ಶಾಸಕ ಯು.ಟಿ.ಖಾದರ್ ಕಾರು ಬ್ರೇಕ್ ಡೌನ್: ಅಪಾಯದಿಂದ ಪಾರು; ಕಂಪೆನಿಗೆ ದೂರು

Update: 2022-12-09 16:58 GMT

ಮಂಗಳೂರು, ಡಿ.9: ರಾಜ್ಯ ವಿಧಾನ ಸಭೆಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್‌ರ ಕಾರು ನಗರದ ಪಡೀಲ್ ಸಮೀಪ ಬ್ರೇಕ್ ಡೌನ್ ಆದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಯು.ಟಿ.ಖಾದರ್ ಅವರು ಬಿಕರ್ನಕಟ್ಟೆಯಿಂದ ಬಂಟ್ವಾಳದ ಬಂಟರ ಭವನಕ್ಕೆ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಟೊಯೊಟ ಕಂಪೆನಿಗೆ ಸೇರಿದ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಡೀಲ್ ಸಮೀಪ ಬ್ರೇಕ್ ಡೌನ್ ಆಯಿತು ಎಂದು ಕಾರನ್ನು ಚಲಾಯಿಸುತ್ತಿದ್ದ ಯು.ಟಿ.ಖಾದರ್‌ರ ಆಪ್ತ ಸಹಾಯಕರೂ ಆಗಿರುವ ಲಿಬ್ಝಿತ್ ತಿಳಿಸಿದ್ದಾರೆ.

ಪಡೀಲ್‌ನಿಂದ ಸ್ವಲ್ಪ ಮುಂದೆ ಚಲಿಸುತ್ತಿದ್ದಂತೆಯೇ ಕಾರಿನ ಬ್ರೇಕ್ ತಕ್ಷಣಕ್ಕೆ ನಿಯಂತ್ರಣಕ್ಕೆ ಸಿಗಲಿಲ್ಲ. ಆದರೂ ಕಾರನ್ನು ನಿಯಂತ್ರಣಕ್ಕೆ ತರಲಾಯಿತು. ಕಾರಲ್ಲಿದ್ದ ಯು.ಟಿ.ಖಾದರ್ ಅಪಾಯದಿಂದ ಪಾರಾಗಿದ್ದಾರೆ. ಅಲ್ಲದೆ ಅವರು ಬೇರೆ ವಾಹನ ಮೂಲಕ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಎಂದು ಮಾಹಿತಿ ನೀಡಿದ್ದಾರೆ.

ನಾಲ್ಕು ದಿನದ ಹಿಂದೆ ಟೊಯೊಟ ಕಂಪೆನಿಯ ಮಂಗಳೂರು ಶೋರೂಮ್‌ನಲ್ಲಿ ಕಾರನ್ನು ಸರ್ವಿಸ್ ಮಾಡಿಸಲಾಗಿತ್ತು. ಆದಾಗ್ಯೂ ಕಾರು ಬ್ರೇಕ್ ಡೌನ್ ಆಗಿದೆ. ತಕ್ಷಣ ಶೋರೂಮ್‌ನವರಿಗೆ ಮಾಹಿತಿ ನೀಡಲಾಯಿತು. ಬ್ರೇಕ್ ಆಯಿಲ್ ಲೀಕ್ ಇದೆ ಎಂದು ತಿಳಿಸಿದ್ದಾರೆ. ಸರ್ವಿಸ್ ಮಾಡಿದ ನಾಲ್ಕು ದಿನದಲ್ಲೇ ಆಯಿಲ್ ಲೀಕ್ ಆಗುವ ಸಾಧ್ಯತೆ ಕಡಿಮೆ. ಹಾಗಾಗಿ ಈ ಬಗ್ಗೆ ಟೊಯೊಟ ಕಂಪೆನಿಗೆ ದೂರು ನೀಡಲಾಗುವುದು ಎಂದು ಲಿಬ್ಝಿತ್ ತಿಳಿಸಿದ್ದಾರೆ.

Similar News