ವಕೀಲರ ಮೇಲೆ ಹಲ್ಲೆ ಪ್ರಕರಣ; ತಪ್ಪಿತಸ್ಥ ಪೊಲೀಸರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲಿ: ವಕೀಲರ ಆಗ್ರಹ

Update: 2022-12-08 13:54 GMT

ಉಡುಪಿ, ಡಿ.8: ಮಂಗಳೂರಿನ ಯುವ ನ್ಯಾಯವಾದಿ ಕುಲದೀಪ್ ಶೆಟ್ಟಿ ಅವರ ಮೇಲೆ ಬಂಟ್ವಾಳದ  ಪುಂಜಾಲ ಕಟ್ಟೆ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಹಾಗೂ ಇತರ ಪೊಲೀಸರು ಡಿ.3ರಂದು ನಡೆಸಿದ ಅಮಾನುಷ ಹಲ್ಲೆಯನ್ನು ಖಂಡಿಸಿ ಗುರುವಾರ ಉಡುಪಿ ವಕೀಲರ ಸಂಘದ ವತಿಯಿಂದ ನಗರದ ನ್ಯಾಯಾಲಯದ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆ ನಿರತ ನ್ಯಾಯವಾದಿಗಳನ್ನುದ್ದೇಶಿಸಿ ಮಾತನಾಡಿದ ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್, ಒಬ್ಬ ನ್ಯಾಯವಾದಿಯನ್ನು ದೇಶದ್ರೋಹಿಯ ರೀತಿಯಲ್ಲಿ ಪೊಲೀಸರು ಅಮಾನವೀಯವಾಗಿ ನಡೆಸಿ ಕೊಂಡಿದ್ದಾರೆ. ರಾತೋರಾತ್ರಿ ಮನೆಗೆ ನುಗ್ಗಿ ಅವರಿಗೆ ಬಟ್ಟೆ ಹಾಕಿಕೊಳ್ಳಲೂ ಅವಕಾಶ ನೀಡದೇ, ಮನೆಯವರ ಸಮಕ್ಷಮ ಅರೆಬೆತ್ತಲೆಯಾಗಿ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ. ಅವರು ಮಾಡದ ತಪ್ಪಿಗೆ ಅದೂ ಕೂಡ ಓರ್ವ ನ್ಯಾಯವಾದಿಯನ್ನು ಪೊಲೀಸರು ನಡೆಸಿಕೊಂಡ ರೀತಿ ಅಕ್ಷಮ್ಯ. ನ್ಯಾಯವಾದಿ ಮೇಲೆ ಅಮಾನುಷ ರೀತಿಯಲ್ಲಿ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಹಿರಿಯ ವಕೀಲರಾದ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ತಮ್ಮ ಕರ್ತವ್ಯ ವನ್ನು ಮಾಡುವ ವಕೀಲರನ್ನು ಕೇವಲವಾಗಿ ನೋಡುವ ಅಧಿಕಾರಿಗಳ ಸಂಖ್ಯೆ ಇಂದು ಹೆಚ್ಚುತ್ತಿದೆ. ಈ ಪ್ರಕರಣದಲ್ಲಿ ವಕೀಲರ ಮೇಲೆ ದೌರ್ಜನ್ಯ ನಡಸಿದ  ಅಧಿಕಾರಿಯನ್ನು ಕೇವಲ ಅಮಾನತು ಮಾಡಿದರೆ ಸಾಲದು, ಆತನ ವಿರುದ್ಧ ಇಲಾಖೆ ತನಿಖೆ ನಡೆಸಿ ಉದ್ಯೋಗದಿಂದಲೇ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃದ್ಧಿರಾಜ್ ರೈ ಮಾತನಾಡಿ, ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತಿದ್ದಾರೆ. ತಕ್ಷಣ ಕ್ರಮಕೈಗೊಂಡು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಇಲ್ಲಿ ಕೋರ್ಟಿನ ಆದೇಶದ ಉಲ್ಲಂಘನೆಯೂ ಆಗಿದೆ ಎಂದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ನೂರಾರು ವಕೀಲರು, ಇಲಾಖೆ ವಿರುದ್ಧ ಪೊಲೀಸರ  ಕ್ರಮವನ್ನು ಖಂಡಿಸಿ ಧಿಕ್ಕಾರ ಹಾಗೂ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಉಡುಪಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಸಂಜೀವ, ಶಾಂತರಾಮ ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್‌ಕುಮಾರ್, ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ, ದಿವಾಕರಣ ಶೆಟ್ಟಿ, ಕೆ.ಎಂ.ಶೆಣೈ, ಎನ್.ಕೆ.ಆಚಾರ್ಯ, ಆನಂದ ಮಡಿವಾಳ, ಉಪಾಧ್ಯಕ್ಷ ದಿನೇಶ್ ಬಿ.ಶೆಟ್ಟಿ, ಅಮೃತಕಲಾ, ಪೂರ್ಣಿಮಾ, ಮಂಗಳಾ, ಹರೀಶ್ ಶೆಟ್ಟಿ, ಮೋಹನದಾಸ ಶೆಟ್ಟಿ ಅಲ್ಲದೇ ವಕೀಲರ ಸಂಘದ ಪದಾದಿಕಾರಿಗಳು, ಹಿರಿಯ ಕಿರಿಯ ನ್ಯಾಯವಾದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Similar News