ಡಿ.10ರಂದು ಅಡ್ಯಾರ್ ಕಣ್ಣೂರು ಮೈದಾನದಲ್ಲಿ 'ನೂರೇ ಅಜ್ಮೀರ್ ಐತಿಹಾಸಿಕ ಸಂಗಮ'

Update: 2022-12-09 06:56 GMT

ಮಂಗಳೂರು, ಡಿ.9: ಅಜ್ಮೀರ್ ಎಜುಕೇಷನ್ ಮತ್ತು ಹ್ಯುಮಾನಿಟಿ ಫೋರಂನ ದ.ಕ. ಜಿಲ್ಲಾ ಘಟಕದ ವತಿಯಿಂದ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಡಿ.10ರಂದು ನೂರೇ ಅಜ್ಮೀರ್ ಆಧ್ಯಾತ್ಮಿಕ ಮಹಾ ಪ್ರಾರ್ಥನಾ ಸಂಗಮ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಘಟಕದ ಅಧ್ಯಕ್ಷ ಇಕ್ಬಾಲ್ ಬಾಳಿಲ, ಅಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ನೂರೇ ಅಜ್ಮೀರ್ ಸಂಗಮವನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಪ್ರತಿನಿತ್ಯ ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದು, ಇದರ ಎರಡನೇ ವಾರ್ಷಿಕದ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ದುಆ ನೇತೃತ್ವವನ್ನು ಅಜ್ಮೀರ್ ಖ್ವಾಜಾ ಕುಟುಂಬ ಪರಂಪರೆಯ ಸೈಯದ್ ನಝ್ರೆ ಜಿಸ್ತಿ ತಂಙಳ್ ಹಾಗೂ ಪಾಣಕ್ಕಾಡ್ ರಶೀದಲಿ ಶಿಹಾಬ್ ತಂಙಳ್ ನೆರವೇರಿಸಲಿದ್ದಾರೆ.

ಕಾರ್ಯಕ್ರಮವನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಲಿಕುಟ್ಟಿ ಉಸ್ತಾದ್ ಉದ್ಘಾಟಿಸಲಿದ್ದು, ನೂರೇ ಅಜ್ಮೀರ್ ಸಾರಥಿ ವಲಿಯುದ್ದೀನ್ ಫೈಝಿ ಮಜ್ಲಿಸ್‌ಗೆ ನೇತೃತ್ವ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್, ಸಮಸ್ತ ಮುಶಾವರ ಸದಸ್ಯರಾದ ಬಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಉಸ್ಮಾನುಲ್ ಫೈಝಿ ತೋಡಾರ್, ಮಾಜಿ ಸಚಿವ ಯು.ಟಿ.ಖಾದರ್, ಮೌಲಾನಾ ಹಾಜಿ ಅಬ್ದುಲ್ ರಝಾಕ್ ಕಬಕ ಮಲೇಶ್ಯ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಪ್ರಮುಖರಾದ ಹುಸೈನ್ ದಾರಿಮಿ ರೆಂಜಲಾಡಿ, ಇಬ್ರಾಹೀಂ ಕೊಣಾಜೆ, ಇಮ್ತಿಯಾಝ್ ಇಡ್ಯಾ, ಅಬ್ದುಲ್ ಹಮೀದ್ ಕಣ್ಣೂರು ಉಪಸ್ಥಿತರಿದ್ದರು.

Similar News