ಮಂಗಳೂರು: ಕಾಲೇಜು ವೇದಿಕೆಯಲ್ಲಿ ಬುರ್ಖಾ ಧರಿಸಿ ನೃತ್ಯ ಮಾಡಿದ ಪ್ರಕರಣ; ವಿದ್ಯಾರ್ಥಿಗಳ ಅಮಾನತುಗೊಳಿಸಿ ವಿಚಾರಣೆ

Update: 2022-12-08 13:35 GMT

ಮಂಗಳೂರು, ಡಿ.8: ನಗರದ ಖಾಸಗಿ ಕಾಲೇಜೊಂದರ ವೇದಿಕೆ ಮೇಲೆ  ನಾಲ್ವರು ವಿದ್ಯಾರ್ಥಿಗಳು ಬುರ್ಖಾ ಹಾಗೂ ಹಿಜಾಬ್ ಧರಿಸಿ ಅಸಭ್ಯವಾಗಿ ನರ್ತಿಸಿದ್ದಾರೆಂಬ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಗೊಂಡ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜು ಆ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಘಟನೆ ನಡೆದಿದೆ.

ವಾಮಂಜೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ನಿನ್ನೆ ಅಧಿಕೃತ ಕಾರ್ಯಕ್ರಮದ ಬಳಿಕ ಕಾಲೇಜಿನ ವಿದ್ಯಾರ್ಥಿಗಳು ಅಸಭ್ಯವಾಗಿ ನೃತ್ಯ ಮಾಡಿರುವಂತಹ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ ಆಂತರಿಕ ವಿಚಾರಣೆಯ ಬಳಿಕ ಸಂಬಂಧಪಟ್ಟ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.

"ಕಾಲೇಜಿನ ಅಧಿಕೃತ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ವೇದಿಕೆಯಲ್ಲಿ ಈ ನೃತ್ಯ ಮಾಡಿದ್ದು, ವಿದ್ಯಾರ್ಥಿಗಳು ಅದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ವಿಚಾರಣೆ ನಡೆಸಲಾಗುತ್ತಿದೆ. ಕಾಲೇಜು ತನ್ನ ಆವರಣದಲ್ಲಿ ಯಾವುದೇ ರೀತಿಯ ಆಕ್ಷೇಪಾರ್ಹ ಹಾಗೂ ಸಮುದಾಯಗಳ ನಡುವೆ ಸೌಹಾರ್ದತೆಗೆ ಧಕ್ಕೆ ತರುವ  ಇಂತಹ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ. ಈ ಕುರಿತಂತೆ ಸೂಕ್ತ ನಿರ್ದೇಶನಗಳನ್ನು ಕೂಡಾ ಪಾಲಿಸಲಾಗುತ್ತಿದೆ" ಎಂದು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ಸುಧೀರ್ ಎಂ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News