ಧಮ್, ತಾಕತ್ತಿದ್ದರೆ ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಕ್ರಮ ವಹಿಸಲಿ: ಮುಖ್ಯಮಂತ್ರಿಗೆ ಶಾಸಕ ಯು.ಟಿ.ಖಾದರ್ ತಾಕೀತು

Update: 2022-12-09 11:48 GMT

ಮಂಗಳೂರು, ಡಿ.9: ಕರ್ನಾಟಕ- ಮಹಾರಾಷ್ಟ್ರದ ಗಡಿ ಭಾಗವಾದ ಬೆಳಗಾವಿಯಲ್ಲಿ ಕನ್ನಡಿಗರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಮೌನ ವಹಿಸಿದ್ದಾರೆ. ಇತರರಿಗೆ ಹೇಳುವ ಅವರು ಧಮ್, ತಾಕತ್ತಿದ್ದರೆ ಮುಖ್ಯಮಂತ್ರಿ ದಿಟ್ಟ ಹೇಳಿಕೆ ನೀಡಲಿ ಎಂದು ಶಾಸಕ ಹಾಗೂ ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವರನ್ನು ನೇಮಕ ಮಾಡುವ ಮೂಲಕ ಕನ್ನಡಿಗರನ್ನು ಕೆಣಕಿಸುವ ಪ್ರಯತ್ನ ಮಾಡಲಾಗುತ್ತಿದ್ದು, ರಾಜಕೀಯ ಉದ್ದೇಶದಿಂದ ಈ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದರು.

ಮಹಾರಾಷ್ಟ್ರದಲ್ಲಿಯೂ ಬಿಜೆಪಿ ನೇತೃತ್ವದ ಸರಕಾರವಿದೆ. ಹಾಗಿರುವಾಗ ಮುಖ್ಯಮಂತ್ರಿ ದಿಟ್ಟ ಉತ್ತರ ನೀಡಲು ಯಾಕೆ ಆಗುವುದಿಲ್ಲ? ಡಬಲ್ ಇಂಜಿನ್ ಸರಕಾರ ಎಂದು ಹೇಳಿಕೊಳ್ಳುವ ಬಿಜೆಪಿ ಸರಕಾರಕ್ಕೆ ಬುಲ್ಡೋಜರ್ ಮಾಡುವುದು ಮಾತ್ರ ಗೊತ್ತಿರುತ್ತದೆ. ಆದರೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಇಂಜಿನ್ ಆಫ್ ಅಗಿ ಬಿಡುತ್ತದೆ.  ಕನ್ನಡಿಗರ ಮೇಲೆ ಈ ರೀತಿ ದಬ್ಬಾಳಿಕೆ ನಡೆಯುತ್ತಿದ್ದರೂ ಕೇಂದ್ರ ಪ್ರತಿಕ್ರಿಯೆ ನೀಡದಿರುವುದು ಕನ್ನಡಿಗರಿಗೆ ಮಾಡುವ ದ್ರೋಹ. ಒಂದು ದೇಶ ಒಂದು ಕಾನೂನು ಎಂದು ಹೇಳುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಈ ವಿಷಯದಲ್ಲಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಖಾದರ್ ಪ್ರಶ್ನಿಸಿದರು.

ಕೇಂದ್ರ ಸರಕಾರ ಈ ಬಗ್ಗೆ ಮಧ್ಯಸ್ಥಿಕೆ ವಹಿಸಿ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿಲ್ಲ. ಪರಿಸ್ಥಿತಿ ಇನ್ನಷ್ಟು ಹದಗೆಡುವ ಮೊದಲು ಮುಖ್ಯಮಂತ್ರಿ ಈ ಬಗ್ಗೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ರಾಜ್ಯದ ಜನತೆ, ಗಡಿ ಪ್ರದೇಶದ ಜನರಿಗೆ ಧೈರ್ಯ ತುಂಬುವ ಕೆಲಸ ಆಗಬೇಕು ಎಂದು ಖಾದರ್ ಆಗ್ರಹಿಸಿದರು.

ಗುಜರಾತನ್ನು ಪ್ರತಿನಿಧಿಸುವವರೇ ದೇಶದ ಪ್ರಧಾನಿಯಾಗಿರುವಾಗ ಭಾವನಾತ್ಮಕ ವಿಚಾರ ಸಹಜ. ಹಾಗಾಗಿ ಅಲ್ಲಿ ಗೆಲುವು ದೊರಕಿದೆ. ಆಪ್ ಹಾಗೂ ಇತರ ಪಕ್ಷದಿಂದಲೂ ಕಾಂಗ್ರೆಸ್‌ಗೆ ಹಿನ್ನಡೆ ಆಗಿರುವುದು ಹೌದು. ಆದರೆ ಕಾಂಗ್ರೆಸ್‌ಗೆ ಹಿಮಾಚಲ ಪ್ರದೇಶದಲ್ಲಿ ಸ್ಪಷ್ಟ ಬಹುಮತ ದೊರಕಿದೆ. ದೇಶದ ವಿವಿಧ ಕಡೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಅದರ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.

ಬಿಜೆಪಿಯ ವೈಫಲ್ಯವನ್ನು ಮುಂದಿಟ್ಟು ರಾಜ್ಯದಲ್ಲಿ ಮುಂದಿನ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದೆ ಎಂದು ಹೇಳಿದ ಅವರು, ಪಕ್ಷದ ಎಲ್ಲಾ ನಾಯಕರು ಬಿ.ಆರ್. ಅಂಬೇಡ್ಕರ್ ಹಾಗೂ ಗಾಂಧಿ ಚಿಂತನೆಯಡಿ ಒಂದಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಉಳಿದೆಲ್ಲಾ ವಿಚಾರವೂ ಸಣ್ಣದು ಎಂದು ಹೇಳಿದರು.

ಗುಜರಾತ್ ಮಾದರಿ ಮಾಡುವುದಾಗಿ ಹೇಳಿರುವ ರಾಜ್ಯದ ಬಿಜೆಪಿ ನಾಯಕರು, ಅಲ್ಲಿನಂತೆ 42 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನೀಡದಿರುವಂತೆ ರಾಜ್ಯದಲ್ಲಿಯೂ ಆ ಮಾದರಿಯನ್ನು ಮಾಡಲಿ ಎಂದು ಖಾದರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿದ್ದರಾಮಯ್ಯರನ್ನು ಅನ್ನ ರಾಮಯ್ಯ, ದಲಿತ ರಾಮಯ್ಯ ಎಂದು ಅಭಿಮಾನದಿಂದ ಕರೆಯುತ್ತಾರೆ. ಹಾಗಾಗಿ ಯಾರೇನೂ ಕರೆದರೂ ಚಿಂತಿಸಬೇಕಾಗಿಲ್ಲ. ಹೆಸರಿಗಿಂತಲೂ ವ್ಯಕ್ತಿತ್ವ ಮುಖ್ಯ. ಬಿಜೆಪಿ ಜನಸಾಮಾನ್ಯರಿಂದ ಸಂಪರ್ಕ ಕಡಿದುಕೊಂಡಿದೆ. ಹಾಗಾಗಿ ಈ ರೀತಿ ವರ್ತಿಸುತ್ತಿದೆ. ಸಿಟಿ ರವಿಯಂತಹ ಬಿಜೆಪಿ ನಾಯಕರ ಮಟ್ಟಕ್ಕೆ ಕಾಂಗ್ರೆಸ್ ಹೋಗುವುದಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.

ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಗೂಂಡಾಗಿರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರಕಾರ ಗೂಂಡಾಗಳ ಕೈಗೆ ಅಧಿಕಾರ ನೀಡಿ ಮೌನವಾಗಿದೆ. ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಕಾರ್ಯವೂ ಗೂಂಡಾಗಳಿಂದ ನಡೆಯುತ್ತದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಮುಖಂಡರಾದ ಸದಾಶಿವ ಉಳ್ಳಾಲ್, ಚೇತನ್ ಬಂಗ್ರೆ, ಲಾರೆನ್ಸ್ ಡಿಸೋಜಾ, ನಿತ್ಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

Similar News