶ ನೀಡಿದ್ದಾರೆ ಎಂದು ಪೊಲೀಸ್ ಇಲಾಖೆ ನೀಡಿದ ಶೋಕಾಸ್ ನೋಟಿಸ್‌ನಲ್ಲಿ ತಿಳಿಸಲಾಗಿದೆ.

‘‘ಅನಾರ್ಕಲಿಯನ್ನು ಒಳಗೆ ಹಾಕಿ ಅಕ್ಬರ್ ಗೋಡೆಗಳನ್ನು ಕಟ್ಟಿದ. ಯಾಕೆಂದರೆ ಆ ಕಾಲದಲ್ಲಿ ಫ್ರಿಜ್ ಇರಲಿಲ್ಲ. ಇಷ್ಟೊಂದು ವರ್ಷಗಳ ಬಳಿಕವೂ ಅವರ ವಿಧಾನಗಳು ಮಾತ್ರ ಬದಲಾಗಿವೆ, ಮನೋಸ್ಥಿತಿ ಹಾಗೆಯೇ ಇದೆ’’ ಎಂಬ ಹಿಂದಿ ಭಾಷೆಯ ಸಂದೇಶವೊಂದನ್ನು ನವೆಂಬರ್ 25ರಂದು ಸಾಮಾಜಿಕ ಮಾಧ್ಯಮಗಳಲ್ಲಿ ರಾಜಾ ಸಿಂಗ್(Raja Singh) ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ದಿಲ್ಲಿಯಲ್ಲಿ ಅಫ್ತಾಬ್ ಪೂನಾವಾಲಾ(Aftab Poonawala)ನು ತನ್ನ ಪ್ರೇಯಸಿ ಶ್ರದ್ಧಾ ವಾಲ್ಕರ್‌(Shraddha Walker)ರನ್ನು ಕೊಂದು 35 ತುಂಡುಗಳಾಗಿ ಮಾಡಿ ಫ್ರಿಜ್‌ನಲ್ಲಿ ಇಟ್ಟ ಪ್ರಕರಣವನ್ನು ಉದ್ದೇಶಿಸಿ ರಾಜಾ ಸಿಂಗ್ ಆ ಸಂದೇಶ ಹಾಕಿದ್ದಾರೆ.

Similar News