ಬೆಳ್ತಂಗಡಿ: ಡಿ.17ರಂದು ಮ್ಯಾಟ್ ಕಬಡ್ಡಿ ಪಂದ್ಯಾಟ, ಮಹಿಳೆಯರ ಹಗ್ಗ-ಜಗ್ಗಾಟ ಸ್ಪರ್ಧೆ

► ಮಾಜಿ ಶಾಸಕ ವಸಂತ ಬಂಗೇರ ಜೀವನಾಧರಿತ ಪುಸ್ತಕ ಅನಾವರಣ ► ಕಾರ್ಯಕ್ರಮಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ

Update: 2022-12-08 03:29 GMT

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ನಗರ ಗ್ರಾಮೀಣ ಬ್ಲಾಕ್ ಗಳ ಆಶ್ರಯದಲ್ಲಿ ಡಿ.17ರಂದು ಲಾಯಿಲ ಪ್ರಸನ್ನ ಕಾಲೇಜು ಆವರಣದಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ, ಮಹಿಳೆಯರ ಹಗ್ಗ-ಜಗ್ಗಾಟ ಸ್ಪರ್ಧೆಯ ಉದ್ಘಾಟನೆ ಹಾಗೂ ಮಾಜಿ ಶಾಸಕ ವಸಂತ ಬಂಗೇರ ಜೀವನಾಧರಿತ ವಸಂತ ವಿನ್ಯಾಸ ಪುಸ್ತಕ ಅನಾವರಣ ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಳ್ತಂಗಡಿಗೆ ಆಗಮಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹಾಗೂ ಮಾಜಿ ಸಚಿವ ಕೆ. ಗಂಗಾಧರ ಗೌಡ ಜಂಟಿ ಪತ್ರಿಕಾ ಹೇಳಿಯಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಪ್ರಸನ್ನ ಕಾಲೇಜು ತನಕ ಕಾರ್ಯಕರ್ತರ ಬೃಹತ್ ಮೆರವಣಿಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 15 ಸಾವಿರದಿಂದ 25 ಸಾವಿರ ಕಾರ್ಯಕರ್ತರು ಭಾಗವಹಿಸುವ ಮೂಲಕ ದಾಖಲೆಯ ಕಾರ್ಯಕ್ರಮವಾಗಿ ಮೂಡಿಬರಲಿದೆ ಎಂದು ತಿಳಿಸಿದರು.

ಕಬಡ್ಡಿ ಪಂದ್ಯಾಟದಲ್ಲಿ 3 ಸಾವಿರಕ್ಕೂ ಮಿಕ್ಕಿ ಆಟಗಾರರು ಭಾಗವಹಿಸಲಿದ್ದು, ತಾಲೂಕಿನಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಶಾಸಕರುಗಳಾದ ವೈಕುಂಠ ಬಾಳಿಗಾ, ಸುಬ್ರಹ್ಮಣ್ಯ ಗೌಡ, ಕೇದೆ ಚಿದಾನಂದ ಪೂಜಾರಿ ಇವರ ಹೆಸರುಗಳ ಮೂರು ಕಬಡ್ಡಿ ಕೋರ್ಟು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಶಾಸಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ವಹಿಸಲಿದ್ದಾರೆ. ಉಭಯ ಜಿಲ್ಲೆಗಳ ಶಾಸಕರುಗಳು, ಮಾಜಿ ಶಾಸಕರುಗಳು, ಜನಪ್ರತಿನಿಧಿಗಳು ಭಾಗವಹಿಸಲಿ ದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ನಾಯಕರು ಇತ್ತೀಚೆಗೆ ಬಿಜೆಪಿ ಸೇರ್‍ಪಡೆಯಾದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಮಾತನಾಡಿದ ಗಂಗಾಧರ ಗೌಡ ಅವರು ನೈಜ ಕಾಂಗ್ರೆಸ್ಸಿಗರು ಯಾರೂ ಪಕ್ಷ ಬಿಟ್ಟಿಲ್ಲ. ಕಾಂಗ್ರೆಸ್‌ನಲ್ಲಿದ್ದು, ಬಿಜೆಪಿಯ ಮನಸ್ಥಿತಿ ಹೊಂದಿದ್ದವರು ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಯಾರು ಸ್ಪರ್ಧೆಯಲ್ಲಿ ಇದ್ದಾರೆ ಎಂದು ಸಚಿವ ಸುನಲ್ ಕುಮಾರ್ ಚಿಂತಿಸುವ ಅಗತ್ಯವಿಲ್ಲ ಅದನ್ನು ನೋಡಿಕೊಳ್ಳಲು ಪಕ್ಷದಲ್ಲಿ ಗಂಡು ಮಕ್ಕಳಿದ್ದಾರೆ ಎಂದರು. ಬಿಜೆಪಿಗೆ ಅಭಿವೃದ್ಧಿಯೆಂದರೆ 40 ಶೇ. ಕಮಿಷನ್, ಮರಳು ದಂಧೆ, ಮರಕಳ್ಳತನ ದೋಚುವಿಕೆ ಎಂದೇ ಆಗಿದೆ. ಶಾಸಕರು ಅಹಂಕಾರದಿಂದ ಮಾತನಾಡುತ್ತಿದ್ದು ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನ ಉತ್ತರ ನೀಡಲಿದ್ದಾರೆ ಎಂದರು.

ಇಂದಿರಾಗಾಂಧಿ ಶಕ್ತಿ ಸಾಮರಸ್ಯ ರಥಯಾತ್ರೆಗೆ ಚಾಲನೆ; ಬೆಳ್ತಂಗಡಿ ತಾಲೂಕಿನಾಧ್ಯಂತ ಸಂಚರಿಸಲಿರುವ ಇಂದಿರಾಗಾಂಧಿ ಶಕ್ತಿ ಸಾಮರಸ್ಯ  ರಥಯಾತ್ರೆಗೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ರಥಯಾತ್ರೆ ಒಂದು ತಿಂಗಳ ಕಾಲ ನಡೆಯಲಿದ್ದು ಬೆಳ್ತಂಗಡಿ ತಾಲೂಕಿನ ಎಲ್ಲ ಬೂತ್ ಗಳಿಗೂ ಸಂಚರಿಸಲಿದೆ ಇದರ ಸಮಾರೋಪದ ಸಂದರ್ಭದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ಮಾಜಿ ಸಚಿವ ಗಂಗಾಧರ ಗೌಡ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಸಮಿತಿಯ ಅಧ್ಯಕ್ಷರುಗಳಾದ ರಂಜನ್ ಜಿ. ಗೌಡ, ಶೈಲೇಶ್‌ ಕುಮಾರ್ ಕುರ್ತೋಡಿ, ಕೆಪಿಸಿಸಿ ಸದಸ್ಯರುಗಳಾದ ಮೋಹನ್ ಶೆಟ್ಟಿಗಾರ್, ಕೇಶವ ಗೌಡ ಪಿ., ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಂ ಹಮೀದ್, ರಾಜ್ಯ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ನ.ಪಂ ಸದಸ್ಯ ಜಗದೀಶ್ ಡಿ, ಗ್ರಾಮೀಣ ಬ್ಲಾಕ್ ಪ್ರಧಾನ ಕಾರ್ಯದರ್ಶಿ ದಯಾನಂದ ಪಿ. ಬೆಳಾಲು, ನಗರ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಿ.ಜೆ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ನೇಮಿರಾಜ ಕಿಲ್ಲೂರು, ಮನೋಹರ ಕುಮಾರ್ ಇಳಂತಿಲ, ಭರತ್ ಕುಮಾರ್ ಇಂದಬೆಟ್ಟು, ಎ.ಸಿ ಮ್ಯಾಥ್ಯು ಶಿಬಾಜೆ ಉಪಸ್ಥಿತರಿದ್ದರು.

Similar News