ಭ್ರಷ್ಟಾಚಾರ: ದುರಿತ ಗಜಕೆ ಪಂಚಾನನ

Update: 2022-12-09 05:18 GMT

ಎಲ್ಲ ಬಣ್ಣವನ್ನೂ ಮಸಿ ನುಂಗುವಂತೆ ಇಂದು ಪ್ರತಿಯೊಂದು ಸಮಾಜದಲ್ಲಿಯೂ ಎಲ್ಲ ಒಳ್ಳೆಯದನ್ನೂ ಹಾಳುಗೆಡವುತ್ತಿರುವುದು ಭ್ರಷ್ಟಾಚಾರ. ದೇಶದ ಸಾಮಾಜಿಕ ಚೈತನ್ಯವನ್ನು, ಆರ್ಥಿಕ ದೃಢತೆಯನ್ನು, ನೈತಿಕ ಧಾರ್ಷ್ಟ್ಯವನ್ನು, ಕಡೆಗೆ ನಮ್ಮ ಮನಸ್ಸುಗಳನ್ನೂ ಇದು ನಾಶಪಡಿಸಿಬಿಟ್ಟಿದೆ. ಕೆಟ್ಟದ್ದರ ಪ್ರಾಬಲ್ಯವೂ ಹೆಚ್ಚೆನ್ನುತ್ತಾರೆ. ಭ್ರಷ್ಟಾಚಾರವೆಂಬುದು ಹಾಗೆ. ಭ್ರಷ್ಟಾಚಾರ ಎಂಬ ಗಂಭೀರ ಅಪರಾಧದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ, ಅದನ್ನು ತಡೆಯಲು ದಾರಿಗಳನ್ನು ಕಂಡುಕೊಳ್ಳುವ ಮತ್ತು ಭ್ರಷ್ಟಾಚಾರವನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ಎದುರಿಸುವ ಕ್ರಮಗಳನ್ನು ಬಲಪಡಿಸಲೆಂದೇ ವರ್ಷವೂ ಡಿಸೆಂಬರ್ 9ನ್ನು ಅಂತರ್‌ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವೆಂದು ಆಚರಿಸಲಾಗುತ್ತದೆ. 

ಡಿಸೆಂಬರ್ 9ನ್ನು ಅಂತರ್‌ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವೆಂದು ಆಚರಿಸುವ ಪ್ರಸ್ತಾವ 2003ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಮಂಡನೆಯಾಯಿತು. ಬಳಿಕ 2005ರ ಡಿಸೆಂಬರ್‌ನಿಂದ ಇದು ಅನುಷ್ಠಾನಕ್ಕೆ ಬಂತು.

ಇಂದು ಯಾವ ಕ್ಷೇತ್ರವೂ ಭ್ರಷ್ಟತೆಯಿಂದ ಮುಕ್ತವಾಗಿ ಉಳಿದಿಲ್ಲ. ಶಿಕ್ಷಣ, ಆರೋಗ್ಯ, ಕ್ರೀಡೆ, ರಾಜಕೀಯ, ನ್ಯಾಯ, ದೇಶದ ಅಭಿವೃದ್ಧಿ ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರ ಆಳವಾಗಿ ಬೇರೂರಿದೆ. ಇದು ಇನ್ನಷ್ಟು ಗಂಭೀರ ಸಮಸ್ಯೆಗಳ ಕಗ್ಗಂಟಿಗೆ ಕಾರಣವಾಗುತ್ತಿದೆ. ಪ್ರಜಾಪ್ರಭುತ್ವ, ಸಮಾಜದ ಭದ್ರತೆ, ನೈತಿಕ ಮೌಲ್ಯ, ನ್ಯಾಯ ಸಂಸ್ಥೆಯ ಮೌಲ್ಯಗಳನ್ನು ಈ ಭಯಂಕರ ಪಿಡುಗು ದುರ್ಬಲಗೊಳಿಸುತ್ತಿದೆ.

ವರ್ಷವೂ ಒಂದು ಲಕ್ಷ ಕೋಟಿಯಷ್ಟು ಹಣವು ಲಂಚದ ರೂಪ ಪಡೆಯುತ್ತದೆ ಎಂಬುದು ಒಂದು ಅಂದಾಜು. ಅಂದರೆ ಇದು ಜಾಗತಿಕ ಜಿಡಿಪಿಯ ಶೇ.5ಕ್ಕಿಂತ ಹೆಚ್ಚಿನ ಮೊತ್ತವೆನ್ನಲಾಗುತ್ತದೆ. ಹೀಗೆ ಲಂಚದ ರೂಪದಲ್ಲಿ ಹರಿಯುವ ಹಣದ ಸದುಪಯೋಗವಾದರೆ ಶೇ.10ರಷ್ಟು ಹೆಚ್ಚು ಅಭಿವೃದ್ಧಿ ಸಾಧ್ಯ ಎಂಬುದು ವಿಶ್ವಸಂಸ್ಥೆಯ ಟಿಪ್ಪಣಿ.

ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಶ್ವದಾದ್ಯಂತ ಇರುವ ಸರಕಾರಗಳು, ಸರಕಾರೇತರ ಸಂಘಟನೆಗಳು, ಮಾಧ್ಯಮಗಳು ವಿವಿಧ ಬಗೆಯಲ್ಲಿ ಈ ದಿನವನ್ನು ಆಚರಿಸುತ್ತವೆ. ಮುಖ್ಯವಾಗಿ ಯುವಕರಲ್ಲಿ ಅರಿವು ಮೂಡಿಸುವತ್ತ ವಿಶೇಷ ಗಮನ ಕೊಡಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಣಾಮಕಾರಿ ಸಂದೇಶಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಪ್ರತಿವರ್ಷ ಒಂದು ನಿರ್ದಿಷ್ಟ ಧ್ಯೇಯದೊಂದಿಗೆ ಈ ದಿನದ ಆಚರಣೆಯಿರುತ್ತದೆ. ‘ಭ್ರಷ್ಟಾಚಾರದ ವಿರುದ್ಧ ಜಗತ್ತನ್ನು ಒಂದುಗೂಡಿಸುವುದು’ ಈ ಸಲದ ಥೀಮ್.

ಆಚರಣೆಯೇನೋ ಆಗುತ್ತದೆ. ಆದರೆ ಭ್ರಷ್ಟಾಚಾರ ವಿರೋಧಿ ನಡೆಯೆಂಬುದು ವಾಸ್ತವದಲ್ಲಿ ನಮ್ಮ ನಡೆಯಲ್ಲಿ ಜಾರಿಯಾಗುತ್ತದೆಯೇ ಎಂಬುದು ಬಹುಶಃ ಉತ್ತರ ಸಿಗದ ಪ್ರಶ್ನೆ. ಭ್ರಷ್ಟತೆಯೆಂಬುದು ಮನಸ್ಸೊಳಗೇ ಬಂದು ಕೂತಿರುವಾಗ ಆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಭ್ರಷ್ಟತೆ ಮತ್ತು ಭಾರತದ ಪ್ರಜಾಪ್ರಭುತ್ವ

ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದ ಇತ್ತೀಚಿನ ವರದಿಯ ಪ್ರಕಾರ, ಭಾರತವು 180 ದೇಶಗಳ ಪಟ್ಟಿಯಲ್ಲಿ 85ನೇ ಸ್ಥಾನದಲ್ಲಿದೆ. ಹಿಂದಿನ ವರದಿಯಲ್ಲಿ 86 ಇತ್ತು. ಇದರೊಂದಿಗೆ ಒಂದು ಸ್ಥಾನದಷ್ಟು ಸ್ಥಿತಿ ಉತ್ತಮ ಎಂಬುದು ಹೌದಾದರೂ, ಭಾರತದ ಪ್ರಜಾಪ್ರಭುತ್ವದ ಸ್ಥಿತಿಗತಿಯ ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದೆ.

ಜರ್ಮನಿಯ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಿದ್ಧಪಡಿಸಿದ ವರದಿ ಇದಾಗಿದ್ದು, ಜನಸಾಮಾನ್ಯರು, ವ್ಯಾಪಾರಿಗಳು ಮತ್ತು ಸಾರ್ವಜನಿಕ ಜೀವನದಲ್ಲಿರುವವರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಸಾರ್ವಜನಿಕ ವಲಯದಲ್ಲಿನ ಭ್ರಷ್ಟಾಚಾರ ಕುರಿತ ಸಮೀಕ್ಷೆಯ ಆಧಾರದ ಮೇಲೆ 0ಯಿಂದ 100ರವರೆಗೆ ಅಂಕಗಳನ್ನು ನೀಡಲಾಗುತ್ತದೆ. ಹೆಚ್ಚು ಅಂಕ ಪಡೆದ ದೇಶಗಳಲ್ಲಿ ಭ್ರಷ್ಟಾಚಾರ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಅಂದರೆ 0 ಅಂಕ ಪಡೆದ ದೇಶ ಅತ್ಯಂತ ಭ್ರಷ್ಟ ಮತ್ತು 100 ಅಂಕ ಪಡೆದ ದೇಶ ಭ್ರಷ್ಟಾಚಾರ ಮುಕ್ತ.

ಭ್ರಷ್ಟಾಚಾರದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳೆಂದರೆ ಡೆನ್ಮಾರ್ಕ್, ಫಿನ್ಲೆಂಡ್, ನ್ಯೂಝಿಲ್ಯಾಂಡ್ ಮತ್ತು ನಾರ್ವೆ.

ವಿಶ್ವದ ಬಲಿಷ್ಠ ರಾಷ್ಟ್ರವಾಗಿರುವ ಚೀನಾ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ 45 ಅಂಕಗಳನ್ನು ಪಡೆದಿದೆ. ಭಾರತ 40 ಅಂಕಗಳನ್ನು ಪಡೆದು ಚೀನಾಕ್ಕಿಂತ ಹೆಚ್ಚು ಭ್ರಷ್ಟಾಚಾರವಿರುವ ದೇಶವಾಗಿದೆ. ಇಂಡೋನೇಶ್ಯ 38, ಪಾಕಿಸ್ತಾನ 28 ಹಾಗೂ ಬಾಂಗ್ಲಾದೇಶ 26 ಅಂಕಗಳನ್ನು ಪಡೆದಿವೆ. ಭೂತಾನ್ ಹೊರತುಪಡಿಸಿ, ಭಾರತದ ನೆರೆಯ ಎಲ್ಲ ರಾಷ್ಟ್ರಗಳೂ ಭಾರತಕ್ಕಿಂತಲೂ ಕಡುಭ್ರಷ್ಟ ದೇಶಗಳೇ ಆಗಿವೆ.

ಭಾರತದೊಳಗಿನ ಭ್ರಷ್ಟಾಚಾರ ಸ್ಥಿತಿಯಲ್ಲಿ ಸುಧಾರಣೆಯಿಲ್ಲ. ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ಅಪಾಯದಲ್ಲಿದ್ದು, ರಾಜಕೀಯ ಉಗ್ರರು, ಕ್ರಿಮಿನಲ್‌ಗಳು ಮತ್ತು ಭ್ರಷ್ಟ ಅಧಿಕಾರಿಗಳ ದಾಳಿಗೆ ತುತ್ತಾಗುತ್ತಿದ್ದಾರೆ ಎಂದು ವರದಿಯು ಹೇಳುತ್ತದೆ. ಮಾತ್ರವಲ್ಲ, ಸರಕಾರದ ವಿರುದ್ಧ ಮಾತನಾಡುವವರನ್ನು ಭದ್ರತೆ, ಮಾನನಷ್ಟ, ದೇಶದ್ರೋಹ, ದ್ವೇಷಭಾಷಣ, ನ್ಯಾಯಾಂಗ ನಿಂದನೆ ಆರೋಪ ಮತ್ತು ವಿದೇಶಿ ನಿಧಿ ಮೇಲಿನ ನಿಯಮಗಳಡಿಯಲ್ಲಿ ಸಿಲುಕಿಸಲಾಗುತ್ತಿದೆ ಎಂಬ ಅಂಶವನ್ನೂ ವರದಿ ಉಲ್ಲೇಖಿಸಿದೆ.

ಇತಿಹಾಸದ ಪುಟಗಳಲ್ಲಿ...

ಎಷ್ಟು ಕೊಟ್ಟರೂ...

ಅಲ್ಲಾವುದ್ದೀನ್ ಖಿಲ್ಜಿ ತನ್ನ ಆಸ್ಥಾನದಲ್ಲಿದ್ದ ಭ್ರಷ್ಟಾಚಾರವನ್ನು ತಡೆಗಟ್ಟಲು ಅಧಿಕಾರಿಗಳ ಸಂಬಳ ಹೆಚ್ಚಿಸಿದನೆಂಬ ವಿಚಾರ ಮಧ್ಯಯುಗೀನ ಇತಿಹಾಸದಲ್ಲಿ ಬರುತ್ತದೆ. ಹೆಚ್ಚು ಸಂಬಳ ನೀಡಿದರೆ ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡುವುದಿಲ್ಲ ಎಂಬ ಅವನ ನಂಬಿಕೆ ಸುಳ್ಳಾಯಿತು. ಭ್ರಷ್ಟಾಚಾರ ನಿಲ್ಲಲಿಲ್ಲ.

ತಿದ್ದುವವರು

10ನೇ ಶತಮಾನದ ಯಶಸ್ಕರ ಎಂಬ ರಾಜನ ಕಾಲದಲ್ಲಿ ನಡೆದ ಒಂದು ಘಟನೆ:

ವರ್ತಕನೊಬ್ಬ ಮತ್ತೊಬ್ಬ ಸಿರಿವಂತ ವರ್ತಕನಿಗೆ ತನ್ನ ಮನೆಯನ್ನು ಮಾರಾಟ ಮಾಡುತ್ತಾನೆ. ಕ್ರಯಪತ್ರದಲ್ಲಿ ‘ಮನೆಯ ಅಂಗಳದಲ್ಲಿದ್ದ ಬಾವಿಯನ್ನು ಹೊರತುಪಡಿಸಿ’ ಎಂಬ ಒಕ್ಕಣೆಯಿರುತ್ತದೆ. ಹಲವು ವರ್ಷಗಳ ನಂತರ ಆತ ಊರಿಗೆ ಮರಳಿದಾಗ, ತನ್ನ ಮನೆಯ ಅಂಗಳದಲ್ಲಿದ್ದ ಬಾವಿಯನ್ನು ಸಿರಿವಂತ ವರ್ತಕ ಬಳಸುತ್ತಿರುತ್ತಾನೆ. ಇದನ್ನು ಪ್ರಶ್ನಿಸಿ ವರ್ತಕ ನ್ಯಾಯಾಲಯದಲ್ಲಿ ದೂರು ಸಲ್ಲಿಸುತ್ತಾನೆ. ಆದರೆ ನ್ಯಾಯಾಲಯ ಸಿರಿವಂತ ವರ್ತಕನ ಪರ ತೀರ್ಪು ನೀಡುತ್ತದೆ. ಇದನ್ನು ಪ್ರಶ್ನಿಸಿ ಮಾರಾಟಗಾರ ರಾಜನಿಗೆ ದೂರು ಕೊಡುತ್ತಾನೆ. ರಾಜ ತನಿಖೆ ಮಾಡಿದಾಗ ಸಿರಿವಂತ ವರ್ತಕ ನ್ಯಾಯಾಲಯದ ಕಾರಕೂನನಿಗೆ ಲಂಚ ನೀಡಿ ಮಾರಾಟದ ಪತ್ರದಲ್ಲಿ ಆ ಒಕ್ಕಣೆಯನ್ನೇ ಬದಲಿಸಿಕೊಂಡಿದ್ದು ಬಯಲಾಗುತ್ತದೆ.

ಅವರಿಂದಲೇ ಎಲ್ಲ ಅನಾಹುತ

ಚೀನಾ ದೇಶದ ವಾನ್ಟ್ ಆನ್ ಶಿ ಭ್ರಷ್ಟಾಚಾರಕ್ಕೆ ಎರಡು ಕಾರಣಗಳನ್ನು ಗುರುತಿಸಿದ್ದ. ಮೊದಲನೆಯದು ದುರ್ಬಲ ಕಾನೂನುಗಳು ಮತ್ತು ಎರಡನೆಯದು ಕೆಟ್ಟ ಅಧಿಕಾರಿಗಳು. ಹುದ್ದೆಗೆ ತಕ್ಕ ಅಧಿಕಾರಿಗಳು ಇಲ್ಲದಿದ್ದಾಗ ಯಾವುದೇ ಕಾಯ್ದೆಗಳಿಂದ ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂಬುದು ಅವನ ಖಚಿತ ಅಭಿಮತ.

ಅವನ ಪ್ರಕಾರ, ಜನರಲ್ಲಿ ಎರಡು ಬಗೆಯವರಿರುತ್ತಾರೆ. ಮೊದಲನೆಯವರು ತುಂಬಾ ನೀತಿವಂತರು. ಎರಡನೆಯ ವರ್ಗದವರು ನೀತಿವಂತರೂ ಅಲ್ಲದ ಆದರೆ ಕೆಟ್ಟವರ ಹಾಗೆಯೂ ಕಾಣಿಸದ ಜನ. ಈ ಎರಡನೆಯ ಗುಂಪಿನವರೇ ಭ್ರಷ್ಟಾಚಾರದಂಥ ಎಲ್ಲ ಅನಾಹುತಗಳಿಗೂ ಕಾರಣರಾಗುವವರು.

ಕೌಟಿಲ್ಯ ಹೇಳುವುದು:

ವ್ಯಕ್ತಿಯೊಬ್ಬನ ನಾಲಗೆಯ ಮೇಲೆ ಜೇನುತುಪ್ಪವನ್ನು ಇಟ್ಟರೆ ಅವನು ಅದನ್ನು ಸವಿಯದಿರಲು ಹೇಗೆ ಸಾಧ್ಯ? ಹಾಗೆಯೇ ರಾಜ್ಯದ ಹಣವನ್ನು ನಿರ್ವಹಿಸುತ್ತಿರುವವನು ಅದರ ರುಚಿಯನ್ನು ಅನುಭವಿಸದೆ ಇರಲಾರ. ಮೀನು ನೀರು ಕುಡಿಯುತ್ತಿರುವುದನ್ನು ಹೇಗೆ ಗುರುತಿಸಲು ಸಾಧ್ಯವಿಲ್ಲವೋ ಅದೇ ರೀತಿ ಅಧಿಕಾರಿಯೊಬ್ಬ ಯಾವಾಗ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಾನೆಂದು ಪತ್ತೆಹಚ್ಚುವುದು ಕಷ್ಟ. ಆಕಾಶದಲ್ಲಿ ಹಾರಾಡುತ್ತಿರುವ ಪಕ್ಷಿ ಹಾದುಬಂದ ದಾರಿಯನ್ನಾದರೂ ಗುರುತಿಸಬಹುದು. ಆದರೆ ಅಧಿಕಾರಿಯ ದುರುದ್ದೇಶವನ್ನು ತಿಳಿಯಲಾಗದು.

Similar News