ಕಪ್ಪುಹಣ: ಆ ಮಧ್ಯರಾತ್ರಿಯ ಘೋಷಣೆಯ ನಂತರ...

Update: 2022-12-09 05:29 GMT

ಆರ್‌ಬಿಐ ಅಂಕಿಅಂಶಗಳ ಪ್ರಕಾರ, ಅಮಾನ್ಯಗೊಂಡ ಬಹುತೇಕ ಹಣದ ಸಂಪೂರ್ಣ ಭಾಗ (ಶೇ.99ಕ್ಕಿಂತ ಹೆಚ್ಚು) ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. ಅಮಾನ್ಯಗೊಂಡ 15.41 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳ ಪೈಕಿ 15.31 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ವಾಪಸ್ ಬಂದಿವೆ. ಮತ್ತೆ ಕಪ್ಪುಹಣ?

2016ರ ನವೆಂಬರ್ 8ರಂದು ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ದೂರದರ್ಶನದಲ್ಲಿ ಕಾಣಿಸಿಕೊಂಡು ನೋಟು ನಿಷೇಧ ಘೋಷಿಸಿದಾಗ ಏನು ಮಾತು ಕೊಟ್ಟಿದ್ದರೆಂಬುದು ಎಲ್ಲರಿಗೂ ಗೊತ್ತು. ಎಲ್ಲಾ 500 ಮತ್ತು 1,000 ರೂ ನೋಟುಗಳು ಅಮಾನ್ಯವಾಗುತ್ತವೆ ಎಂದು ಹೇಳಿದ ಅವರು, ಅಡಗಿಸಿಡಲಾದ ಕಪ್ಪು ಹಣವನ್ನು ಹೊರತೆಗೆಯುವುದಕ್ಕಾಗಿ ಇದನ್ನು ಮಾಡುತ್ತಿರುವುದಾಗಿ ಬಿಂಬಿಸಿದ್ದರು.

ಈ ಘೋಷಣೆ ಅರ್ಥಶಾಸ್ತ್ರಜ್ಞರನ್ನೇ ಅಚ್ಚರಿಗೆ ತಳ್ಳಿತ್ತು. ಯಾಕೆಂದರೆ ಶೇ.5ರಷ್ಟು ಹಣ ಮಾತ್ರ ನಗದು ರೂಪದಲ್ಲಿರುತ್ತದೆ ಎಂಬುದು ಅವರ ವಾದವಾಗಿತ್ತು. ಉಳಿದದ್ದೇನಿದ್ದರೂ ರಿಯಲ್ ಎಸ್ಟೇಟ್ ಮತ್ತು ಚಿನ್ನದಂತಹ ಇತರ ಆಸ್ತಿಗಳ ರೂಪದಲ್ಲಿದೆ ಎಂದು ಅವರು ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿದ್ದರು.

ನೋಟು ಅಮಾನ್ಯೀಕರಣದ ಹಿಂದೆ ಮೂರು ಪ್ರಮುಖ ಆರ್ಥಿಕ ಉದ್ದೇಶಗಳಿದ್ದವು. ಅವೆಂದರೆ, ಕಪ್ಪುಹಣ, ನಕಲಿ ನೋಟುಗಳ ವಿರುದ್ಧ ಹೋರಾಡುವುದು ಮತ್ತು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಮೂಲಕ ನಗದು ರಹಿತ ಆರ್ಥಿಕತೆಯನ್ನು ಸೃಷ್ಟಿಸುವುದೆನ್ನಲಾಗಿತ್ತು. ಆ ಗುರಿಗಳಲ್ಲಿ, ಕಪ್ಪುಹಣದ ವಿಚಾರವೇ ದೊಡ್ಡದಾಗಿತ್ತು. ಆದರೆ ಕಪ್ಪುಹಣವನ್ನು ಇಲ್ಲವಾಗಿಸುವ ಗುರಿ ಸಾಧಿಸಲಾಯಿತೇ?

ಆರ್‌ಬಿಐ ಅಂಕಿಅಂಶಗಳ ಪ್ರಕಾರ, ಅಮಾನ್ಯಗೊಂಡ ಬಹುತೇಕ ಹಣದ ಸಂಪೂರ್ಣ ಭಾಗ (ಶೇ.99ಕ್ಕಿಂತ ಹೆಚ್ಚು) ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. ಅಮಾನ್ಯಗೊಂಡ 15.41 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳ ಪೈಕಿ 15.31 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ವಾಪಸ್ ಬಂದಿವೆ. ಮತ್ತೆ ಕಪ್ಪುಹಣ?

ವಿದೇಶಿ ಖಾತೆಗಳಲ್ಲಿ ಸಂಗ್ರಹವಾಗಿರುವ ಕಪ್ಪುಹಣದ ಬಗ್ಗೆ ಸರಕಾರ ಅಥವಾ ಖಾಸಗಿ ಸಂಸ್ಥೆ ಯಾರ ಬಳಿಯೂ ಮಾಹಿತಿ ಇಲ್ಲವೆಂಬುದನ್ನು ಸರಕಾರವೇ ಒಪ್ಪಿಕೊಳ್ಳುತ್ತದೆ. ಎರಡು ವರ್ಷಗಳ ಹಿಂದೆ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸರಕಾರ, ಸ್ವಿಸ್‌ಬ್ಯಾಂಕ್‌ಗಳಲ್ಲಿ ಭಾರತೀಯರು ಠೇವಣಿ ಇಟ್ಟಿರುವ ಮೊತ್ತ ಕಡಿಮೆಯಾಗಿದೆ ಎಂಬುದಕ್ಕೆ ಯಾವುದೇ ಡೇಟಾ ಇಲ್ಲ ಎಂದು ಹೇಳಿತು. ಆದಾಗ್ಯೂ, ಕಪ್ಪುಹಣದ ಸಮಸ್ಯೆಯನ್ನು ಸರಿಪಡಿಸುವುದು ಸರಕಾರದ ಆದ್ಯತೆಯ ಪಟ್ಟಿಯಲ್ಲಿದೆ. ಮಾಹಿತಿಯ ಕೊರತೆಯ ಹೊರತಾಗಿಯೂ, ಕಪ್ಪುಹಣವನ್ನು ತಡೆಯಲು ಆದಾಯ ತೆರಿಗೆ ಇಲಾಖೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿತು.

ಸ್ವಿಸ್ ಖಾತೆಯಲ್ಲಿರುವ ಕಪ್ಪುಹಣ ಭಾರತಕ್ಕೆ ಮರಳಿದ ನಂತರ ಪ್ರತಿಯೊಬ್ಬ ವ್ಯಕ್ತಿಗೂ 15 ಲಕ್ಷ ರೂಪಾಯಿ ಸಿಗಲಿದೆ ಎಂದು 2014ರ ಚುನಾವಣಾ ಪೂರ್ವ ಭಾಷಣವನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸುತ್ತಲೇ ಇವೆ. ಆದರೆ, ಜನರ ಖಾತೆಗಳಿಗೆ 15 ಲಕ್ಷ ರೂಪಾಯಿ ಬರುತ್ತದೆ ಎಂದು ಮೋದಿ ಎಂದಿಗೂ ಹೇಳಿಲ್ಲ ಎಂದು ಬಿಜೆಪಿ ನಾಯಕ ರಾಜನಾಥ ಸಿಂಗ್ ಈ ಹಿಂದೆ ಸ್ಪಷ್ಟಪಡಿಸಿದ್ದರು. ಕಪ್ಪುಹಣದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಕ್ಷ ಹೇಳಿದ್ದು ಅಷ್ಟೆ ಎಂದಿದ್ದರು ಅವರು.

ನವೆಂಬರ್ 2016ರಲ್ಲಿ ಚಲಾವಣೆಯಲ್ಲಿದ್ದ ಶೇ.86.4ರಷ್ಟು 500 ಮತ್ತು 1,000 ರೂಪಾಯಿಯ ನೋಟುಗಳ ಅಮಾನ್ಯೀಕರಣದ ಬಳಿಕ ಕೇವಲ 10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕರೆನ್ಸಿಯಷ್ಟೇ ಬ್ಯಾಂಕ್‌ಗಳಿಗೆ ಹಿಂದಿರುಗುತ್ತದೆ ಎಂದು ಸರಕಾರ ನಿರೀಕ್ಷಿಸಿತ್ತು. ಆದಾಗ್ಯೂ, ಚಲಾವಣೆಯಲ್ಲಿರುವ ಹೆಚ್ಚಿನ ಕರೆನ್ಸಿ ಮರಳಿತು. ಪರಿಣಾಮ ಸರಕಾರ ಮತ್ತು ಆರ್‌ಬಿಐ ಟೀಕೆಗಳನ್ನು ಎದುರಿಸಬೇಕಾಯಿತು. ನೋಟು ಅಮಾನ್ಯೀಕರಣವು ಭಾರತದ ಆರ್ಥಿಕತೆಯಿಂದ ಕಪ್ಪು ಹಣವನ್ನು ತೊಡೆದುಹಾಕುವ ಸರಕಾರದ ಗುರಿಯನ್ನು ಪೂರೈಸಲಿಲ್ಲ ಎಂಬುದು ಬಯಲಾಯಿತು.

ಕಪ್ಪುಹಣ ವಾಪಸ್ ತರುವ ಪ್ರಧಾನಿ ಮೋದಿಯವರ ಭರವಸೆ ಈಡೇರದಿರಬಹುದು, ಆದರೆ ಈ ಕ್ರಮ ಉದ್ಯಮಿಗಳ ಮನಸ್ಸಿನಲ್ಲಿ ಭಯವನ್ನು ಹುಟ್ಟುಹಾಕಿತು ಎಂಬ ವಾದಗಳೂ ಇವೆ. ಇದರ ಪರಿಣಾಮವಾಗಿ 70,250 ಕೋಟಿ ಅಘೋಷಿತ ಆದಾಯವನ್ನು ಘೋಷಿಸಲಾಯಿತು. ಈ ಆದಾಯಕ್ಕೆ ಶೇ.45ರಷ್ಟು ತೆರಿಗೆ ವಿಧಿಸಲಾಗಿದೆ. ಇದೇ ವೇಳೆ, ಇದೆಲ್ಲ ಕಪ್ಪುಹಣವನ್ನು ಬಿಳಿ ಮಾಡುವುದಕ್ಕಾಗಿಯೇ ಹೊರತು ಅರ್ಥ ವ್ಯವಸ್ಥೆ ಸುಧಾರಣೆಗಲ್ಲ ಎಂದೂ ಪ್ರತಿಪಕ್ಷಗಳು ಟೀಕಿಸಿದ್ದಿದೆ. ಅಕ್ರಮವಾಗಿ ಹಣ ಇಟ್ಟುಕೊಂಡಿದ್ದವರೆಲ್ಲ ಬ್ಯಾಂಕುಗಳ ಮೂಲಕ ಸಕ್ರಮ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲಾಯಿತು ಎಂಬ ಆರೋಪಗಳೂ ಕೇಳಿಬಂದಿದ್ದವು. ಕಪ್ಪುಹಣ ಎಲ್ಲಿಹೋಯಿತೆಂಬ ಪ್ರಶ್ನೆಗೆ ಉತ್ತರವೇ ಇಲ್ಲ ಎಂದೂ ಅವು ವ್ಯಂಗ್ಯವಾಡಿವೆ.

Similar News